ರಾಮಾಯಣ ೧೩೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೫ 🏝📖

*ಜಾನಾಮಿ ತಸ್ಯ ರೌದ್ರಸ್ಯ ಮಾಯಾಂ ಸತ್ಯಪರಾಕ್ರಮಃ ಸಹಿ ಬ್ರಹ್ಮಾಸ್ತ್ರವಿತ್ ಪ್ರಾಜ್ಞೋ ಮಹಾಮಾಯೋ ಮಾಹಾಬಲಃ*

_ಇಂದ್ರಜಿತು ನಿಕುಂಭಿಳೆ ಎಂಬ ಲಂಕೆಯಲ್ಲಿನ ಭದ್ರಕಾಳಿಯ ದೇಗುಲದ ಆಲದ ಮರದ ಬುಡದಲ್ಲಿ ಹೋಮ ಮಾಡಿದಾಗ ಅವನಿಗೆ *ಬ್ರಹ್ಮಶಿರ* ಎಂಬ ಅಸ್ತ್ರವೂ, ಮಾಯಿಕವಾದ ರಥಾಶ್ವಗಳೂ ದೊರೆಯುತ್ತವೆ. ಹೋಮ ಪೂರ್ಣಗೊಳ್ಳುವ ಮುನ್ನ ನಿನ್ನೊಡನೆ ಕಾದಿದರೆ ಅ ಸಮಯದಲ್ಲಿ ನಿನ್ನನ್ನು ಕೊಲ್ಲಲು ಸಾಧ್ಯ ಎಂದು ಬ್ರಹ್ಮನ ವರವಿದೆ ಎಂದು ವಿಭೀಷಣನು ನುಡಿದಾಗ ರಾಮನಾಡುವ ಮಾತು. ಹಾ, ನನಗೂ ಈ ವಿಷಯ ಗೊತ್ತು. ಬ್ರಹ್ಮಾಸ್ತ್ರ ಬಲ್ಲ ಮಹಾಪ್ರಾಜ್ಞ ಅವನು. ಅತಿ ಪರಾಕ್ರಮಿ ಎಂದೆಲ್ಲಾ ನುಡಿಯುವನು. ರಾಮನ ಮಾತು ನೋಡಿದರೆ ಶತ್ರುವಿನ ಬಗೆಗೆ ಸಂಪೂರ್ಣ ಮಾಹಿತಿ ವಿಭೀಷಣನ ಭೇಟಿಗೆ ಮುಂಚೆಯೇ ಸಂಗ್ರಹಿಸಿದ್ದುದು ಕಂಡುಬರುತ್ತದೆ ಇಲ್ಲಿ. ಯುದ್ಧ ಗೆಲ್ಲುವ ಮೊದಲ ಹೆಜ್ಜೆ ಶತ್ರುವಿನ ಬಲಾಬಲ, ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳು, ವೈರಿಗಳು, ಸಂಬಂಧಗಳು, ಹವ್ಯಾಸಗಳು ಹೀಗೆ ಬಹಳಷ್ಟು ಅಧ್ಯಯನ ಮಾಡಿ ಯುದ್ಧದಲ್ಲಿ ತೊಡಗಿಸಿಕೊಂಡಾಗ ಜಯ ಸಾಧ್ಯ. ರಾಮ ತಾನು ಅವತಾರಿ ಆದರೂ ಯುದ್ಧನೀತಿಯನ್ನು ಚಾಚೂತಪ್ಪದೆ ಪ್ರತಿಯೊಂದು ಸಂದರ್ಭದಲ್ಲೂ ಪಾಲಿಸಿ ತೋರಿಸಿಕೊಟ್ಟಿದ್ದಾನೆ. ಇದನ್ನೇ ಆದರ್ಶ ಎನ್ನುವುದು. ನಾವೆಲ್ಲರೂ ಹೆಚ್ಚು ಮಾತನಾಡಿ ಕಡಿಮೆ ಆಚರಿಸಿ ಆದರ್ಶ ಪಾಲನೆಯಲ್ಲಿ ತಪ್ಪುತ್ತೇವೆ. ರಾಮನದ್ದು ತದ್ವಿರುದ್ಧ ಸ್ವಭಾವ. ಆಚರಿಸಿ ಅನಂತರ ಅದರ ಬಗೆಗೆ ತಿಳುವಳಿಕೆ ಮೂಡಿಸುವುದು. ಸಾಮಾಜಿಕ ಸಂಪರ್ಕಸಾಧನಗಳು ಶೂನ್ಯವೆಂದು ಹೇಳುವ ಆ ಕಾಲದಲ್ಲಿ ರಾಮನ ಮಾಹಿತಿ ಸಂಗ್ರಹ ಅಚ್ಚರಿ ಮೂಡಿಸುವಂತಹದು._

*ರಾಮಪಾದಾವುಪಸ್ಪೃಶ್ಯ ಹೃಷ್ಟಃ ಸೌಮಿತ್ರಿರಬ್ರವೀತ್ ಅದ್ಯ ಮತ್ಕಾರ್ಮುಕೋನ್ಮುಕ್ತಾಃ ಶರಾ ನಿರ್ಭಿದ್ಯ ರಾವಣಿಮ್*

_ವಾಲ್ಮೀಕಿ ಮಹರ್ಷಿ ಹಂತಹಂತಕ್ಕೂ ನಮ್ಮನ್ನು ಎಚ್ಚರಿಸುತ್ತಲೇ ಹೋಗುತ್ತಾರೆ. ಲಕ್ಷ್ಮಣನ ನಡೆ ನಮಗೆ ಇಲ್ಲಿ ಮಾರ್ಗದರ್ಶಕ. ರಾಮನಷ್ಟೇ ಪರಾಕ್ರಮಿ, ಧೈರ್ಯಶಾಲಿ, ಜ್ಞಾನಿ ಆದರೂ ಅಣ್ಣನ ಮೇಲಿನ ಪ್ರೀತಿ ಇವೆಲ್ಲಕ್ಕೂ ಮಿಗಿಲಾದದ್ದು. ಅಣ್ಣನ ಕಾಲು ಮುಟ್ಟಿ ನಮಸ್ಕರಿಸಿ ಯುದ್ಧೋನ್ಮುಖನಾಗುವ ಪರಿ ಅದ್ಭುತ. ನಾವು ಅಪ್ಪ ಅಮ್ಮಂದಿರ ಅಣ್ಣ ಅಕ್ಕಂದಿರ ಕಾಲು ಮದುವೆಯಂತಹ ಅನಿವಾರ್ಯ ಸಂದರ್ಭ ಬಿಟ್ಟು ಮತ್ತಾವಾಗ ಹಿಡಿದು ಅಡ್ಡಬಿದ್ದಿದ್ದೇವೆ! ಅಣ್ಣನಲ್ಲೇ ತನ್ನ ತಂದೆಯನ್ನು ಕಾಣುತ್ತಿದ್ದ ಲಕ್ಷ್ಮಣನ ವರ್ತನೆ ಮಾದರಿ. ಅಣ್ಣನಲ್ಲೇ ದೇವರನ್ನು ಕಂಡು ಒಂದು ದಿನವೂ ಪ್ರತಿಯಾಡದೆ ಅಪೇಕ್ಷೆ ಪಡದಿದ್ದರೂ ಸೇವೆ ಮಾಡುವ ಶತಣಾಗತಿಯ ಭಾವ ಭಗವಂತನ ಒಲುಮೆಯನ್ನು ಸಹಜವಾಗಿ ಕೊಡಿಸುತ್ತದೆ. ನಮಗೂ ಲಕ್ಷ್ಮಣನ ಈ ಗುಣ ಸದಾ ಮಾದರಿ. ಹಿರಿಯರನ್ನು ಆದರಿಸುವ ಪರಿಪಾಠ ರಾಮನ ಅನುಗ್ರಹದಿಂದ ಸದಾ ಇರಲಿ._


ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩