ರಾಮಾಯಣ ೧೩೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೬ 🏝📖

*ಸ ಸಾರಥಿಮುವಾಚೇದಂ ಯಾಹಿ ಯತ್ರೈಷ ವಾನರಃ ಕ್ಷಯಮೇಷ ಹಿ ನಃ ಕುರ್ಯಾದ್ರಾಕ್ಷಸಾನಾಮುಪೇಕ್ಷಿತಃ*

_ಯಜ್ಞ ಭೂಮಿಗೇ ಹೋಗಿ ಲಕ್ಷ್ಮಣನ ನೇತೃತ್ವದಲ್ಲಿ ಹೋರಾಡಿ ದಾನವಸೈನ್ಯವನ್ನು ಧ್ವಂಸಗೊಳಿಸತೊಡಗಿದರು ವಾನರ ಭಲ್ಲೂಕ ವೀರರು. ಆ ಸಮಯದಲ್ಲಿ ಪರ್ವತಾಕಾರನಾಗಿ ಬೆಳೆದುನಿಂತ ಹನುಮನು ರಾಕ್ಷಸಸೇನೆಯನ್ನು ಸದೆಬಡಿಯಲು ತೊಡಗಿದನು. ರಾಕ್ಷಸ ಸೈನ್ಯಧ್ವಂಸಕನಾದ ಅವನನ್ನು ಕಂಡ ಸಾವಿರಾರು ಯೋಧರು ಶೂಲದಿಂದ,ಖಡ್ಗಗಳಿಂದ,ಶಕ್ತಿಗಳಿಂದ, ಪಟ್ಟಸಗಳಿಂದ ಪ್ರಹರಿಸುತ್ತ ಹನುಮಂತನನ್ನು ಮುತ್ತಿದರು‌. ನೂರಾರು ಪರಿಘ-ಗದೆ-ಚಕ್ರ-ಶತಘ್ನಿ-ಕಬ್ಬಿಣದ ಮುದ್ಗರ-ಪರಶು-ಭಿಂಡಿಪಾಲ ಹೀಗೆ ವಿವಿಧಾಯುಧಗಳಿಂದ ಹೊಡೆದರು. ಮುಷ್ಟಿಗಳಿಂದ ಗುದ್ದಿ, ಅಂಗೈಗಳಿಂದ ಅಪ್ಪಳಿಸಿದರು. ಹನುಮನು ಮತ್ತಷ್ಟು ಕೋಪಗೊಂಡು ಅವರೆಲ್ಲರನ್ನೂ ಏಕಕಾಲದಲ್ಲಿ ಎದುರಿಸಿದನು. ಬಹುಶಃ ರಾಮಾಯಣದ ಈ ದೃಶ್ಯವನ್ನು ಕಲ್ಪಿಸಿಕೊಂಡೇ ಇರಬೇಕು ಸಾವಿರಾರು ನಿರ್ದೇಶಕರು ನಾಯಕನ ಕೈಯಲ್ಲಿ ಕಲ್ಪನಾತೀತ ಹೊಡೆದಾಟಗಳನ್ನು ಮಾಡಿಸುವುದು. ಪ್ರೇಕ್ಷಕರು ಅದನ್ನು ನಿಜವೆಂಬಂತೆ ಆಸ್ವಾದಿಸುವುದು. ಹನುಮನ ಪರಾಕ್ರಮ ನಮ್ಮ ಕಲ್ಪನೆಯನ್ನು ಮೀರಿದ್ದು. ಇದೆಲ್ಲವನ್ನೂ ಗಮನಿಸುತ್ತಿದ್ದ ರಾವಣಿಯು ಕೂಡಲೇ ಸಾರಥಿಗೆ ಈ ಮಾತನ್ನು ಹೇಳುವನು- ಈ ಕಪಿ ಉಪೇಕ್ಷಿಸಿದರೆ ನಮ್ಮ ಸೈನ್ಯವನ್ನು ಸಂಪೂರ್ಣ ನಾಶ ಮಾಡಿಯಾನು. ನಡೆ ಅತ್ತ, ಅಸಾಮಾನ್ಯ ಪರಾಕ್ರಮಿಯೆಡೆಗೆ ಎಂದು. ಒಬ್ಬ ನೈಜ ಯೋಧ ಇನ್ನೊಬ್ಬ ಯೋಧನ ಪರಾಕ್ರಮವನ್ನು ಸರಿಯಾಗಿ ಅಳೆಯಬಲ್ಲ. ಇಲ್ಲಿ ಹನುಮನ ಶಕ್ತಿ ಸಾಮರ್ಥ್ಯವನ್ನು ಇಂದ್ರಜಿತ್ ಸರಿಯಾಗಿಯೇ ಅಂದಾಜಿಸಿದ್ದನು._

*ಬಾಹುಭ್ಯಾಂ ಪ್ರತಿಯುಧ್ಯಸ್ವ ಯದಿ ಮೇ ದ್ವಂದ್ವಮಾಹವೇ ವೇಗಂ ಸಹಸ್ವ ದುರ್ಬುದ್ಧೇ ತತಸ್ತ್ವಂ ರಕ್ಷಸಾಂ ವರಃ*

_ಹನುಮನ ತಲೆಗೆ ಗುರಿಯಿಟ್ಟು ಇಂದ್ರಜಿತು ಖಡ್ಗ-ಬಾಣ-ಪಟ್ಟಸ-ಪರಶು ಮೊದಲಾದವುಗಳನ್ನು ಪ್ರಯೋಗಿಸಿದಾಗ ಹನುಮನು ಅದಾವುದನ್ನೂ ಲೆಕ್ಕಿಸದೇ ಆಡುವ ಮಾತು. ಇಷ್ಟು ಕಾಲ ಕಣ್ಣಿಗೆ ಬೀಳದೇ ತಪ್ಪಿಸಿಕೊಂಡು ಮಾಯಾಯುದ್ಧ ಮಾಡುತ್ತಿದ್ದೆ. ನಿನ್ನ ಪರಾಕ್ರಮವನ್ನು ಬಾಹುಯುದ್ಧದ ಮೂಲಕ ಸಾಬೀತುಪಡಿಸು. ಬಾಹುಗಳಿಂದಲೇ ಕುಸ್ತಿ ಆಡೋಣ,ಈ ವಾಯುಪುತ್ರನನ್ನು ಎದುರಿಸಿ ನೀನು ಜೀವಂತ ಇರಲಾರೆ. ನನ್ನ ವೇಗವನ್ನು ಸಹಿಸಿಕೊ. ಆಗ ನೀನು ರಾಕ್ಷಸ ಶ್ರೇಷ್ಠ ಎಂದು ಒಪ್ಪಿಕೊಳ್ಳುವೆ. ಹನುಮನ ಆತ್ಮವಿಶ್ವಾಸ ಇಲ್ಲಿ ನಾವು ಕಾಣಬಹುದು. ಎದುರಾಳಿ ಯಾರೇ ಇರಲಿ ಇಂದ್ರನನ್ನೇ ಗೆದ್ದಿರಲಿ ನಮ್ಮ ಬಲದ ಬಗೆಗೆ ನಮಗೆ ನಂಬಿಕೆ ಇರುವ ತನಕ ಹೆದರುವ ಅವಶ್ಯಕತೆ ಇರಲಾರದು. ನಮ್ಮ ಬಗೆಗೆ ಎಂದಿಗೂ ನಮ್ಮ ಆತ್ಮವಿಶ್ವಾಸ ಕುಂದಬಾರದು. ಆಗ ಮಾತ್ರ ಲೋಕದಲ್ಲಿ ಯಾರನ್ನು ಬೇಕಾದರೂ ಎದುರಿಸಿ ನಿಲ್ಲಲು ಸಾಧ್ಯ._

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩