ವಿಶಿಷ್ಟ ಶ್ಲೋಕಗಳು ೨
*ಸಂಸ್ಕೃತ ಸಾಹಿತ್ಯದ ಕೆಲವು ವಿಶಿಷ್ಟ ಶ್ಲೋಕಗಳು* ಭಾಗ 2
*शङ्खे तैले तथा मांसे वैद्ये ज्योतिषिके द्विजे । यात्रायां पथि निद्रायां महच्छब्दो न दीयते ।।*
_ಯಾವುದನ್ನೆಲ್ಲ *ಮಹಾನ್* ಎಂದು ವ್ಯವಹರಿಸಬಾರದು ಎಂಬುದನ್ನು ಹೇಳುವ ಶ್ಲೋಕ. ಶಂಖ ಎಷ್ಟೇ ದೊಡ್ಡದಾಗಿರಲಿ, ಸಣ್ಣಗಿರಲಿ ಅಥವಾ ಬಲಮುರಿ ಎಡಮುರಿ ಏನೇ ಇರಲಿ ಶಂಖದ ಪಾವಿತ್ರ್ಯ ಒಂದೇ ಬಗೆ. ಭಗವಂತನ ಪೂಜೆಗೆ ಅದು ಯೋಗ್ಯವಾದುದೇ ಆಗಿದೆ. ಹಾಗಿದೆ ಮಹಾಶಂಖ ಎಂದು ಹೇಳಬಾರದು. ದೇವಪೂಜೆಗೆ ಬಳಸುವ ಎಣ್ಣೆ. ತೈಲ ಶಬ್ದವು ವಿಶೇಷವಾಗಿ ಎಳ್ಳೆಣ್ಣೆಯನ್ನು ಹೇಳುತ್ತದೆ. ಅದರ ಬಗೆಗೂ ಮಹಾ ಎಂಬ ಪ್ರಯೋಗ ಸರಿಯಲ್ಲ. ತೈಲ ತೆಗೆಯುವುದು ಸಣ್ಣ ಎಳ್ಳಿನಿಂದ. ಲಕ್ಷಗಟ್ಟಲೆ ಎಳ್ಳುಗಳನ್ನು ಗಾಣಕ್ಕೋ ಯಂತ್ರಕ್ಕೋ ಹಾಕಿ ತಿರುವಿದಾಗ ಒಂದಷ್ಟು ಎಣ್ಣೆ ಉಂಟಾಗುತ್ತದೆ. ಅಲ್ಲಿ ಪ್ರಮಾಣಕ್ಕಿಂತ ಪರಿಶ್ರಮಕ್ಕೆ ಮಹತ್ವ. ಮಾಂಸ ಯಾವ ಪಶು ಅಥವಾ ಪಕ್ಷಿಯದ್ದಾಗಿರಲಿ ಅದು ಹಿಂಸೆಯಿಂದ ಕೂಡಿದ ವಿಷಯ. ಅಲ್ಲೂ ಮಹಾಮಾಂಸ ಎಂಬ ಪ್ರಯೋಗ ಸರಿಯಲ್ಲ. ಭವದ ರೋಗ ನಿವಾರಕನಾದ ವೈದ್ಯನು ಸಾಕ್ಷಾತ್ ದೇವನು. ಅವನು ಖ್ಯಾತನಾಗಿರಲಿ ಎಲ್ಲೋ ಮರೆಯಲ್ಲಿರಲಿ ಅವನ ಕರ್ತವ್ಯ ದೊಡ್ಡದೇ ಸರಿ. ಹಾಗಾಗಿ ಇವನು ಮಹಾ ವೈದ್ಯ ಇವನು ಅಲ್ಪ ಎಂಬ ಹೋಲಿಕೆ ಸಲ್ಲದು. ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯವನ್ನು ಸಂಸ್ಕೃತದ ಜೊತೆಗೆ ಅಭ್ಯಸಿಸಿದ ಜ್ಯೋತಿಷಿ ಬಹಳ ಪರಿಶ್ರಮಿ. ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಇರುವ ಸುಮಾರು ಹತ್ತು ಸಾವಿರ ಶ್ಲೋಕಗಳು ಅರ್ಥ ಸಹಿತ ಕಂಠಸ್ಥವಾಗಿದ್ದರೆ ಅವನು ಜ್ಯೋತಿಷಿ. ಅವನ ಕಾರ್ಯವೇ ಮಹಾನ್ ಆಗಿರುವಾಗ ಮತ್ತೆ ಮಹಾನ್ ಎನ್ನುವುದು ಸರಿಯಲ್ಲ. ಉಪನಯನದ ಮೂಲಕ ವಿದ್ಯೆಯನ್ನು ಪಡೆಯಲು ಹೋಗಿ ವಿದ್ಯೆಯಿಂದಾಗಿ ತನ್ನ ಕರ್ಮಗಳನ್ನು ಕಳಚಿಕೊಳ್ಳುತ್ತಾ ಮೋಕ್ಷದೆಡೆಗೆ ಲೋಕೋದ್ಧಾರಕ್ಕೆ ಪ್ರಯತ್ನಿಸುವ ದ್ವಿಜನು ಮಹಾವ್ಯಕ್ತಿಯೇ ಸರಿ, ಮತ್ತೆ ಮಹಾದ್ವಿಜ ಎಂಬ ಪ್ರಯೋಗ ಸಲ್ಲದು. ಸಣ್ಣ ತೀರ್ಥಕ್ಷೇತ್ರವಿರಲಿ ದೊಡ್ಡದಿರಲಿ ಕ್ಷೇತ್ರವೆಂದಾಗಬೇಕಾದರೆ ಭಗವಂತನ ಸಾನ್ನಿಧ್ಯ ಹಾಗೂ ಒಂದಷ್ಟು ಪಾವಿತ್ರ್ಯ ಇದ್ದೇ ಇರುತ್ತದೆ. ಹಾಗಾಗಿ ಯಾತ್ರೆಯು ಎಂದೂ ಮಹತ್ತೇ. ಕೇವಲ ಪ್ರಯಾಣ ಎಂದು ಪರಿಗಣಿಸಿದರೂ ಅದು ಕಿಂಚಿತ್ತಾದರೂ ಕಷ್ಟ ಕರ. ಹಾಗಾಗಿ ಮಹತ್ ಅಲ್ಪ ಭೇದ ಸಲ್ಲ. ಅರೆಘಳಿಗೆಯ ನಿದ್ರೆಯಿರಲಿ ಕುಂಭಕರ್ಣನ ನಿದ್ರೆಯಿರಲಿ ಅದರ ಸವಿ ಮಾಡಿದವನೇ ಬಲ್ಲ. ಈ ಎಲ್ಲಾ ವಿಷಯಗಳನ್ನು ಹೇಳುವಾಗ ಮಹಾ ಎಂಬ ವಿಶೇಷಣ ಬೇಡ ಎಂಬ ಭಾವ. ದೇವುಡು ನರಸಿಂಹಶಾಸ್ತ್ರಿಗಳು ಕ್ಷತ್ರಿಯನಾಗಿದ್ದ ಕೌಶಿಕನು ಬ್ರಾಹ್ಮಣನಾದ ಕಾರಣ ಹೀಗೆ ಬಳಸಿರಬಹುದು._
http://shreenidhiabhyankar.blogspot.in/
ಸಂಗ್ರಹ ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ