ಚಾರುದತ್ತ ೧೫

👳‍♀ಚಾರುದತ್ತ ಶ್ಲೋಕ-೧೫👳‍♀

*कामं नीचमिदं वदन्तु विबुधा: सुप्तेषु यद्वर्तते विश्वस्तेषु हि वंचनापरिभव: शौर्यं न कार्कश्यता । स्वाधीना वचनीयतापि तु वरं बद्धो न सेवांजलि: मार्गश्चैष नरेन्द्रसौप्तिकवधे पूर्वं कृतो द्रौणिना।*


_ಚಾರುದತ್ತನು ಆ ಊರಿನ ಪ್ರಮುಖ ವ್ಯಾಪಾರಿಯಾದ ಕಾರಣ ಅವನ ಮನೆಗೆ ಕನ್ನ ಹಾಕಲೆಂದು ಕಳ್ಳನೊಬ್ಬ ಬಂದಿದ್ದಾನೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಹೊಗಳುವಂತೆ ಇವನೂ ಕಳ್ಳತನವನ್ನು ಸಮರ್ಥಿಸುತ್ತಿದ್ದಾನೆ. ಹಿಂದೆ ಇದನ್ನು ಮಹಾಮಹಿಮರೆಲ್ಲ ಮಾಡಿದರು ಎಂದೂ ಸೇರಿಸುತ್ತಾನೆ. ಎಲ್ಲರೂ ಗಾಢ ನಿದ್ರೆಯಲ್ಲಿ ಮುಳುಗಿರುವ ಸಮಯದಲ್ಲೇ ಮಾಡುವ ಈ ಚೌರ್ಯವನ್ನು ಪಂಡಿತರು ನೀಚಕರ್ಮ ಎಂದು ಒತ್ತಿ ಒತ್ತಿ ಹೇಳುತ್ತಾರೆ. ಏಕೆಂದರೆ ಎಚ್ಚರವಿಲ್ಲದಿದ್ದಾಗ ಅಥವಾ ವಿಶ್ವಾಸ ಹೊಂದಿರುವವರಲ್ಲಿ ಮೋಸ ಎಸಗುವುದು ಅಥವಾ ಹಿಂಸೆ ಮೊದಲಾದವುಗಳಿಂದ ಪಡೆಯುವುದು ವೀರರ ಕರ್ಮವಲ್ಲ. ಅದೇನಿದ್ದರೂ ಹೇಡಿತನದ ಕೆಲಸ. ಕ್ರೂರಕರ್ಮವದು. ಹಾಗಿದ್ದರೂ ಈ ಕೆಲಸದಲ್ಲೇನೋ ಆನಂದ ಇದೆ. ಎಷ್ಟು ಜನ ಬೈದರೂ ಈ ವೃತ್ತಿಯಲ್ಲೊಂದು ಸ್ವಾತಂತ್ರ್ಯ ಇದೆ. ನಿಂದ್ಯಕರ್ಮವಾದರೂ ಇಲ್ಲಿನ ಸ್ವಾತಂತ್ರ್ಯ ಬೇರೆ ಯಾವ ಕರ್ಮದಲ್ಲೂ ಇಲ್ಲ. ಯಾರನ್ನೂ ಆಶ್ರಯಿಸಬೇಕಾಗಿಲ್ಲ. ಯಾರ ಬಳಿಯೂ ಕೈ ಚಾಚಿ ಹಲ್ಲು ಗಿಂಜಿ ನಿಲ್ಲಬೇಕಾಗಿಲ್ಲ. ತಪ್ಪು ಮಾಡಿದರೆ ಉದ್ಯೋಗ ಹೋಗುವುದೆಂಬ ಭಯ ಇಲ್ಲವೇ ಇಲ್ಲ. ಯಾವ ವ್ಯಕ್ತಿಗೂ ನನ್ನ ನಿಷ್ಠೆ ತೋರಿಸದೇ ನಾನು ಮಾಡುವ ವೃತ್ತಿಗೆ ನಿಷ್ಠನಾಗಿದ್ದರೆ ಸಾಕು. ಇನ್ನೊಬ್ಬರನ್ನು ಅವಲಂಬಿಸಿ ನಡೆಸುವ ಹಂಗಿನ ಬದುಕು ನನ್ನದಲ್ಲ. ಇಷ್ಟು ಮಾತ್ರವಲ್ಲದೇ ಈ ದಾರಿಯನ್ನು ದ್ವಾಪರ ಯುಗದಲ್ಲಿ ಆಚಾರ್ಯರೇ ಅನುಸರಿಸಿದ್ದಾರೆ. ಮಹಾಭಾರತ ಕಥೆಯಲ್ಲಿ ಆಚಾರ್ಯರೆಂದು ಕರೆಸಿಕೊಂಡ ಅಶ್ವತ್ಥಾಮನು ಇದೇ ಮಾರ್ಗದಲ್ಲಿ ತೆರಳಿ ಅಲ್ಲವೇ ಉಪಪಾಂಡವರ ಕೊಲೆಗೈದದ್ದು. ಅವನಂತಹ ಶ್ರೇಷ್ಠ ಕುಲಜಾತನು, ವಿದ್ವಾಂಸನು, ಪರಾಕ್ರಮಿಯೇ ಈ ಚೌರ್ಯದ ದಾರಿ ಹಿಡಿದಿದ್ದಾನೆಂದರೆ ಈ ವೃತ್ತಿ ಎಷ್ಟು ಉತ್ತಮವಲ್ಲವೇ! ಹಾಗಾಗಿ ನಾನು ಈ ದಿನ ಈ ಮನೆಯ ಚೌರ್ಯಕ್ಕೆ ಹೊರಟಿದ್ದೇನೆ. ಕಳ್ಳತನವೂ ಒಳ್ಳೆಯ ಕರ್ಮ ಎಂಬ ಭಾವನೆ ಆ ಕಳ್ಳನದ್ದು. ಭಾಸನ ವಿಡಂಬನಾ ಶೈಲಿಯ ಇಂತಹ ಪದ್ಯಗಳು ಬಹಳ ಮಾರ್ಮಿಕ._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಓದಿ
http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩