ಪದಶಕ್ತಿ ೨೭
🏹*ಪದಶಕ್ತಿ* ---೨೭🌄
*ಗ್ರಹ*
_*ಗೃಹ್ಣಾತಿ ಗತಿ ವಿಶೇಷಾನ್ ಅಥವಾ ಗೃಹ್ಣಾತಿ ಫಲದಾತೃತ್ವೇನ ಜೀವಾನ್* ಎಂಬಂತೆ ಬೇರೆ ಬೇರೆ ಫಲಗಳನ್ನು ನಮ್ಮ ಕರ್ಮಕ್ಕನುಸಾರವಾಗಿ ಕೊಡುವವರೇ ಗ್ರಹಗಳು. ನಮ್ಮ ಬದುಕಿನ ಗತಿಯನ್ನು ಗಮನಿಸಿ ನಿಯಂತ್ರಿಸುವವರು ಎಂದರೂ ತಪ್ಪಿಲ್ಲ. ಎಲ್ಲರಿಗೂ ತಿಳಿದಂತೆ ಸೂರ್ಯ-ಚಂದ್ರ-ಮಂಗಳ-ಬುಧ-ಗುರು-ಶುಕ್ರ-ಶನಿ-ರಾಹು-ಕೇತು. ಒಂಭತ್ತು ಗ್ರಹಗಳು. ಸಂಸ್ಕೃತದಲ್ಲಿ ಅಥವಾ ಯಾವುದೇ ಭಾರತೀಯ ಭಾಷೆಯಲ್ಲಿ ಒತ್ತಕ್ಷರಕ್ಕೆ ಮಹತ್ವ ಇದೆ. ಬಹಳಷ್ಟು ಜನ ಈ ಗ್ರಹಗಳನ್ನು ಗೃಹಗಳೆಂದು ಕೆಲವೊಮ್ಮೆ ,ಇನ್ನು ಕೆಲವರು ಮನೆಗೆ ಗ್ರಹವೆಂದು ಹೇಳಿ ಅಥವಾ ಬರೆದು ತಪ್ಪನ್ನು ಧೈರ್ಯದಿಂದ ಮಾಡುತ್ತಾರೆ. ಪ್ರಸಿದ್ಧರಾದವರು ಈ ಒಂಭತ್ತು ಗ್ರಹಗಳಾದರೂ ವರಾಹ ಎಂಬ ಜ್ಞಾನಿಯೊಬ್ಬ ಏಳೇ ಮುಖ್ಯ ಗ್ರಹಗಳು, ರಾಹು ಕೇತುಗಳು ಗ್ರಹಗಳಲ್ಲ ಎನ್ನುವನು. ವಿಜ್ಞಾನದ ಪ್ರಕಾರ ಇವರನ್ನು ಛಾಯಾಗ್ರಹ ಎನ್ನುತ್ತಾರೆ. ಬಹುಶಃ ವರಾಹನ ಮತವೂ ಅದೇ ಇರಬಹುದು._
_ಈ ಗ್ರಹಗಳಿಗೆ ಎಂಟು ವಿಧ ಗತಿಗಳಿವೆ. ನಮ್ಮಲ್ಲಿ ಹೇಗೆ ವೇಗನಡಿಗೆ, ಸೊಟ್ಟ ನಡಿಗೆ, ಆಮೆ ನಡಿಗೆ ಮೊದಲಾದವು ಇವೆಯೋ ಅದರಂತೆ ಗ್ರಹಗಳಿಗೆ *ವಕ್ರ-ಅತಿವಕ್ರ-ಕುಟಿಲ-ಮಂದ-ಮಂದತರ-ಸಮ-ಶೀಘ್ರ-ಶೀಘ್ರತರ*ಹೀಗೆ ಗತಿಗಳಿವೆ. ಚಂದ್ರನ ನಡಿಗೆ ಬಹುಶಃ ಶೀಘ್ರತರ. ಕೆಲವೊಮ್ಮೆ ಒಂದೇ ದಿನ ಎರಡು ನಕ್ಷತ್ರಗಳನ್ನು ಅವನು ಕ್ರಮಿಸಿರುತ್ತಾನೆ. ಶನಿಯ ಗಮನ ಮಂದತರ ಇರಬಹುದು. ಎರಡುವರೆ ವರ್ಷದಲ್ಲಿ ಅವನು ಕ್ರಮಿಸುವುದು ಕೇವಲ ಎರಡುವರೆ ನಕ್ಷತ್ರ ಅಥವಾ ಒಂಭತ್ತು ಪಾದಗಳನ್ನು ಮಾತ್ರ._
_ಈ ಪದ ತುಂಬಾ ಅರ್ಥಗಳನ್ನು ಹೊಂದಿದೆ. ದೇವರ ಅಥವಾ ಹಿರಿಯರ ಅನುಗ್ರಹವೂ ಗ್ರಹವೇ ಸರಿ. ರಾಹು-ಕೇತುಗಳ ನೆರಳು ಬೆಳಕಿನಾಟವೂ ಗ್ರಹ. ಕೆಲವು ವಿಷಯದ ನಿರ್ಬಂಧವೂ ಗ್ರಹ. ಬಗೆಬಗೆಯ ಕೈಸನ್ನೆಗೂ ಗ್ರಹ ಎಂಬ ಪರ್ಯಾಯ ಇದೆ. ಏನನ್ನೇ ಸ್ವೀಕಾರ ಮಾಡುವುದಾದರೂ ಅದೂ ಗ್ರಹ. ಜ್ಞಾನಕ್ಕೆ ಮತ್ತೊಂದು ಪರ್ಯಾಯ ಗ್ರಹ. ಇಬ್ಬರ ಅಥವಾ ಅನೇಕರ ನಡುವಿನ ಸಮರವೂ ಒಂದು ಬಗೆಯ ಗ್ರಹ. ತಿಂದದ್ದು ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲೇ ಕಟ್ಟಲ್ಪಟ್ಟರೆ ಅದೂ ಗ್ರಹ. ಶ್ರೌತ ಯಾಗದಲ್ಲಿ ಸೋಮರಸದ ಸ್ವೀಕಾರದ ಪಾತ್ರೆಯೂ ಗ್ರಹ. ಪ್ರಾಣದ ನಿಯಂತ್ರಣ ಹೊಂದಿರುವ *ಘ್ರಾಣ-ಹಸ್ತ-ಮಾತು-ನಾಲಗೆ-ಕಣ್ಣು-ಕಿವಿ-ಮನಸ್ಸು-ಚರ್ಮ* ಇವುಗಳನ್ನು ಒಟ್ಟಾಗಿ ಗ್ರಹ ಎನ್ನುತ್ತಾರೆ._
_ಇನ್ನು ಕಡೆಯದಾಗಿ ಮಕ್ಕಳನ್ನು ಪೀಡಿಸುವ ಒಂಬತ್ತು ಬಗೆಯ ಬಾಲಗ್ರಹಗಳನ್ನು ಗ್ರಹ ಎಂದು ಕರೆಯಬಹುದು. *ಸ್ಕಂದ,ಅಪಸ್ಮಾರ,ಶಕುನಿ,ರೇವತಿ,ಪೂತನಾ,ಅಂಧಪೂತನಾ,ಶೀತ,ಮುಖಮಂಡಿಕಾ,ನೈಗಮಯ* ಹೀಗೆ ಎಂಟು ತೊಂದರೆಗಳು ಮಕ್ಕಳಿಗೆ ಇಪ್ಪತ್ತು ವರ್ಷದೊಳಗೆ ಬಾಧಿಸುತ್ತವೆ. ಅದರ ಬಗೆಗಿನ ಹೆಚ್ಚು ವಿವರ ಆಯುರ್ವೇದದಲ್ಲಿ ಹೇಳಲ್ಪಟ್ಟಿದೆ. ಹೀಗೆ ಗ್ರಹ ಶಬ್ದದ ಉಚ್ಚಾರಣೆ ಮಾಡುವಾಗ ಯಾವ ಯಾವ ಗ್ರಹದ ಸ್ಮರಣೆ ಬರುವುದೋ ಆಯಾ ಫಲ ನಿಮಗೆ ದೊರಕೀತು._
_ಸಂಸ್ಕೃತ ಸಾಹಿತ್ಯದ ಒಂದು ಕಡೆ ಈ ಪದ ನೋಡೋಣ- *ग्रहाणामादिरादित्यो लोकरक्षण कारक:* ಎಂದು ಲೋಕರಕ್ಷಕನಾದ ರವಿ ನಮ್ಮನ್ನು ಪೊರೆಯಲಿ ಎಂದು ಸ್ತುತಿಸುತ್ತಾರೆ._
ಕಂದನಿಗೆ ಕಾಲಿಲ್ಲವಮ್ಮ, ಪುಟ್ಟಿದಂದಿಂದ ಈ ಅಂಬೆಗಾಲು ಬಿಡದಮ್ಮಮಳೆ ಹೊಳೆ ಕತ್ತಲೊಳು ತರಳ ಮಗ ಬೆದರಿದನೊಕಳೆಯುಳ್ಳ ಮುಖಕೀಗ *ಗ್ರಹ* ಸೋಕಿತೋಎಳೆಯ ಬೆಳದಿಂಗಳೋಳೆತ್ತಣ ದೃಷ್ಟಿ ತಾಕಿತೊಲಲನೆ ಮೀಸಲ ಹಾಲು ಮೆರೆದೆರೆದ ಪರಿಯೊ
ಬೆಣ್ಣೆಯನು ಮೆಲ್ಲುತ ಬೆದರಿ ಬಾಯಾರಿದನೊಉಣ್ಣೆ ಪೂತನಿ ಮೊಲೆಯ ವಿಷ ಸೋಂಕಿತೋಅಣ್ಣ ಪಾಪಿಯ ಭಯಕೆ ಅಂಜಿ ಕಾಲಿಟ್ಟನೊಹೆಣ್ಣು ದೈತೇಯರ ಕಾಲಲಿ ಬಂದ ಸರಕೊ
ಧುರವಿಜಯ ಶ್ರೀಕೃಷ್ಣರಾಯಗೆ ನಿಮ್ಮಹರದೇರಂದವ ತೋರಬಂದ ಪರಿಯೋಧರೆಗಧಿಕ ವಿದ್ಯನಗರವಳಿತೆಂದು ಉದಯಗಿರಿಯಿಂದ ಬಂದ ಮುದ್ದು ಬಾಲಕೃಷ್ಣಗೆ*
ವ್ಯಾಸರಾಯರ ಈ ಪದ್ಯದಲ್ಲಿ ಬಾಲಸೂರ್ಯನ ದರ್ಶನವೆಂಬ *ಉಪನಿಷ್ಕ್ರಮಣ ಅಥವಾ ಸೂರ್ಯದರ್ಶನ* ಎಂಬ ಸಂಸ್ಕಾರದ ಉಲ್ಲೇಖ ಇದೆ. ಕೃಷ್ಣನ ಪೊಗಳುವ ಪದ್ಯವಿದು. ಕೃಷ್ಣನ ದಯದಿಂದ ನಮಗೂ ಗ್ರಹಬಾಧೆ ಬರದೆಂದು ಪ್ರಾರ್ಥಿಸೋಣ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗಾಗಿ ಒಮ್ಮೆ ಇಣುಕಿ-
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ