🌹ಶಾಕುಂತಲದ ಒಂದು ಸುಂದರ ಸುಮ🌹

*व्यपदेशमाविलयितुं किमीहसे जनमिमं च पातयितुम् । कूलंकषेव सिन्धु: प्रसन्नमम्भस्तटतरुं च ।।*

_ಶಕುಂತಲೆ ದುಷ್ಯಂತನನ್ನು ನಿಂದಿಸುತ್ತಾಳೆ. ಮುಗ್ಧ ಮನದ ಮಾನಿನಿಗೆ ಮಾತು ಕೊಟ್ಟು ವಂಚಿಸಿದೆ  ಎಂದೆಲ್ಲಾ ಹೇಳಿದಾಗ ರಾಜನಾಡುವ ಮಾತು. ಇಂತಹ ಕೆಟ್ಟ ಮಾತುಗಳನ್ನು ನಾನು ಕೇಳಲಾರೆ. ನಿನ್ನ ಈ ವರ್ತನೆ ನಿನ್ನ ಕುಲಕ್ಕೆ ಕಳಂಕ ತರಲೂ ಮತ್ತು ನನ್ನನ್ನು ಕೀರ್ತಿಯ ಪರ್ವತದ ಶಿಖರದಿಂದ ಕೆಳಗೆ ನೂಕಲು ಸಮರ್ಥವಾಗಿದೆ. ಇದು ಹೇಗೆಂದರೆ ದಡವನ್ನು ನಿಧಾನವಾಗಿ ಕೊರೆಯುವ ನದಿಯು ತಿಳಿಯಾದ ನೀರನ್ನು ಕೆಸರು ಮಾಡಲೂ , ದಂಡೆಯ ಮರವನ್ನು ಕೆಡವಲೂ ಪ್ರಯತ್ನಿಸುವಂತಿದೆ ನಿನ್ನ ಪ್ರಯತ್ನ. ಏಕೆ ನಿನಗೆ ಇಂತಹ ಹುಚ್ಚು ಪ್ರಯತ್ನ? ದಡದೊಂದಿಗೆ ಸಂಘರ್ಷ ಮಾಡುವ ನದಿಯು ನದಿಯ ನೀರನ್ನು ಕಲುಷಗೊಳಿಸಿ, ಬಾನೆತ್ತರಕ್ಕೆ ಬೆಳೆದ ಮರವನ್ನು ಕೆಡಹಲು ಪ್ರಯತ್ನಿಸುತ್ತದೆ. ನೀನು ಕೂಡ ನದಿಯಂತೆಯೇ ಮಾಡುತ್ತಿರುವೆ. ಜನರು ಯಾವುದರಿಂದ ವ್ಯವಹರಿಸುವರೊ ಅದು ಕುಲವೆಂದು ಕರೆಯಲ್ಪಡುತ್ತದೆ. ಅಂತಹ ಕುಲಕ್ಕೆ ಕಳಂಕ ತರುವ ಪ್ರಯತ್ನ ನಡೆಸುತ್ತಿರುವೆಯಲ್ಲ! ಬರಿದೆ ನನ್ನ ಕುಲ ಮಾತ್ರವಲ್ಲ ಇಂತಹ ಸ್ವೇಚ್ಛೆಯಾಗಿ ಬದುಕುವ ಹೆಣ್ಣನ್ನು ಹೆತ್ತ ನಿನ್ನ ಕುಲದ ಮರ್ಯಾದೆಯನ್ನು ನಿನ್ನ ಮಾತುಗಳಿಂದ ಕಳೆಯುತ್ತಿರುವೆ. ನನ್ನ ಮನವು ಹಾಗೂ ಆಚಾರ ನಿರ್ಮಲವಾಗಿದೆ ನದಿಯ ನಿರ್ಮಲ ಜಲದಂತೆ. ನೀನು ಪ್ರವಾಹರೂಪದಲ್ಲಿ ಬಂದು ಅದನ್ನು ಕೆಡಿಸುತ್ತಿರುವೆ. ಅಷ್ಟಲ್ಲದೇ ಈಗಾಗಲೇ ಜಗದೆಲ್ಲೆಡೆ ಪ್ರಸಿದ್ಧವಾದ ಈ ದುಷ್ಯಂತನ ಕೀರ್ತಿಯೆಂಬ ವೃಕ್ಷವನ್ನು ಬೀಳಿಸಲು ಪ್ರಯತ್ನಿಸುತ್ತಿರುವೆ. ಹೇಗಾದರೂ ಮಾಡಿ ಕಳಂಕ ಹಚ್ಚಿಯಾದರೂ ತನ್ನನ್ನು ಒಪ್ಪಿಸಬೇಕೆಂದು ನೀನು ಪ್ರಯತ್ನಿಸುತ್ತಿರುವೆ ಎಂಬುದು ದುಷ್ಯಂತನ ಮಾತು.ಲೋಕದಲ್ಲಿ ತಪ್ಪು ನಡೆಗಳು ಇಲ್ಲದಿದ್ದಾಗಲೂ ತಪ್ಪು ನುಡಿಗಳಿಂದ ನಮ್ಮನ್ನು ವಂಚಿಸುವರನೇಕರು. ಅಂತಹವರ ಮಾತಿಗೆ ಬೀಳದೇ ನಮ್ಮ ಕೀರ್ತಿಯೆಂಬ ಉನ್ನತ ವೃಕ್ಷವನ್ನು ಗಟ್ಟಿಯಾಗಿ ನಿಲ್ಲುವಂತೆ ಪ್ರಾಮಾಣಿಕರಾಗಿ ಧೈರ್ಯವಾಗಿ ವ್ಯವಹರಿಸೋಣ. ಉಪಮಾ ಅಲಂಕಾರ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩