ಚಾರುದತ್ತ ೭

👳ಚಾರುದತ್ತ  ಬೆಳಕು-೬🌞

*किं वासुदेवः शवपत्तनेशः कुन्तीसुतो वा जनमेजयो वा । अहं त्वां गृहीत्वा केशहस्ते दुःशासनः सीतामिवाहरामि ।।*

_ವೇಶ್ಯಾಪುತ್ರಿ ಸುಂದರಿ ವಸಂತಸೇನೆ ಮನದ ಪ್ರಿಯನಾದ ಚಾರುದತ್ತನನ್ನು ಭೇಟಿಯಾಗಲು ಬಂದಾಗ ವಿಟ ಹಾಗೂ ಶಕಾರನ ಕಣ್ಣಿಗೆ ಬಿದ್ದಿದ್ದಾಳೆ‌. ಸಖಿಯರು ಮಿತ್ರರು ಯಾರೂ ಹತ್ತಿರ ಇಲ್ಲ. ಇವರ ಕಾಟಕ್ಕೆ ಹೆದರಿ ಅವಳು ಫೇರಿ ಕಿತ್ತಿದ್ದಾಳೆ. ಆಗ ಶಕಾರನಾಡುವ ಮಾತು. ಈ ಶ್ಲೋಕದಲ್ಲಿ ಮಹಾಭಾರತದ ಪ್ರಮುಖ ಪಾತ್ರಗಳನ್ನು ನೆನೆದ ರೀತಿ ಚೆನ್ನಾಗಿದೆ. ಎಲೇ ಎಲ್ಲಿಗೆ ಓಡುವೆ, ನಿನ್ನನ್ನು ಕಾಪಾಡಲು ಏನು ಆ ಶ್ರೀಕೃಷ್ಣನು ಬಂದಾನೋ? ಅಥವಾ ಶವಪಟ್ಟಣದ ಒಡೆಯನಾದ ಯಮನ ಅಂಶಭೂತನಾದ ಧರ್ಮರಾಜನು ಬಂದಾನೋ? ಅಥವಾ ಕುಂತೀಸುತನಾದ ಪರಾಕ್ರಮಿಯಾದ  ಕರ್ಣನೋ - ಅರ್ಜುನನೋ ಬರುವನೇ? ಅಥವಾ ಅವರ ವಂಶದ ಕೊನೆಯ ಕೊಂಡಿಯಾದ ಜನಮೇಜಯನಾದರೂ ಬರುವನೇ? ಇಲ್ಲ ಬಿಡು. ಯಾರೊಬ್ಬರೂ ಈಗ ನಿನ್ನ ನೆರವಿಗೆ ಬರಲಾರರು. ಸೀತೆಯನ್ನು ದುಃಶಾಸನನು ಮುಡಿ ಹಿಡಿದು ಎಳೆದೊಯ್ಯುವ ತರದಿ ದರದರನೆ ಎಳೆದೊಯ್ಯುವೆ? ಯಾರಿರುವರು ನನ್ನ ತಡೆಯಲು! ನನ್ನ ಪರಾಕ್ರಮದ ಎದುರು ವಾಸುದೇವನಾಗಲಿ ಅವನ ಪ್ರಾಣವಾದ ಪಾಂಡವರಿರಲಿ ಅಥವಾ ಅವರ ವಂಶದವನಾಗಲಿ ಯಾರೂ ನಿಲ್ಲಲಾರರು ಎಂಬ ಭಾವ. ಹಾಸ್ಯಗಾರರಿಗೆ ಮಾತಿನಲ್ಲಿ ಸಿದ್ಧಸೂತ್ರ ಇರುವುದಿಲ್ಲ. ಅವರ ಮಾತೇ ವಿಚಿತ್ರವಾಗಿರಬೇಕು. ಸಂಸ್ಕೃತ ನಾಟಕಗಳಲ್ಲಿ ಬರುವ ಶಕಾರನ ಮಾತುಗಳೇ ಹಾಗೆ. ವಸ್ತುತಃ ದ್ರೌಪದಿಯನ್ನು ಎಳೆದೊಯ್ಯುವ ವ್ಯಕ್ತಿ ದುಃಶಾಸನ. ಆದರೆ ಶಕಾರನಿಗಿಲ್ಲಿ ಸೀತೆಯ ಅಪಹಾರಕನಾಗಿ ತೋರಿದ್ದಾನೆ. ಸೀತೆಯ ಅಪಹಾರಕ ರಾವಣ ಕಂಡೇ ಇಲ್ಲ. ಶಕಾರನ ಮಾತುಗಾರಿಕೆ ಹೇಗಿರಬೇಕೆಂಬುದಕ್ಕೆ ಒಂದು ಶ್ಲೋಕವಿದೆ-_ *ಅಪಾರ್ಥಮಕ್ರಮಂ ವ್ಯರ್ಥಂ ಪುನರುಕ್ತಂ ಹತೋಪಮಮ್, ಲೋಕನ್ಯಾಯವಿರುದ್ಧಂಚ ಶಕಾರವಚನಂ ವಿದುಃ*
_ಈ ಮಾತಿನಂತೆ ಅಪಾರ್ಥ ಕೊಡುವ ಮಾತುಗಳು, ತಲೆಯಿಂದ ಎಂದು ವರ್ಣಿಸುವ ಬದಲು ಅಕ್ರಮವಾಗಿ ಕಾಲಿನಿಂದ ವರ್ಣಿಸುವುದು, ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು, ಕೆಟ್ಟ ಉಪಮೆ ಕೊಡುವುದು, ( ಉತ್ತಮ ಮಾತುಗಾರಿಕೆಯನ್ನು ಬೇಟೆನಾಯಿಯ ಬೊಗಳುವಿಕೆ ಹೋಲಿಸಿದಂತೆ) , ಲೋಕದ ವ್ಯವಸ್ಥೆಯ ವಿರುದ್ಧವಾದದ್ದನ್ನೇ ಹೇಳುವುದು ಇವೆಲ್ಲವೂ ಅವನ ಲಕ್ಷಣಗಳು. ಇಲ್ಲಿ ಗಮನಿಸಬೇಕಾದ ಅಂಶ ಅಶ್ಲೀಲತೆ ಅಥವಾ ವೈಯಕ್ತಿಕ ನಿಂದೆಗೆ ಅವಕಾಶ ಇಲ್ಲ. ಹಾಸ್ಯ ಮಾಡಲೂ ಒಂದು ಚೌಕಟ್ಟು ಇದೆ. ಶವಪತ್ತನೇಶ ಎನ್ನುವಲ್ಲಿ ಯಮನೂ ನರಕದೊಡೆಯ. ಶಿವನೂ ಶ್ಮಶಾನವಾಸಿ ಅಥವಾ ಒಡೆಯ. ಹೀಗೆ ಕವಿ ಅಲ್ಲೂ ನಮಗೆ ಸಂದರ್ಭಕ್ಕೆ ಬೇಕಾದ ಅರ್ಥ ಸ್ವೀಕರಿಸಿ ಎಂದು ಜಾಣ್ಮೆ ಮೆರೆದಿದ್ದಾನೆ._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩