ರಾಮಾಯಣ ೧೩೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೪ 🏝📖

*ಸಮಾಪ್ತಕರ್ಮಾ ಹಿ ಸ ರಾಕ್ಷಸಾಧಿಪೋ ಭವತ್ಯದೃಶ್ಯಃ ಸಮರೇ ಸುರಾಸುರೈಃ ಯುಯುತ್ಸತಾ ತೇನ ಸಮಾಪ್ತಕರ್ಮಣಾ ಭವೇತ್ ಸುರಾಣಾಮಪಿ ಸಂಶಯೋ ಮಹಾನ್*

_ವಿಭೀಷಣನು ರಾಮನಿಗೆ ಹೇಳುತ್ತಿದ್ದಾನೆ. ಪುರುಷಸಿಂಹನಾದ ಲಕ್ಷ್ಮಣನು ನಿಶಿತಶರಗಳನ್ನು ಪ್ರಯೋಗಿಸಿ ಆಭಿಚಾರಿಕಕರ್ಮವನ್ನು ನಡೆಸದಂತೆ ರಾವಣಿಯನ್ನು ತಡೆಯುವನು. ಅನಂತರ ಆತನು ಲಕ್ಷ್ಮಣನಿಂದಲೇ ಹತನಾಗುವನು. ಒಂದು ವೇಳೆ ಇಂದ್ರಜಿತು ನಿಕುಂಭಿಳೆಯಲ್ಲಿ ಆರಂಭಿಸಿದ ಹೋಮಕಾರ್ಯವು ಸಮಾಪ್ತವಾದಲ್ಲಿ ಆತನು ರಣಭೂಮಿಯಲ್ಲಿ ದೇವಾಸುರರಿಗೂ ಅದೃಶ್ಯನಾಗಿ ಯುದ್ಧ ಮಾಡುವನು. ಯಾಗ ಮುಗಿದರೆ ದೇವತೆಗಳಿಗೂ ಪ್ರಾಣಸಂಶಯ ತಪ್ಪಿದ್ದಲ್ಲ. ಇಲ್ಲಿ ದೇವತೆಗಳು ಅಮರರು. ಅವರಿಗೆ ಪ್ರಾಣ ಹೋಗುವ ಸಂದರ್ಭ ಹೇಗೆ ಉಂಟಾಗುವುದು ಎಂದರೆ- ಮಾನಧನರಿಗೆ ಅವಮಾನವು ಪ್ರಾಣಕ್ಕಿಂತ ಮಿಗಿಲು. ರಾಕ್ಷಸನೊಬ್ಬನು ವರಬಲದಿಂದ ಕೊಬ್ಬಿ ದೇವತೆಗಳನ್ನು ಸೋಲಿಸಿದರೆ ಅವರಿಗೆ ಅದು ಪ್ರಾಣ ಹೋಗುವುದಕ್ಕಿಂತ ಹೆಚ್ಚಿನ ದುಃಖ ತರುವ ಸಂಗತಿ. ಹಾಗಾಗಿ ತಡಮಾಡದೇ ಅವನನ್ನು ಕಳುಹಿಸು. ಅದು ನಮಗೂ ಕ್ಷೇಮ, ದೇವಾನುಗ್ರಹ ಸಂಪಾದಿಸುವ ದೃಷ್ಟಿಯಿಂದ ಹಾಗೂ ಶತ್ರುವನ್ನು ಕೊಲ್ಲುವ ದೃಷ್ಟಿಯಿಂದ. ಕೆಲವೊಮ್ಮೆ ಕೆಲವೊಂದು ಕಾರ್ಯಗಳನ್ನು ಆ ಕೂಡಲೇ ಸಾಧಿಸಿಬಿಡಬೇಕು. ತಡ ಮಾಡಿದರೆ ಆ ಕಾರ್ಯವೂ ಹಾಗೂ ಮುಂದಾಗುವ ಅನುಕೂಲಗಳೂ ನಷ್ಟವಾಗಬಹುದು. ಇಂದು ಮಾಡುವ ಕಾರ್ಯ ಈಗಲೇ ಮಾಡಬೇಕು ಎನ್ನುವ ಕವಿವಾಣಿ ಇದಕ್ಕೆ ಉತ್ತಮ  ನಿದರ್ಶನ._

*ತ್ಯಜ ರಾಜನ್ನಿಮಂ ಶೋಕಂ ಮಿಥ್ಯಾಸಂತಾಪಮಾಗತಮ್ ತದಿಯಂ ತ್ಯಜ್ಯತಾಂ ಚಿಂತಾ ಶತ್ರುಹರ್ಷವಿವರ್ಧಿನೀ. ಉದ್ಯಮಃ ಕ್ರಿಯತಾಂ ವೀರ ಹರ್ಷಃ ಸಮುಪಸೇವ್ಯತಾಮ್*

_ರಾಮನು ಮತ್ತೊಮ್ಮೆ ವಿಭೀಷಣನ ಮಾತಿನಿಂದ ಸೀತೆಯು ಗತಳಲ್ಲ ಎಂದು ಕೇಳುವ ಇಚ್ಛೆಯಿಂದ ನಿನ್ನ ಮಾತನ್ನು ಪುನರುಚ್ಚರಿಸು ಎಂದಾಗ ವಿಭೀಷಣನ ಮಾತು- ರಾಜಕುಮಾರ, ಹೀಗೆ ಶೋಕಪಡುವುದ ಬಿಟ್ಟು ಬಿಡು. ಇದು ಕೇವಲ ಭ್ರಾಂತಿಯಿಂದ ಬಂದ ಶೋಕ. ನೀನು ಚಿಂತಿಸಿದರೆ ಶತ್ರುಗಳ ಹರ್ಷ ಇಮ್ಮಡಿ ಆಗುವುದು. ಕಾರ್ಯೋನ್ಮುಖನಾಗು,ಉತ್ಸಾಹದಿಂದಿರು. ಈಗಲೇ ಸೌಮಿತ್ರಿಯನ್ನು ಸೇನೆಯೊಡನೆ ನನ್ನ ಜೊತೆ ಕಳುಹಿಸು. ನಾವೂ ಅನೇಕ ಬಾರಿ ಭ್ರಾಂತಿಯಿಂದ ಶೋಕಿಸುತ್ತೇವೆ. ಲೋಕದ ಸ್ಥಿತಿ ಇದು, ನಿತ್ಯನಿರಂತರ ಪ್ರಕ್ರಿಯೆ ಎಂದು ಅರಿತಾಗ ಶೋಕವು ತಾನಾಗಿಯೇ ಮರೆಯಾಗುವುದು. ಸಣ್ಣ ಸಣ್ಣ ನೋವುಗಳಿಗೂ ದೇಹವು ಅಥವಾ ನಾವು ಅಥವಾ ನಮ್ಮವರು ಶಾಶ್ವತ ಎಂಬಂತೆ ಅಶ್ರುಧಾರೆಯನ್ನೇ ಹರಿಸಿ ಮಂಕಾಗಿರುತ್ತೇವೆ. ಕವಿ ರಾಮನ ಶೋಕವನ್ನು ತೋರಿ ನೀವು ಧೃತಿಗೆಡಬೇಡಿರೆಂದು ಬಾರಿ ಬಾರಿ ಸಾರುತ್ತಿದ್ದಾನೆ. ಶೋಕ ಮರೆಯಲು ಸುಲಭ ದಾರಿ ಜೀವನೋತ್ಸಾಹ ಹಾಗೂ ನಮ್ಮ ಕರ್ತವ್ಯದಲ್ಲಿ ಪೂರ್ಣ ತೊಡಗಿಸಿಕೊಳ್ಳುವಿಕೆ. ಕರ್ತವ್ಯ ಪ್ರಜ್ಞೆ ಚೆನ್ನಾಗಿದ್ದವನಿಗೆ, ಸದಾ ಉತ್ಸಾಹದ ಚಿಲುಮೆಯಾದ ಮಾನವನನ್ನು ಶೋಕವೆಂದೂ ಬಾಧಿಸದು. ಅದು ಕ್ಷಣಿಕ ಬಂದು ಹೋಗುವುದು. ಹಾಗಾಗಿ ಅವೆರಡನ್ನು ನಾವೆಂದಿಗೂ ಬಿಡಬಾರದು._



ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩