📃 ವೇದ- ಧರ್ಮ ಭಾಗ- ೭

*ವೇದಗಳ ಸಂಹಿತೆಗಳು*

_ಯಜುರ್ವೇದದ ಎರಡು ಸಂಹಿತೆಗಳು ಪ್ರಸಿದ್ಧವಾಗಿವೆ. ಕೃಷ್ಣ ಹಾಗೂ ಶುಕ್ಲ ಯಜುರ್ವೇದ ಸಂಹಿತೆಗಳು. ಯಜು ಎಂಬ ಶಬ್ದದ ಧಾತು ಯಜ್. ಇದರರ್ಥ ದೇವಪೂಜೆ, ದಾನ, ಸ್ತುತಿ ಎಂದೆಲ್ಲ ಇದೆ. ದೇವತೆಗಳನ್ನು ಆಹ್ವಾನಿಸಲು ಆಯಾ ದೇವತೆಗೆ ಸಂಬಂಧಿಸಿದ ಮಂತ್ರಗಳನ್ನು ಉಚ್ಚರಿಸಬೇಕು. ಇಂತಹ ದೇವತೆಗಳ ಆಹ್ವಾನದ ಬಗೆ, ಅವರನ್ನು ಪೂಜಿಸುವ ವಿಧಾನವನ್ನು ಸುಂದರವಾಗಿ ನಿರೂಪಿಸುತ್ತದೆ ಈ ಸಂಹಿತೆ. ಶತಪಥ ಬ್ರಾಹ್ಮಣದ ಈ ಮಂತ್ರ ಹೀಗಿದೆ *ಆದಿತ್ಯಾನಿಮಾನಿ ಶುಕ್ಲಾನಿ ಯಜೂಂಷಿ ವಾಜಸನೇಯೇನ ಯಾಜ್ಞವಲ್ಕ್ಯೇನ ಆಖ್ಯಾಯಂತೆ* ಯಾಜ್ಞವಲ್ಕ್ಯ ಮಹರ್ಷಿಗಳು ಸೂರ್ಯನಿಂದ ಉಪದೇಶ ಪಡೆದ ಈ ಮಂತ್ರಗಳೇ ಶುಕ್ಲವೆಂದೂ, ವೈಶಂಪಾಯನರು ತಮ್ಮ ಶಿಷ್ಯರಿಗೆ ಉಪದೇಶಿಸಿದ ಅದೇ ಮಂತ್ರಗಳು ಕೃಷ್ಣವೆಂದೆನಿಸಿದವು. ಈ ಶುಕ್ಲ ಕೃಷ್ಣ ವಿಭಾಗ ಹೇಗೆ ಅಂದರೆ ಸಂಹಿತೆ ಹಾಗೂ ಅವುಗಳ ವ್ಯಾಖ್ಯಾನ ರೂಪವಾದ ಬ್ರಾಹ್ಮಣ ಮಂತ್ರಗಳು ಸೇರಿ ಒಂದೇ ಕಡೆ ಇದ್ದಾಗ ಕೃಷ್ಣ ಪ್ರತ್ಯೇಕವಾಗಿ ಇದ್ದಾಗ ಶುಕ್ಲ ಎಂದು ವಿದ್ವಾಂಸರ ಅಭಿಮತ. ಕೃ. ಯಜುರ್ವೇದದ ಈಗ ಲಭ್ಯವಿರುವ ಎರಡು ಸಂಹಿತೆಗಳು  ತೈತ್ತಿರೀಯ ಹಾಗೂ ಮೈತ್ರಾಯಣ. ಶು. ಯಜುರ್ವೇದದ  ಸಂಹಿತೆ ವಾಜಸನೇಯ ಸಂಹಿತೆ. ಈ ವಾಜಸನೇಯ  ಸಂಹಿತೆಯಲ್ಲಿ ಒಟ್ಟು ೪೦ ಅಧ್ಯಾಯಗಳಿವೆ. ಅಂತಿಮ ೧೫ ಅಧ್ಯಾಯಗಳು ಖಿಲವೆಂದು ಕರೆಸಲ್ಪಟ್ಟಿವೆ.
ಮೊದಲ ಎರಡು ಅಧ್ಯಾಯಗಳಲ್ಲಿ ದರ್ಶಪೌರ್ಣಮಾಸ ಯಾಗಕ್ಕೆ ಸಂಬಂಧಿಸಿದ ಮಂತ್ರಗಳು ವಿವರಣೆಗಳು , ಮೂರನೇ ಅಧ್ಯಾಯದಲ್ಲಿ ಅಗ್ನಿಹೋತ್ರ ಕ್ಕೆ ಸಂಬಂಧಿಸಿದ ಮಂತ್ರಗಳು, ಚಾತುರ್ಮಾಸ್ಯ ವ್ರತದ ಮಂತ್ರಗಳು, ೪ ರಿಂದ ೧೦ ಅಧ್ಯಾಯದವರೆಗೆ ಸೋಮಯಾಗದ ಅಂಗ ಯಜ್ಞಗಳಾದ ಅಗ್ನಿಷ್ಟೋಮ ಮುಂತಾದವುಗಳ ಬಗ್ಗೆ, ೧೧ ರಿಂದ ೧೫ ಅಧ್ಯಾಯದವರೆಗೆ ಅಗ್ನಿ ಚಯನ ( ಅಗ್ನಿಯನ್ನು ಹೇಗೆ ಉತ್ಪಾದಿಸುವುದು,  ವಿಧಾನಗಳು) ವೇದಿ ಅಂದರೆ ರೇಖಾಗಣಿತಾಕೃತಿಯ ನೂರಕ್ಕೂ ಮೀರಿದ ಕುಂಡಗಳ ನಿರ್ಮಾಣದ ಬಗ್ಗೆ, ೧೬ ರಲ್ಲಿ ರುದ್ರಮಂತ್ರಗಳು, ೧೮ ರಲ್ಲಿ ವಸೋರ್ಧಾರಾ ( ಹೋಮದ ಕೊನೆಗೆ ಪೂರ್ಣಾಹುತಿಯನ್ನು ಇದೇ ಮಂತ್ರದಿಂದ ನೀಡುವುದು ವಾಡಿಕೆ ) ಮಂತ್ರಗಳು, ೧೯ ರಿಂದ ೨೧ ರವರೆಗೆ ಸೌತ್ರಾಮಣಿ ಎಂಬ ಯಜ್ಞ ವಿವರಣೆ , ೨೨ ರಿಂದ ೨೫ ರವರೆಗೆ ಹಿಂದಿನ ರಾಜರೆಲ್ಲಾ ಹೆಚ್ಚೆಚ್ಚು ಆಚರಿಸಿದ  ಅಶ್ವಮೇಧದ ಬಗ್ಗೆ ವಿವರಣೆ,ಇನ್ನು ೨೬ ರಿಂದ ೨೯ ಅಧ್ಯಾಯ ಖಿಲ ಮಂತ್ರಗಳು( ಸ್ವರಗಳಿಲ್ಲದೇ ಸ್ವಲ್ಪ ಹಾಡಿನ ರೀತಿಯಲ್ಲಿ ಹೇಳುವ ಮಂತ್ರಗಳು), ೩೦ ರಲ್ಲಿ ಪುರುಷಮೇಧ ಎಂಬ ಯಜ್ಞದ ಪ್ರಕ್ರಿಯೆ ಹಾಗೂ ಮಂತ್ರಗಳು, ೩೧ ರಲ್ಲಿ ಪುರುಷಸೂಕ್ತ, ೩೨-೩೩ ರಲ್ಲಿ ಸರ್ವಮೇಧಯಜ್ಞ , ೩೪ ರಲ್ಲಿ ಶಿವಸಂಕಲ್ಪಮಂತ್ರಗಳು ,  ( ಮಹಾನ್ಯಾಸ ಹೇಳುವಾಗ ಬರುವ ಐವತ್ತಕ್ಕೂ ಹೆಚ್ಚು ಮಂತ್ರಗಳು) ೩೫ ರಲ್ಲಿ ಪಿತೃಮೇಧದ ಬಗ್ಗೆ ಮಾಹಿತಿ, ೩೬-೩೮ ರವರೆಗೆ ಪ್ರವರ್ಗ್ಯಭಾಗದ ವರ್ಣನೆ , ಇನ್ನು ಕೊನೆಯ ಎರಡು ಅಧ್ಯಾಯಗಳಲ್ಲಿ ಆಧ್ಯಾತ್ಮಿಕ ತತ್ವಗಳ ವಿವೇಚನೆ ಮಾಡಿರುವ ಕಾರಣ ಅವುಗಳನ್ನೇ ಉಪನಿಷತ್ತುಗಳು ಎಂದಿದ್ದಾರೆ. ಉಪನಿಷತ್ತುಗಳು ವೇದದ ಕೊನೆಯ ಭಾಗವೆಂದು ಹಲವರು ಪ್ರತಿಪಾದಿಸಿರುವುದು ತಪ್ಪು. ಏಕೆಂದರೆ ಐವತ್ತಕ್ಕೂ ಹೆಚ್ಚು ಉಪನಿಷತ್ತುಗಳು ವೇದದ ಮಧ್ಯದಲ್ಲಿಯೇ ಬಂದಿವೆ. ಹೀಗಾಗಿ ವೇದಮಂತ್ರಗಳನ್ನು ಜ್ಞಾನ ಕಾಂಡ ಮತ್ತು ಕರ್ಮಕಾಂಡ ಎಂದು ವಿಭಾಗಿಸಿರುವುದೇ ಸರಿಯಲ್ಲ. ಯಜ್ಞಗಳನ್ನು ಪ್ರತಿಪಾದಿಸುತ್ತಾ ನಮ್ಮ ಕರ್ಮಗಳೆಲ್ಲ ಯಜ್ಞ ರೂಪ ಪಡೆದಾಗ ಮೋಕ್ಷ ದೊರಕುವುದೆಂಬುದು ಎಲ್ಲಾ ವೇದಗಳ ಸಾರ.(  ಈ ವಾದಕ್ಕೆ ಆಧಾರ ಕೆ ಸ್ ನಾರಾಯಣ ಆಚಾರ್ಯರು) ಹಾಗಾಗಿ ವೇದಗಳ ಅಂತ್ಯದಲ್ಲಿರುವುದು ಮಾತ್ರವಲ್ಲ , ವೇದವೆಲ್ಲವೂ ಉಪನಿಷತ್ತೇ ಎಂದರೆ  ಸರಿಯಾಗುವುದು‌. ಪ್ರಸಿದ್ಧ ದಶ ಉಪನಿಷತ್ತುಗಳಲ್ಲಿ ಮೊದಲನೆಯ ಈಶ ಹಾಗೂ ಬೃಹದಾರಣ್ಯಕ ಉಪನಿಷತ್ತುಗಳು ಸಂಹಿತೆ ಹಾಗೂ ಬ್ರಾಹ್ಮಣದಲ್ಲಿ ಬರುವಂಥಹದ್ದು. ಆಧ್ಯಾತ್ಮಿಕ ಅರ್ಥ ಒಳಗೊಂಡಿರುವ ವೇದದ ಭಾಗಗಳಿಗೆ ಉಪನಿಷತ್ತು ಎನ್ನಬಹುದೇ ಹೊರತು ವೇದದ ಕೊನೆಯ ಮಂತ್ರಗಳೆಂದಲ್ಲ. ಯಜುರ್ವೇದದ ಯಜ್ಞವು ಭಗವಂತನ ಆರಾಧನಾ ಕ್ರಿಯೆ. ಋಗ್ವೇದವು ಅಲ್ಲಿಯ ಸ್ತೋತ್ರ. ಸಾಮವೇದವು ಭಾವನೆ ತುಂಬಿ ಹಾಡಿದ ಪದ್ಯ. ಹೀಗೆ ಹೇಳಬೇಕೇ ಹೊರತು ನಿರ್ದಿಷ್ಟ ಭಾಗವನ್ನು ಕರ್ಮಕಾಂಡವೆಂದೂ , ಜ್ಞಾನ ಕಾಂಡವೆಂದೂ ವಿಭಾಗ ಮಾಡುವುದು ಸರಿಯಲ್ಲ. ಮೀಮಾಂಸಕರು ಕರ್ಮವೇ ಶ್ರೇಷ್ಠ ಎನ್ನುತ್ತಾ ಈ ಕಾರ್ಯ ಮೊದಲಿಗೆ ಮಾಡಿರಬೇಕು. ಆದರೆ *ಕರ್ಮ ಬ್ರಹ್ಮೋದ್ಭವಂ ವಿದ್ಧಿ* ಎಂಬ ಗೀತೆಯ ತತ್ವ ಮರೆಯಲಾದೀತೇ! ಮುಂದೆ ವೇದಾಂತಿಗಳೂ ಕೆಲವರು ಅವರು ಬ್ರಹ್ಮನನ್ನು ನಿರಾಕರಣೆ ಮಾಡಿದರೆಂದು ತಾವು ಕರ್ಮವನ್ನು ನಿರಾಕರಣೆ ಮಾಡಿದರು. ಆದರೆ ವ್ಯಾಸರು ಬ್ರಹ್ಮಸೂತ್ರಗಳ ಜೊತೆಗೆ ಬ್ರಹ್ಮನ ಆರಾಧನಾ ರೂಪವಾದ ಕರ್ಮಗಳಿಗೆ ಸೂತ್ರಗಳನ್ನು ರಚಿಸುವಂತೆ ಆಜ್ಞಾಪಿಸಿದರು. ಮುಂದೆ ಇದೇ ಪರಂಪರೆಯ ಬೋಧಾಯನ ಮಹರ್ಷಿಗಳು ಪೂರ್ವೋತ್ತರ ಮೀಮಾಂಸಾ ಶಾಸ್ತ್ರವನ್ನು ಒಂದೇ ಶಾಸ್ತ್ರವೆಂದು ಪರಿಗಣಿಸಿ ವೃತ್ತಿ ಬರೆದರು. ಹಾಗಾಗಿ ವೇದದ ಪ್ರಯೋಜನವನ್ನು  ಯಜ್ಞಾದಿಗಳ ಅನುಷ್ಠಾನಕ್ಕಾಗಿ ಹೇಳಿದ್ದು ಸೌಕರ್ಯಾರ್ಥವಾಗಿ , ಆಧ್ಯಾತ್ಮಿಕ ಅರ್ಥ ಜಿಜ್ಞಾಸಾರೂಪವಾದ ವೇದಾಂತವನ್ನಾಗಿ ಸ್ವೀಕರಿಸಬೇಕೇ ಹೊರತು ಕರ್ಮ ಅಥವಾ ಬ್ರಹ್ಮ ನಿರಾಕರಣೆಯ ಉದ್ದೇಶದಿಂದಲ್ಲ. ವೇದಗಳಲ್ಲಿ ಬರುವ ಕಥೆಗಳಲ್ಲಿ ಮೇಲುನೋಟಕ್ಕೆ ಒಂದು ಅರ್ಥ ಗೋಚರಿಸಿದರೆ ,  ಸಾಂಕೇತಿಕ ಸ್ವರೂಪದ ಗಹನಾರ್ಥವನ್ನೂ ಒಳಗೊಂಡಿವೆ.ಮುಂದುವರಿಯುವುದು ( ಕೆಲವು ವಾಕ್ಯಗಳು ನಾರಾಯಣಾಚಾರ್ಯರ ಪುಸ್ತಕದಿಂದ ಎರವಲು ಪಡೆದದ್ದು)_


📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩