ಚಾರುದತ್ತ ೬

👳ಚಾರುದತ್ತ  ಬೆಳಕು-೬🌞

*किं त्वं भयेन परिवर्तितसौकुमार्या नृत्तोपदेशविशदौ चरणौ क्षिपन्ती । उद्विग्नचञ्चलकटाक्षनिविष्टदृष्टिर्व्याघ्रानुसारचकिता हरिणीव यासि ।।*

_ವಿಟನು ವಸಂತಸೇನೆಗೆ ಆಡುವ ಮಾತು. ಭಾಷಾ ಸೌಂದರ್ಯ ಹಾಗೂ ವರ್ಣನೆಯ ಸಂದರ್ಭ ಸುಂದರವಾಗಿರುವ ಕಾರಣ ಈ ಶ್ಲೋಕ. ಶಕಾರ ಹಾಗೂ ವಿಟನನ್ನು ಕಂಡು ವಸಂತಸೇನೆ ಓಡೋಡಿ ಹೋಗುತ್ತಿರುವಳು. ಆಗ ಹೇಳುವ ನುಡಿ- ಎಲೆ ಬಾಲೆ, ಸಹಜವಾಗಿ ಮಂದಗಮನೆಯಾದ ನೀ ಏಕಿಂದು ವೇಗದರಸಿಯಾಗಿರುವೆ? ನಿನ್ನ ಸೌಕುಮಾರ್ಯವೇ ನಮ್ಮ ಕಣ್ಣ ಸೌಭಾಗ್ಯ‌. ಗಜದಂತೆ ಮೆಲುನಡಿಗೆಯಲ್ಲಿ ನಡೆ, ನೋಡಿ ಆನಂದಿಸುವೆವು. ಹೀಗೇಕೆ ಓಡುವೆ? ನಿನ್ನ ಹೆಜ್ಜೆಗಳು ನೃತ್ಯದ ಒಂದೊಂದು ಭಂಗಿಯನ್ನು ಉಪದೇಶಿಸುವಂತಿವೆ. ನಿರ್ದೋಷವಾದ ನೃತ್ಯದ ಕಲಿಕೆ ನಿನ್ನ ನಡಿಗೆಯಲ್ಲೇ ಅಂತರ್ಗತವಾಗಿದೆ. ಹಾಗಿರುವಾಗ ಶ್ರುತಿ ತಪ್ಪಿದ ಸಂಗೀತಗಾರನೆದುರು ನರ್ತಿಸುವಂತೆ ಏಕೆ ಓಡುವೆ? ಇಷ್ಟಿಷ್ಟು ಅಂತರದಲ್ಲಿ ಇಡಬೇಕಾದ ಪಾದಗಳನ್ನು ಎಷ್ಟೇಷ್ಟೋ ಅಂತರಕ್ಕಿಟ್ಟು ಹೋಗುವ ಧಾವಂತ ಏಕೆ? ಆ ನಿನ್ನ ಕಣ್ಣೋಟವಾದರೋ, ಉದ್ವಿಗ್ನತೆಯಿಂದ ಚಂಚಲವಾಗಿದೆ. ಅರೆಘಳಿಗೆ ಒಂದೆಡೆ ನಿಲ್ಲದೆ ಹೊಯ್ದಾಡುತ್ತಿವೆ ದೃಷ್ಟಿ ಪಟಲಗಳು. ಕಡೆಗಣ್ಣನ್ನು ನಮ್ಮೆಡೆಗೆ ಬೀರಿ ಮತ್ತಷ್ಟು ಆತಂಕಿತಳಂತೆ ಏಕೆ ವರ್ತಿಸುವೆ? ನಿನ್ನ ಈಗಿನ ಸ್ಥಿತಿ ನೋಡಿದರೆ ಹಿಂದಿನಿಂದ ಹುಲಿಯೊಂದು ಬೆನ್ನಟ್ಟಿರುವಾಗ ಎತ್ತ ಹೋಗಲೆಂದು ದಿಕ್ಕುಗಾಣದೇ ಪ್ರಾಣಭಯದಿಂದ ವಾಯುವೇಗದಿಂದ ಧಾವಿಸುತ್ತಿರುವ ಹರಿಣಿಯಂತೆ ತೋರುವಿ‌. ನಮ್ಮನ್ನು ಕಂಡರೇತಕೆ ಭಯ. ನೀನಾದರೋ ವೇಶ್ಯಾಪುತ್ರಿ. ನಾವು ಸಿಕ್ಕವರಲ್ಲಿ ತೃಪ್ತಿ ಕಾಣುವ ವಿಟರು. ಬೇಡ ನಮ್ಮನ್ನು ಬಿಟ್ಟೋಡದಿರು. ಕವಿ ಕಾಮುಕರಿಗೆ ಹೆದರಿ ಓಡುತ್ತಿರುವ ತರುಣಿಯೊಬ್ಬಳ ಸ್ಥಿತಿಯನ್ನು ಸಹಜವಾಗಿ ತೆರೆದಿಟ್ಟಿದ್ದಾನೆ._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩