ರಾಮಾಯಣ ೧೧೯

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೯

*ವಿಂಶತಿರ್ದಶಚಾಷ್ಟೌ ಚ ತೂಣ್ಯೋಸ್ಯ ರಥಮಾಸ್ಥಿತಾಃ ಕಾರ್ಮುಕಾಣಿ ಚ ಭೀಮಾನಿ ಜ್ಯಾಶ್ಚ ಕಾಂಚನಪಿಂಗಲಾಃ*
*ದ್ವೌ ಚ ಖಡ್ಗೌ ರಥಗತೌ ಪಾರ್ಶ್ವಸ್ಥೌ ಪಾರ್ಶ್ವಶೋಭಿತೌ ಚತುರ್ಹಸ್ತತ್ಸರುಯುತೌ ವ್ಯಕ್ತಹಸ್ತದಶಾಯತೌ*

_ಅತಿಕಾಯನ ಆಯುಧಗಳ ವರ್ಣನೆ. ಇಪ್ಪತ್ತು, ಹತ್ತು, ಎಂಟು ಒಟ್ಟಿಗೆ ಮೂವತ್ತೆಂಟು ಬತ್ತಳಿಕೆಗಳು ಆ ರಥದಲ್ಲಿ ಕಾಣುತ್ತಿವೆ. ಭೀಕರವಾದ ಧನುಸ್ಸುಗಳು, ಬಂಗಾರದ ಬಣ್ಣದ ಹೆದೆಗಳು ಹೀಗೆ ಅವನ ಆಗಮನದ ನೋಟವೇ ಭೀಕರವಾಗಿತ್ತು. ಸಂಸ್ಕೃತ ಭಾಷೆಯಲ್ಲಿ ಅಂಕೆಗಳನ್ನು ಹೇಳುವಾಗ ಬಳಸುವ ಒಂದು ವಿಶಿಷ್ಟ ವಿಧಾನವಿದು. ಮೂವತ್ತೆಂಟು ಎಂಬುದನ್ನು ಒಮ್ಮೇಲೆ ಹೇಳದೆ ಎರಡು ಮೂರು ಅಂಕೆಗಳನ್ನು ಸೇರಿಸಿ ಹೇಳುವುದು. ಇನ್ನೊಂದು ರೀತಿಯಲ್ಲಿ ಏಳನ್ನು ಎರಡಾಗಿಸಿ ಐದನ್ನು ನಾಲ್ಕಾಗಿಸಿ ಮೂರನ್ನು ಹತ್ತಾಗಿಸಿ ಎಂದೂ ಹೇಳುತ್ತಾರೆ. ಒಂದೊಂದು ಭಾಷೆಯ ವೈಶಿಷ್ಟ್ಯ ಸಾವಿರಾರು ಬಗೆ. ಅದೇ ತರಹದ ವೈಶಿಷ್ಟ್ಯ ಇಲ್ಲಿದೆ. ಇನ್ನು ಅವನ ಬಳಿಯಿದ್ದ ಕತ್ತಿಯ ವರ್ಣನೆ ನೋಡಿ- ಒಂದೊಂದು ಕತ್ತಿ ಹತ್ತು ಮೊಳದಷ್ಟು ಉದ್ದ. ಅವುಗಳ ಹಿಡಿಗಳು ನಾಲ್ಕು ನಾಲ್ಕು ಮೊಳ ಉದ್ದವಾಗಿವೆ. ಒಂದು ಮೊಳ ಅಂದರೆ ನಮ್ಮ ಒಂದು ಕೈಯಷ್ಟು ಉದ್ದ. ಹತ್ತು ಮೊಳ ಅಂದರೆ ಒಂದು ಸಣ್ಣ ಮರದಷ್ಟು ಉದ್ದ ಇತ್ತು ಅವನ ಕತ್ತಿಗಳು. ಹಾಗಾದರೆ ಅಂತಹ ಕತ್ತಿ ಹಿಡಿಯುವ ಅವನ ಆಕಾರ ಎಷ್ಟಿದ್ದಿರಬಹುದು! ವಾಲ್ಮೀಕಿಗಳು ಅವನ ಆಕಾರದ ಬಗ್ಗೆ ಹೆಚ್ಚು ಹೇಳದೆ ಇಂತಹ ಅವನ ಸಾಮಗ್ರಿಗಳಿಂದ ನೀವೇ ಊಹಿಸಿಕೊಳ್ಳಿ ಎನ್ನುತ್ತಾರೆ‌. ಅತಿಕಾಯ ಎಂದರೆ ಅವನ ಕಾಯ ಅಂದಾಜು ಐದು ಜನರ ಕಾಯದಷ್ಟಿತ್ತು. ಆಗ ಮಾತ್ರ ಅಂತಹ ಕತ್ತಿ ಹಿಡಿಯಲು ಸಾಧ್ಯ. ಅವನ ಧನುಸ್ಸು ಸಾಮಾನ್ಯರ ಧನುಸ್ಸಿನಂತೆ ಇದ್ದರೆ ಅವನಿಗೆ ಅದು ಯುದ್ಧ ಮಾಡಲು ಸಹಕಾರಿ ಆಗದೇ ತೊಂದರೆ ಆದೀತು. ಹಾಗಾಗಿ ಆಯುಧಗಳು ಹಾಗೂ ಅವನ ವಸ್ತ್ರಾದಿಗಳು ಅವನಿಗೋಸ್ಕರ ಹೇಳಿ ತಯಾರು ಮಾಡಿದ್ದಿರಬಹುದು._

*ಅಶ್ವಪೃಷ್ಠೇ ರಥೇ ನಾಗೇ ಖಡ್ಗೇ ಧನುಷಿ ಕರ್ಷಣೇ ಭೇದೇ ಸಾಂತ್ವೇ ಚ ದಾನೇ ಚ ನಯೇ ಮಂತ್ರೇ ಚ ಸಂಮತಃ*

_ವಿಭೀಷಣನು ರಾಮನಿಗೆ ಅವನ ಪರಿಚಯ ಮಾಡಿಕೊಡುತ್ತಾ ರಾವಣನ ಮಡದಿ ಧಾನ್ಯಮಾಲಿನಿಯ ಮಗನೆಂದು ಹೇಳುತ್ತಾನೆ. ಅವನು ಕಲಿತ ವಿದ್ಯೆಗಳ ಬಗೆಗೂ ಹೇಳುತ್ತಾನೆ. ಅಶ್ವಾರೋಹ, ಗಜಾರೋಹ, ರಥವಿದ್ಯೆ, ಖಡ್ಗ ಯುದ್ಧ, ಧನುರ್ಯುದ್ಧ, ಪಾಶಪ್ರಯೋಗ, ಸಾಮ-ದಾನ-ಭೇದ ಉಪಾಯಗಳಲ್ಲೂ ನಿಸ್ಸೀಮ‌. ಕಪಟಯುಕ್ತಿ ಹಾಗೂ ಮಂತ್ರಾಲೋಚನೆಯಲ್ಲೂ ನಿಪುಣನಿವನು ಎನ್ನುತ್ತಾನೆ‌‌. ರಾವಣ ತಾನು ಅಸಾಮಾನ್ಯನಾದರೂ ತನ್ನ ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ಸಾಕಷ್ಟು ಗಮನ ಕೊಟ್ಟಿದ್ದ. ಈ ಅತಿಕಾಯನು ಕಲಿತ ವಿದ್ಯೆ ನೋಡಿದರೆ ಈಗಿನ ರಾಷ್ಟ್ರೀಯ ರಕ್ಷಣಾ ವಿಶೇಷ ತಜ್ಞರ ಸಣ್ಣ ಗುಂಪಿನಲ್ಲಿಯೂ ಇಂತಹ ವ್ಯಕ್ತಿಗಳಿರುವುದು ಅಸಾಧ್ಯ. ಕೇವಲ ಯುದ್ಧ ಮಾಡಲು ಮಾತ್ರವಲ್ಲದೆ, ಬೌದ್ಧಿಕ ಕೆಲಸಗಳಾದ ಸಾಮಾದಿ ಉಪಾಯಗಳಲ್ಲೂ ನಿಷ್ಣಾತನೆಂದು ವಿಭೀಷಣನೇ ವರ್ಣಿಸುವಾಗ ಆಶ್ಚರ್ಯ ಎನಿಸುತ್ತದೆ. ಎಷ್ಟು ಕಲಿತರೂ ಕಡಿಮೆಯೇ ಎನ್ನುವ ಮನೋಭಾವ ಕಲಿಯುವವರಿಗೂ ಪೋಷಕರಿಗೂ ಇಂತಹ ವ್ಯಕ್ತಿಗಳನ್ನು ನೋಡಿದಾಗ ತಿಳಿಯುತ್ತದೆ. ಶ್ರೀಮಂತರು, ಉನ್ನತಸ್ಥಾನದಲ್ಲಿನ ವ್ಯಕ್ತಿಗಳ ಮಕ್ಕಳು ಸಾಮಾನ್ಯವಾಗಿ ಒಳ್ಳೆಯ ವಿದ್ಯೆ ಸಂಪಾದಿಸುವುದಕ್ಕಿಂತ ಹೆಚ್ಚು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವ ಈ ಕಾಲದಲ್ಲಿ ರಾವಣನ ಮಕ್ಕಳ ವಿದ್ಯಾಭ್ಯಾಸ ನೋಡಿಯಾದರೂ ಅಂತಹವರು ಕಲಿಯುವುದು ಉತ್ತಮ. ರಾವಣನ ಉಳಿದ ಗುಣಗಳನ್ನು ಹೇಗೂ ಅನುಸರಿಸುತ್ತಾರೆ‌._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩