ರಾಮಾಯಣ ೧೩೩
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೩ 🏝📖
*ಸೈವ ಸಾಮ್ನಾ ನ ದಾನೇನ ನ ಭೇದೇನ ಕುತೋ ಯುಧಾ ಸಾ ದೃಷ್ಟುಮಪಿ ಶಕ್ಯೇತ ನೈವ ಚಾನ್ಯೇನ ಕೇನಚಿತ್*
_ಮಾಯಾಸೀತೆಯ ಸಾವನ್ನು ಹನುಮನಿಂದ ತಿಳಿದ ರಾಮನು ಅವಳೇ ನಿಜಜಾನಕಿ ಎಂದು ದುಃಖಿಸಲು ತೊಡಗಿದಾಗ ವಿಭೀಷಣನು ನಿಜವನ್ನು ಅರುಹುತ್ತಾನೆ. ರಾಮ, ದುಃಖಿಸದಿರು. ಸೀತೆಯನ್ನು ಕೊಲ್ಲುವುದಿರಲಿ, ರಾವಣನು ಪರರಿಗೆ ಕಣ್ಣೆತ್ತಿ ನೋಡಲೂ ಬಿಡನು. ಸಾಮ-ದಾನ-ಭೇದ ಯಾವ ಉಪಾಯದಿಂದಲೂ ಸೀತೆಯನ್ನು ಹಿಂದಿರುಗಿಸಲು ಒಪ್ಪದ ರಾವಣನು ಯುದ್ಧ ಮಧ್ಯದಲ್ಲಿ ಹೀಗೆ ತಂದು ಕೊಲ್ಲಿಸಲು ಎಂದಿಗೂ ಬಿಡಲಾರನು. ನಾನು ಎಷ್ಟೋ ಬಾರಿ ಕೇಳಿಕೊಂಡಾಗಲೂ ಸೀತೆಯ ಒಪ್ಪಿಸುವಿಕೆಯ ಯಾವುದನ್ನೂ ಸಹಿಸದ ರಾವಣನು ಮಗನಿಗೆ ಹೀಗೆ ಕೊಂಡು ಹೋಗಲು ಎಂದೆಂದಿಗೂ ಬಿಡನು. ರಾವಣನ ಮನೋಭಾವ ಒಂದರ್ಥದಲ್ಲಿ ವಿಕೃತಿ ಎನ್ನಬಹುದು. ತಾನು ಮಾತ್ರ ಅಂತಃಪುರದಲ್ಲಿ ನೂರಾರು ಸ್ತ್ರೀಯರ ನಡುವೆ ಮಲಗುವ ಮನೋಭಾವ ಒಂದೆಡೆ, ಅದೇ ತಾನು ಬಯಸಿದ ಸ್ತ್ರೀಯನ್ನು ತನ್ನವರೂ ಒಳಗೊಂಡಂತೆ ಯಾರೂ ಕಣ್ಣೆತ್ತಿಯೂ ನೋಡಬಾರದೆಂಬ ಕಟ್ಟುನಿಟ್ಟು. ಇಂತಹ ಭಾವನೆ ಅವರವರಿಗೆ ಬರಬೇಕೇ ಹೊರತು ಒತ್ತಾಯದಿಂದ ಬರುವಂತಹದಲ್ಲ. ರಾವಣನ ದುರದೃಷ್ಟಕ್ಕೆ ಸೀತೆ ಅವನನ್ನೂ ಕಣ್ಣೆತ್ತಿ ನೋಡದೆ ಉಳಿದಳು. ತನ್ನ ಪ್ರೇಯಸಿ ಮಾತ್ರ ಪರಿಶುದ್ಧಳಾಗಿರಬೇಕು, ತಾನು ಎಷ್ಟು ಕಡೆ ಬೇಕಾದರೂ ಮೇಯ್ದೆನು ಎನ್ನುವ ಕೆಲವು ಮನುಷ್ಯರ ಒಂದು ಬಗೆಯ ವಿಕೃತ ಮನೋಭಾವ ರಾವಣನಲ್ಲೂ ಇತ್ತು. ಆಧುನಿಕ ಸಾಹಿತ್ಯದ ಅನೇಕರು ರಾವಣನ ಬಗೆಗೆ ಭಾರೀ ಅನುಕಂಪ ತೋರಿಸುವವರು ಈ ಅಂಶ ಓದಿಲ್ಲವೇನೋ! ಅವನನ್ನು ದುರಂತ ನಾಯಕನೆಂಬಂತೆ ಚಿತ್ರಿಸಿ ಸದ್ಗುಣಗಳನ್ನು ಆರೋಪಿಸುವವರು ಈ ದುರ್ಗುಣ ಏಕೆ ಮರೆಯುವರೋ ನಾ ಕಾಣೆ._
*ಹುತವಾನುಪಯಾತೋ ಹಿ ದೇವೈರಪಿ ಸವಾಸವೈಃ ದುರಾಧರ್ಷೋ ಭವತ್ಯೇವ ಸಂಗ್ರಾಮೇ ರಾವಣಾತ್ಮಜಃ*
_ರಾಘವ, ಇದೆಲ್ಲಾ ಆ ರಾವಣಿಯ ಮಾಯೆ. ಅವನು ವಾನರರನ್ನು ಮೋಹಗೊಳಿಸಿ ನಿಕುಂಭಿಳಾ ದೇವಾಲಯಕ್ಕೆ ಹೋಗಿದ್ದಾನೆ. ಅವನು ವಿಧಿವತ್ತಾಗಿ ಹೋಮ ಮುಗಿಸಿ ಬಂದನೆಂದರೆ ಇಂದ್ರಾದಿಗಳಿಗೂ ದುರ್ಧರ್ಷನಾಗುವನು. ಅವನನ್ನು ಗೆಲ್ಲುವುದು ಸಾಧ್ಯವೇ ಇಲ್ಲದಂತಾಗುತ್ತದೆ. ತನ್ನ ಯಜ್ಞಕ್ಕೆ ವಾನರರು ತಡೆ ಒಡ್ಡೀರೆಂಬ ಸಂಶಯದಿಂದ ವ್ಯಾಮೋಹಕ್ಕಾಗಿ ಈ ಮಾಯೆ ಬಳಸಿದ್ದಾನೆ. ಹಾಗಾಗಿ ನೀನೀಗಲೇ ಅನುಜನಿಗೂ ನಮಗೂ ಅನುಮತಿ ನೀಡು. ಅವನಿದ್ದಲ್ಲಿಗೇ ಹೋಗಿ ಕೊಂದು ಬರುತ್ತೇವೆ. ಹೋಮಗಳ ಸರಿಯಾದ ಆಚರಣೆಯು ಎಂದಿಗೂ ನಿಷ್ಫಲವಲ್ಲ. ದೇವತೆಗಳು ಅವತಾರ ಎತ್ತಿ ಬಂದರೂ ಅವರದೇ ಮೂಲ ಶಕ್ತಿಯ ಆರಾಧನೆ ಹೋಮದ ಮೂಲಕ ನಡೆಯುವ ಕಾರಣ ಅವರೂ ತಟಸ್ಥರಾಗಬೇಕಾಗುತ್ತದೆ. ದುಷ್ಟರಿರಲಿ- ಶಿಷ್ಟರಿರಲಿ ಸರಿಯಾದ ರೀತಿಯ ಆರಾಧನೆಯು ಫಲ ಕೊಡದೆ ಎಂದೂ ಸುಮ್ಮನಾಗದು. ಇದಕ್ಕೆ ಒಳ್ಳೆಯ ಉದಾಹರಣೆ ಇಂದ್ರಜಿತುವಿನ ಈ ಪ್ರಕರಣ. ಹಿಂದೆಯೂ ಅವನು ರಾಮ ಸೌಮಿತ್ರಿಯರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವ ಮುನ್ನ ದೇವಪೂಜೆ ನಡೆಸಿಯೇ ಮುಂದುವರೆದಿದ್ದ. ಈ ಕಾರಣದಿಂದಲೇ ವಿಭೀಷಣನು ರಾಮನಿಗೆ ಈ ಸಂದರ್ಭದಲ್ಲಿ ಅವಸರ ಮಾಡಿ ಲಕ್ಷ್ಮಣನನ್ನು ವಾನರ ಸೈನ್ಯವನ್ನು ಹೊರಡಿಸುತ್ತಾನೆ._
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ