ರಾಮಾಯಣ ೧೨೦
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೨೦
*ಬ್ರಹ್ಮದತ್ತವರೋ ಹ್ಯೇಷ ಅವಧ್ಯಕವಚಾವೃತಃ ಬ್ರಾಹ್ಮೇಣಾಸ್ತ್ರೇಣ ಭಿಂದ್ಯೇನಮೇಷ ವಧ್ಯೋಹಿ ನಾನ್ಯಥಾ. ಅವಧ್ಯ ಏಷ ಹ್ಯನ್ಯೇಷಾಮಸ್ತ್ರಾಣಾಂ ಕವಚೀ ಬಲೀ*
_ಅತಿಕಾಯನು ರಾಮನೆದುರು ಬಂದು ತನ್ನ ಪರಾಕ್ರಮವನ್ನು ಹೇಳಿಕೊಂಡಾಗ ಕೋಪಗೊಂಡ ಲಕ್ಷ್ಮಣನು ಅವನನ್ನು ಎದುರಿಸುತ್ತಾನೆ. ಇಲ್ಲಿ ಅತಿಕಾಯನ ಒಂದು ನಿಯಮ ಚೆನ್ನಾಗಿದೆ. ತನಗೆ ಸರಿಸಮಾನರಲ್ಲಿ ಮಾತ್ರ ಸೆಣಸುವೆನೆಂದು ಬಂದ ಅವನು ಕಪಿವೀರರನ್ನು ಖತಿಗೊಳಿಸದೇ ನೇರವಾಗಿ ರಾಮನನ್ನು ಎದುರುಗೊಳ್ಳುತ್ತಾನೆ. ಅವರೀರ್ವರ ನಡುವೆ ಭಯಂಕರ ಸಂಗ್ರಾಮ ನಡೆಯುತ್ತದೆ. ಅತಿಕಾಯನನ್ನು ಕೊಲ್ಲೆಂದು ಬೇರೆ ಬೇರೆ ಅಸ್ತ್ರಗಳನ್ನೂ ಶಸ್ತ್ರಗಳನ್ನಾ ಸಾವಿರಾರು ಸಂಖ್ಯೆಯಲ್ಲಿ ಪ್ರಯೋಗಿಸಿದರೂ ಅವೆಲ್ಲವೂ ನಿಷ್ಫಲವಾಗುತ್ತವೆ. ಆಗ ವಾಯುದೇವನು ಲಕ್ಷ್ಮಣನ ಬಳಿ ಸೂಕ್ಷ್ಮರೂದಿಂದ ಕಾಣಿಸಿಕೊಂಡು ಈ ಮಾತನ್ನು ಆಡುತ್ತಾನೆ. ಸೌಮಿತ್ರಿ, ಇವನು ಬ್ರಹ್ಮದತ್ತ ವರದ ಪ್ರಭಾವದಿಂದ ಅಭೇದ್ಯಕವಚ ಧರಿಸಿ ಮೆರೆಯುತ್ತಿದ್ದಾನೆ. ಇವನನ್ನು ಸಂಹರಿಸಲು ಬ್ರಹ್ಮಾಸ್ತ್ರವೊಂದೆ ದಾರಿ. ಬೇರೆ ಯಾವ ಅಸ್ತ್ರಗಳೂ ಕೆಲಸ ಮಾಡಲಾರವು. ಅತ್ಯಂತ ಬಲಶಾಲಿಯಾದ ಇವನಿಗೆ ಈಗ ಅದೊಂದೇ ದಾರಿ ಎಂದು. ವಾಯುವಿನ ವಚನದಂತೆ ಮನದಲ್ಲೇ ಧ್ಯಾನಿಸಿ ಸೌಮಿತ್ರಿಯು ಬ್ರಹ್ಮಾಸ್ತ್ರದ ಮೂಲಕ ಅವನನ್ನು ಸಂಹರಿಸುತ್ತಾನೆ. ಇಲ್ಲಿ ಗಮನಿಸಬೇಕಾದ ಒಂದು ಅಂಶ- ವಾಯುವಿನ ಅಂಶಜಾತನಾದ ಹನುಮನಿದ್ದರೂ ಸಾಕ್ಷಾತ್ ವಾಯುವೇ ಈ ವಿಷಯವನ್ನು ಅರುಹುತ್ತಾನೆ. ಹನುಮನು ಸಮೀಪದಲ್ಲಿದ್ದರೂ ಅವನಿಗೆ ಈ ವಿಷಯ ತಿಳಿದಿಲ್ಲ. ಮೂಲರೂಪದ ದೇವತೆಗೂ ಅನುಗ್ರಹದಿಂದ ಅಥವಾ ಅಂಶದಿಂದ ಹುಟ್ಟಿದ ದೇವತೆಯ ಜ್ಞಾನಕ್ಕೂ, ಸಾಮರ್ಥ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಎರಡೂ ಒಂದೇ ಆಗಲಾರದು. ಆರಾಧನೆಯ ಸಮಯದಲ್ಲೂ ಅದೇ ಹೆಸರಿನಿಂದ ಕರೆಯಬೇಕೆ ಹೊರತು ಮೂಲರೂಪದಿಂದಲ್ಲ. ಲಕ್ಷ್ಮಣನೂ ಭಗವಂತನ ಒಂದಂಶವಾದ್ದರಿಂದ ಅವನಿಗೆ ತಿಳಿದಿರಬೇಕಿತ್ತು ಎನ್ನುವುದು ಮಾನುಷರೂಪದಲ್ಲಿದ್ದಾಗ ಅಥವಾ ದೇಹಧಾರಿಯಾಗಿದ್ದಾಗ ಹೇಗೆ ಸಲ್ಲದೋ ಅದರಂತೆಯೇ ಹನುಮನ ವಿಷಯದಲ್ಲೂ ಕೂಡ ಇರಬಹುದು. ಅವತಾರದ ಕೊನೆಗೆ ಅಂಶವು ಸೇರಿಕೊಂಡು ಒಂದಾಗಿಹೋಗುವುದು. ಚಿರಂಜೀವಿತ್ವವು ಕೆಲವು ಕಲ್ಪಗಳವರೆಗೇ ಹೊರತು ಸಾವೇ ಇಲ್ಲ ಎಂಬುದಲ್ಲ. ದೇಹ ಧರಿಸಿದ ಮೇಲೆ ವಿಸರ್ಜಿಸಬೇಕಾದುದೇ ನಿಯಮ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ