💐ಪ್ರತಿಮಾನಾಟಕದ ಒಂದು ಸುರಭಿ💐

*मेरुश्चलन्निवयुगक्षयसन्निकर्षे शोषं व्रजन्निव महोदधिरप्रमेय: । सूर्य: पतन्निव च मण्डलमात्रलक्ष्य: शोकाद्भृशं शिथिलदेहमतिर्नरेन्द्र: ।।*

_ಕಂಚುಕಿಯು ದಶರಥನನ್ನು ವರ್ಣಿಸುವ ಪರಿ. ರಾಮನು ಸೀತೆ ಹಾಗೂ ಲಕ್ಷ್ಮಣನ ಜೊತೆಗೆ ಅಪ್ಪನಿಗೆ ಕಾಯದೇ ತೆರಳಿದ್ದಾನೆ. ಅವರ ಗಮನದ ವಾರ್ತೆ ಕೇಳಿದ ದಶರಥ ಕೃತಕ ಸಮುದ್ರದ ಸಮೀಪದಲ್ಲಿ ನಿರ್ಮಿಸಲ್ಪಟ್ಟ ಶಯ್ಯಾಗೃಹದಿಂದ ಬೇಗನೇ ಎದ್ದು ಬಂದಿದ್ದಾನೆ. ಅವನ ಸ್ಥಿತಿ ಈ ಶ್ಲೋಕದ ವರ್ಣನೆ. ಯುಗದ ಕೊನೆಯಾಗುವ ಸಮಯ ಸಮೀಪಿಸಿದಾಗ ಸ್ಥಿರವಾಗಿ ನಿಂತಿದ್ದ ಮೇರು ಪರ್ವತವು ಚಲಿಸುವಂತೆ, ಎಂದಿಗೂ ಬತ್ತದಿರುವ ಸಮುದ್ರವು ಒಣಗಲು ಪ್ರಾರಂಭಿಸಿದಂತೆ, ಸೂರ್ಯನು ತನ್ನ ಪ್ರಖರತೆಯನ್ನು ಕಳೆದುಕೊಂಡು ಕೇವಲ ಮಂಡಲದಲ್ಲಿ ಮಾತ್ರ ಹೆಸರಿಗೆ ಉಳಿಯುವಂತೆ , ಶೋಕದಿಂದ ಆಯಾಸಗೊಂಡ ದೇಹ ಮನಸ್ಸಿನಿಂದ ಕೂಡಿ ನಿಟ್ಟುಸಿರುಬಿಡುತ್ತಿದ್ದಾನೆ. ಮೇರುಪರ್ವತ ಚಲಿಸಲು ಸಾಧ್ಯವಿಲ್ಲ. ಅದು ಚಲಿಸುವುದೆಂದರೆ ಯುಗದ ಕೊನೆಯಲ್ಲಿ ಮಾತ್ರ. ಅಂತೆಯೇ ನಮ್ಮ ರಾಜನು ಧೈರ್ಯ ಕಳೆದುಕೊಂಡವನಲ್ಲ. ಆದರೆ ಪುತ್ರವಿರಹದ ಶೋಕವು ಅವನ ಧೈರ್ಯವನ್ನು ಕಸಿದಿದೆ. ಅಪ್ರಮೇಯವಾದ ಅಂದರೆ ಸರಿಸಾಟಿಯಿಲ್ಲದ ನೀರನ್ನು ಟಿ ಎಂ ಸಿ ಗಳಲ್ಲಿ ಲೆಕ್ಕಹಾಕಲು ಸಾಧ್ಯವಿಲ್ಲದ ಎಂದೂ ಬತ್ತದ ಸಮುದ್ರವು ಬತ್ತುವಂತಿದೆ. ದಶರಥನ ಜೀವನೋತ್ಸಾಹವೆಂಬ ಸಮುದ್ರ ಘೋರಶಾಪಾದಿಗಳ ಅಥವಾ ಘೋರಯುದ್ಧಗಳ ಕಾಲದಲ್ಲೂ ಬತ್ತಿರಲಿಲ್ಲ. ಆದರೆ ಪುತ್ರಪ್ರೇಮವು ದೂರವಾಗುವುದನ್ನು ಸಹಿಸದೆ ಅವನ ಉತ್ಸಾಹವನ್ನು ಕುಂದಿಸಿದೆ. ಪ್ರಖರ ಕಿರಣಗಳಿಂದ ಲೋಕದಲ್ಲಿ ತಪನನೆಂದೇ ಸೂರ್ಯ ಪ್ರಸಿದ್ಧ. ಅವನು ಸುಡುತ್ತಿದ್ದರೆ ಮಾತ್ರ ಅವನಿಗೆ ಕಾಂತಿ. ಅಂತಹ ಸೂರ್ಯನು ತನ್ನ ಕಾಂತಿ ಕಳೆದುಕೊಂಡು ನಿಸ್ತೇಜನಾಗಿ ಬೆಳಗುವಂತೆ ಕಾಣುತ್ತಿದೆ. ಸದಾ ಲವಲವಿಕೆಯಿಂದ ರಾಜ ಕಾರ್ಯಗಳನ್ನು ನೆರವೇರಿಸುತ್ತಿದ್ದ ರಾಜನು ಇಂದು ರಾಮನ ಸಾಮೀಪ್ಯ ಇಲ್ಲದೆ ಕಳೆಗುಂದಿದ ಕಾಂತಿಯಿಂದ ಕೂಡಿದ್ದಾನೆ. ಈ ಮೂರು ದೃಷ್ಟಾಂತಗಳ ಮೂಲಕ ಕವಿಯು ಅವನ ಸಾವು ಸಮೀಪಿಸಿರುವುದನ್ನೂ ಸೂಚ್ಯವಾಗಿ ಹೇಳುತ್ತಿದ್ದಾನೆ. ಪುತ್ರ ಶೋಕಂ ನಿರಂತರಂ ಎಂಬ ಮಾತಿನಂತೆ ಮಕ್ಕಳ ವಿರಹದ ಶೋಕ ರಾಜನ ಜೀವನಕ್ಕೆ ಕೊನೆಯನ್ನು ಕಾಣಿಸುತ್ತಿದೆ. ಉಪಮಾ ಅಲಂಕಾರ. ನಾವೂ ಯಾರಿಂದಲಾದರೂ ದೂರ ಮಾಡಲ್ಪಟ್ಟಾಗ ದಶರಥನಂತೆ ದೂರ ಹೋಗಲು ಸಿದ್ದರಾಗದೆ  ರಾಮನಂತೆ ಸ್ಥೈರ್ಯವನ್ನು ತಂದುಕೊಳ್ಳೋಣ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩