ರಾಮಾಯಣ ೧೧೭

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೭

*ಯದ್ಯಹಂ ಭ್ರಾತೃಹಂತಾರಂ ನ ಹನ್ಮಿ ಯುಧಿ ರಾಘವಮ್. ನನು ಮೇ ಮರಣಂ ಶ್ರೇಯೋ ನ ಚೇದಂ ವ್ಯರ್ಥಜೀವಿತಮ್*

_ರಾವಣನ ಮಾತು. ತಮ್ಮನು ಅಳಿದುದನ್ನು ಅರಿತ ಅವನು ದುಃಖಿಸುತ್ತಿದ್ದಾನೆ. ಅವನಿಲ್ಲದ ಬದುಕು ನನಗೆ ಬದುಕೇ ಅಲ್ಲ. ಬದುಕಲು ಎನಗೆ ಇಚ್ಛೆಯೂ ಇಲ್ಲ. ಆ ನನ್ನ ತಮ್ಮನನ್ನು ಕೊಂದ ರಾಮನ ಬಲಿ ಪಡೆಯದೇ ಹೋದನಾದರೆ ನಾನು ಸತ್ತುಹೋಗುವುದೇ ಕ್ಷೇಮ. ವ್ಯರ್ಥವಾಗಿ ಬದುಕುವುದಕ್ಕಿಂತ ತಮ್ಮನಿರುವ ತಾಣಕ್ಕೆ ಇಂದೇ ಹೊರಟುಬಿಡುವೆನು. ಸಹೋದರನನ್ನು ಕಳೆದುಕೊಂಡು ಒಂದು ಕ್ಷಣವೂ ಬದುಕಲಾರೆ. ಇಲ್ಲಿ ರಾವಣನು ದಕ್ಷಿಣ ಭುಜಃ ಎಂದು ಹೇಳಿದ್ದಾನೆ. ನನ್ನ ಬಲಗೈಯಂತಿದ್ದ ನಿನ್ನನ್ನು ಕಳೆದುಕೊಂಡು ಅನಾಥನಾದೆ. ಬದುಕಿಗೆ ಆಧಾರವಾಗಿ ಇರುವಂತಹ ವ್ಯಕ್ತಿಯ ಬಗೆಗೆ ಬಲಗೈಯಂತಿದ್ದ ಎನ್ನುವ ಪ್ರಯೋಗ ವಾಲ್ಮೀಕಿಗಳೇ ಮಾಡಿದ್ದಾರೆಂದರೆ ಬಹಳ ಪುರಾತನವಾದುದು. ಈಗಲೂ ಆ ಪ್ರಯೋಗ ಹಾಗೆಯೇ ಇರುವುದು ವಿಶೇಷ._

*ಯದಜ್ಞಾನಾನ್ಮಯಾ ತಸ್ಯ ನ ಗೃಹೀತಂ ಮಹಾತ್ಮನಃ ವಿಭೀಷಣವಚೋ ಯಾವತ್ ಕುಂಭಕರ್ಣಪ್ರಹಸ್ತಯೋಃ. ವಿನಾಶೋಯಂ ಸಮುತ್ಪನ್ನೋ  ಮಾಂ ವ್ರೀಡಯತಿ ದಾರುಣಃ ತಸ್ಯಾಯಂ ಕರ್ಮಣಃ ಪ್ರಾಪ್ತೋ ವಿಪಾಕೋ ಮಮ ಶೋಕದಃ*

_ವಿಭೀಷಣನ ಬುದ್ಧಿವಾದ ನನಗೀಗ ನೆನಪಾಗುತ್ತಿದೆ. ಆ ಮಹಾತ್ಮನ ಮಾತನ್ನು ನಾನು ಅಜ್ಞಾನದಿಂದ ಗ್ರಹಿಸದೇ ಹೋದೇನು. ವಿಭೀಷಣ ಕುಂಭಕರ್ಣ ಪ್ರಹಸ್ತ ಈ ಮೂವರ ಮಾತನ್ನೂ ಆಲಿಸದೇ ಭೀಕರವಾದ ಸರ್ವನಾಶ ಒದಗಿಬಂತು. ಇದರಿಂದ ನನ್ನ ಮೇಲೆ ನನಗೇ ನಾಚಿಕೆಯಾಗುವುದು. ಕವಿ ಇಲ್ಲಿ ರಾವಣನ ಒಳಬುದ್ಧಿಯನ್ನು ಸಹಜವಾಗಿ ತೆರೆದಿಟ್ಟಿದ್ದಾನೆ. ವಿಭೀಷಣನ ಮೇಲೆ ಅವನಿಗೆ ಇಂದಿಗೂ ಇರುವ ಪ್ರೀತಿ ಗೌರವ ಎಲ್ಲವೂ ಇಲ್ಲಿ ಸ್ಪಷ್ಟವಾಗಿದೆ. ಧಾರ್ಮಿಕ ವ್ಯಕ್ತಿಯನ್ನು ಮನೆಯಿಂದ ಹೊರಹಾಕಿದ ಪರಿಣಾಮವೇ ಇದು. ಆ ಕರ್ಮದ ಪಾಕವೇ ಇಂತಹ ಘಟನೆ. ರಾವಣನ ಕರ್ಮದ ಬಗೆಗಿನ ಯೋಚನೆ ಚೆನ್ನಾಗಿದೆ. ನಾವು ಅಧರ್ಮ ಆಚರಿಸುವುದಿರಲಿ, ಧರ್ಮವನ್ನಾಚರಿಸುವ ವ್ಯಕ್ತಿಯನ್ನು ಹೊರ ಹಾಕಿದರೆ ಅದೂ ಅಧರ್ಮದ ದಾರಿ ಹಿಡಿದಂತೆಯೇ ಸರಿ. ಅದರ ಪರಿಣಾಮ ಮತ್ತೆ ಕಷ್ಟ ನಷ್ಟ. ಹಾಗಾಗಿ ಧರ್ಮವನ್ನಾಚರಿಸುವ ವ್ಯಕ್ತಿಗಳನ್ನು ಗೌರವಿಸುವುದೂ ನಮ್ಮ ಕರ್ತವ್ಯ. ಅವರು ಬಂಧುಗಳಾಗಿರಲಿ ಏನೇ ಆಗಿರಲಿ ಧರ್ಮದ ದಾರಿ ಹಿಡಿದಿರುವರೆಂದರೆ ಗೌರವಾರ್ಹರೆಂದೇ ಭಾವ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩