🌹ಶಾಕುಂತಲದ ಒಂದು ಕುಸುಮ🌹

*आजन्मन: शाठ्यमशिक्षितो य: तस्याप्रमाणं वचनं जनस्य । परातिसन्धानमधीयते यैर्विद्येति ते सन्तु किलाप्तवाच: ।।*

_ಶಾರ್ಙರವನ ಕಠಿಣ ಮಾತು. ಸ್ತ್ರೀಯರಿಗೆ ಕಪಟ ಬುದ್ಧಿ ಸಹಜ. ಕೋಗಿಲೆ ತನ್ನ ಮಕ್ಕಳನ್ನು ಕಾಗೆಯ ಗೂಡಿನಲ್ಲಿಟ್ಟು ಪೋಷಿಸುವುದೇ ಉದಾಹರಣೆ ಎಂದೆಲ್ಲಾ ಶಕುಂತಲೆಯ ಮಾತನ್ನು ಮೋಸಮಾಡಲೆಂದೇ ನುಡಿದ ವಚನವಿರಬೇಕು ಎಂದು ರಾಜ ನುಡಿದಾಗ ಸಿಟ್ಟಿನಿಂದ ಋಷಿ ಹೇಳುವ ಮಾತಿದು. ಇವನ ಮಧುರ ವಚನವನ್ನು ಕೇಳಿದಿರಲ್ಲ!. ಯಾರಿಗೆ ಹುಟ್ಟಿನಿಂದ ಆರಂಭಿಸಿ ಮೋಸ ಎಂಬುದೇ ತಿಳಿದಿಲ್ಲವೋ ಅವರಾಡುವ ಮಾತು ಒಪ್ಪಲಾಗುವುದಿಲ್ಲವಂತೆ, ಯಾರು ಬೇರೆಯವರಿಗೆ ವಂಚನೆ ಮಾಡುವುದನ್ನೇ ಒಂದು ವಿದ್ಯೆಯೆಂದು ಶ್ರದ್ಧೆಯಿಂದ ಕಲಿಯುತ್ತಾರೋ ಅವರಾಡುವ ಮಾತು ಮಾತ್ರ ನಂಬಲರ್ಹವಂತೆ. ಆಹಾ ಎಂತಹ ವಿಪರ್ಯಾಸ! ಅಪ್ರಸ್ತುತಪ್ರಶಂಸೆ ಹಾಗೂ ರೂಪಕ ಅಲಂಕಾರಗಳು. ಶಕುಂತಲೆ ಕಾಡಿನಲ್ಲಿ ಮಹರ್ಷಿಗಳ ಬಳಿ ಬೆಳೆದುಬಂದವಳು. ಆಶ್ರಮದ ಆ ಪರಿಸರದಲ್ಲಿ ಮೋಸ ವಂಚನೆಗಳೆಂಬ ಪದಗಳೇ ಅರ್ಥ ಕಳೆದುಕೊಳ್ಳುವ ಪ್ರಶಾಂತ ವಾತಾವರಣ. ಅಂತಹ ಪರಿಸರದಲ್ಲೇ ತನ್ನ ಬಾಲ್ಯ ಕಳೆದ ಶಕುಂತಲೆ ಕಪಟವೇನೆಂದೇ ಅರಿಯಳು. ಆದರೆ ರಾಜ ನುಡಿಯುತ್ತಿದ್ದಾನೆ ಇವಳು ನನ್ನನ್ನು ಮೋಸಗೊಳಿಸಲೆಂದೇ ಹೀಗೆಲ್ಲಾ ಮಾತನಾಡುತ್ತಿದ್ದಾಳೆಂದು , ಯಾಕಾದರೂ ಅವಳು ಹೀಗೆ ಮಾಡಿಯಾಳು? ರಾಜನ ಈ ಆಪಾದನೆ ಒಪ್ಪಲಾಗದು. ಇನ್ನು ರಾಜಪುತ್ರರು ಅಧ್ಯಯನದ ಕಾಲದಲ್ಲಿ ಅರವತ್ತ ನಾಲ್ಕು ವಿದ್ಯೆ ಕಲಿಯುವುದು ಪ್ರಸಿದ್ಧ ಹಾಗೂ ಸಹಜ. ಈ ವಿದ್ಯೆಗಳಲ್ಲಿ ವಂಚನೆ ಮಾಡುವ ವಿದ್ಯೆಯೂ ಒಂದು. ಹೀಗೆ ವಂಚನೆ ಮಾಡುವುದನ್ನು ಗುರುಮುಖೇನ ಪಾಠ ಕಲಿತ ಅದನ್ನೇ ಮಾಡಿತ್ತಿರುವ ರಾಜನ ಮಾತು ಆಪ್ತರ ಮಾತಿನಂತೆ ಸತ್ಯವಂತೆ , ಎಂತಹ ವಿಪರೀತದ ಮಾತು! ರಾಜನು ಮೋಸಮಾಡುವುದು ಆಶ್ರಮವಾಸಿಗಳು ಸತ್ಯ ನುಡಿಯುವುದು ಸಹಜ. ಇಲ್ಲಿ ರಾಜನ ಮಾತು ಇವೆರಡನ್ನು ವಿಪರೀತವಾಗಿ ಹೇಳುತ್ತಿದೆ ,  ಇದನ್ನೆಲ್ಲ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ ರಾಜ ಎಂದು ಶಾರ್ಙರವನ ಮತ. ನಾವೂ ಎಷ್ಟೋ ಬಾರಿ ವಂಚಕರಿಂದಲೇ ಒಳ್ಳೆಯ ಮಾತನ್ನು ಕೇಳಿಸಿಕೊಂಡು ತಲೆ ತಗ್ಗಿಸಬೇಕಾಗುತ್ತದೆ. ಅಂತಹ ಸಂದರ್ಭವನ್ನು ಸೃಷ್ಟಿ ಮಾಡಿಕೊಳ್ಳದೆ ಗೌರವಯುತ ಬಾಳನ್ನು ನಡೆಸೋಣ._


📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩