ಪದಶಕ್ತಿ ೨೬
🏹*ಪದಶಕ್ತಿ* ---೨೬🌄
*ಜಿಷ್ಣು*
_ಇಂದ್ರನ ಮತ್ತೊಂದು ಹೆಸರು. ಜಿ ಜಯೇ ಎಂಬ ಧಾತುವಿನಿಂದ ಹುಟ್ಟಿದ ಈ ಪದದ ಅರ್ಥ ಜಯಶಾಲಿ ಎಂಬುದು. *ವಿಷ್ಣುರ್ವಿಕ್ರಮಣಾದ್ದೇವೋ ಜಯನಾಜ್ಜಿಷ್ಣುರುಚ್ಯತೇ* ಎಂದು ಮಹಾಭಾರತದಲ್ಲಿ ವಿಷ್ಣುವು ಜಯಶೀಲನಾದದ್ದರಿಂದ ಅವನನ್ನು ಜಿಷ್ಣು ಎಂದಿದ್ದಾರೆ. ಇಂದ್ರನೂ ವಿಷ್ಣುವಿನ ಅನುಗ್ರಹದಿಂದ ಜಯಶಾಲಿ. ಯುದ್ಧದಲ್ಲಿ ಯಾರ ಕೈಗೂ ಸಿಗದೇ ಯಾರಿಂದಲೂ ತಿರಸ್ಕರಿಸಲ್ಪಡದೇ ಅಂದರೆ ಸೋಲದೇ ಇದ್ದ ಕಾರಣ ಅರ್ಜುನನೂ ಜಿಷ್ಣು. ಸೂರ್ಯನೂ ಹತ್ತು ದಿಕ್ಕುಗಳನ್ನು ಗೆದ್ದು ಬರುವ ಕಾರಣ ಅಂದರೆ ಲೋಕವನ್ನೆಲ್ಲಾ ಇಂಚಿಂಚೂ ಬಿಡದೇ ಬೆಳಗಿಸುವ ಕಾರಣ ಅವನೂ ಜಿಷ್ಣು. ಅಷ್ಟವಸುಗಳ ಪರಾಕ್ರಮ ಕೆಲವೊಂದು ಸಂದರ್ಭಗಳಲ್ಲಿ ಅದ್ಭುತವಾಗಿ ಪರಿಣಾಮ ಬೀರಿ ದೇವತೆಗಳ ಜಯ ಖಚಿತವಾದ ಕಾರಣ ಅವರೂ ಜಿಷ್ಣುಗಳು. ಒಂದು ವೇಳೆ ನಮ್ಮದೂ ಧರ್ಮದ ಹಾದಿಯ ಜಯವಾದರೆ ನಾವೂ ಜಿಷ್ಣುಗಳೇ ಸರಿ. ಜಿ ಧಾತುವಿಗೆ ಸಂಸ್ಕೃತದಲ್ಲಿ ಜಯ ಎನ್ನುವ ಅರ್ಥ ಒಂದಾದರೆ, ಉತ್ಕೃಷ್ಟವಾದ ಎಂಬ ಇನ್ನೊಂದು ಅರ್ಥವೂ ಇದೆ. ಕೇವಲ ಸ್ಪರ್ಧೆ, ಯುದ್ಧ ಮೊದಲಾದ ಜಯಗಳು ಮಾತ್ರವಲ್ಲದೆ ಜೀವನದ ಉತ್ಕರ್ಷ ನಾವು ಸಾಧಿಸಿದ್ದೇ ಆದರೆ ಯಾರು ತಾನೇ ಜಿಷ್ಣು ಆಗಲಾರರು! ಈ ಅರ್ಥದಲ್ಲೇ ರಾಜರನ್ನು, ದೇವಾದಿಗಳನ್ನು ಜಯ ಜಯ ಎನ್ನುವುದೇ ಹೊರತು ನಿಮಗೆ ಗೆಲುವಾಗಲಿ ಎಂದಲ್ಲ. ನಮ್ಮ ಆರಾಧ್ಯರ ಉತ್ಕರ್ಷ ನಮ್ಮ ಉತ್ಕರ್ಷಕ್ಕೆ ಹೇತುವಲ್ಲವೇ. ಜಿಷ್ಣುವಿನ ಅನುಗ್ರಹದಿಂದ ನಾವೂ ಜಿಷ್ಣುಗಳಾಗೋಣ._
ಸಂಸ್ಕೃತ ಸಾಹಿತ್ಯದ ಪಂಚಮಹಾಕಾವ್ಯಗಳಲ್ಲಿ ಒಂದಾದ ಭಾರವಿಯ ಕಿರಾತಾರ್ಜುನೀಯದಲ್ಲಿ ಅರ್ಜುನನನ್ನು ಹೊಗಳುವಾಗ ಕವಿ ಈ ಪದ ಹೀಗೆ ಬಳಸಿದ್ದಾನೆ.
*ಭುಜಂಗಪಾಶಾನ್ ಭುಜವೀರ್ಯಶಾಲೀ ಪ್ರಬಂಧನಾಯ ಪ್ರಜಿಘಾಯ ಜಿಷ್ಣುಃ*
ತನ್ನ ಭುಜಬಲದಿಂದ ನಾಗಪಾಶಗಳನ್ನು ಕಿತ್ತೊಗೆದ ವೀರ ಎಂಬ ಅರ್ಥದಲ್ಲಿ ಇರಬಹುದು. ಈ ಸಂದರ್ಭದ ಕಾವ್ಯ ನಾನೂ ಓದದ ಕಾರಣ ಈ ಮಾತು.
ಕನ್ನಡ ಸಾಹಿತ್ಯದಲ್ಲಿ ಹಿಂದೆ ಶಾಲಾ ಪಠ್ಯಪುಸ್ತಕದಲ್ಲಿ ಬಳಕೆಯಲ್ಲಿದ್ದ *ಚೂಡಾರತ್ನಶತಕ* ಎಂಬ ಅನಾಮಿಕ ಕವಿಯ ಒಂದು ಪದ್ಯದಲ್ಲಿ ಈ ಪದವಿದೆ. ಅನೇಕ ಕಡೆ ಇದ್ದರೂ ಆಸಕ್ತರು ಈ ಕೃತಿ ಗಮನಿಸಲೆಂದು ಇದನ್ನೇ ನಮೂದಿಸಿದ್ದೇನೆ.
ಮಾತಿನ ಸಂಭ್ರಮದ ಬಿನದೋಲಗವಬಲಾ |
ವ್ರಾತದೊಳು ಸಂದಡಾತಂ |
ಆತನೆ ಬದಿ ವಿಷ್ಣು ಜಿಷ್ಣು ಚೂಡಾರತ್ನಾ || [ ೨೪ ]
[ ಬಿನದ =ವಿನೋದ, ವಿಲಾಸ, ಉತ್ಸವ; ವ್ರಾತ= ಸಮೂಹ; ಬದಿ =ಮಗ್ಗುಲು,ಸಮೀಪ; ಜಿಷ್ಣು= ವಿಷ್ಣು. ]
ಉತ್ಸವದ ಸಂದರ್ಭದ ವರ್ಣನೆ ಇದು. ಇದು ಜ್ಞಾನೇಶ್ವರ ಎಂಬ ಕವಿಯಿಂದ ಪರಿಷ್ಕೃತ ಎಂದು ಉಲ್ಲೇಖ ಇದೆ.ಓದಲು ಕವಿ ಯಾರಾದರೇನು ಮನವಿದ್ದರೆ, ಕಾವಿದ್ದರೆ ಅಲ್ಲವೇ!
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗಾಗಿ ಒಮ್ಮೆ ಇಣುಕಿ-
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ