💐ಪ್ರತಿಮಾ ನಾಟಕದ ಒಂದು ಕುಸುಮ💐

*नागेन्द्रा यवसाभिलाषविमुखा: सास्नेक्षणा वाजिनो ह्रेषाशून्यमुखा: सवृद्धवनिताबालाश्च पौरा जना: । त्यक्ताहारकथा: सुदीनवदना: क्रन्दन्त उच्चैर्दिशा रामो याति यया सदारसहजस्तामेव पश्यन्त्यमी ।।*

_ಕಂಚುಕಿ ಆಡುವ ಮಾತು. ಪ್ರತೀಹಾರಿಯ ಬಳಿ ಹೇಳುತ್ತಾನೆ. ರಾಮನ ನಿರ್ಗಮನದಿಂದ ಅಯೋಧ್ಯೆಗೆ ಅಯೋಧ್ಯೆಯೇ ಶೂನ್ಯವಾದಂತಿದೆ. ಯಾಕೆಂದರೆ- ಗಜಶಾಲೆಯ ಕರಿಗಳು ಎಳೆ ಹುಲ್ಲಿನ ತುತ್ತನ್ನು ತಿನ್ನುವುದನ್ನು ಬಿಟ್ಟು ರಾಮನ ಪ್ರೀತಿಯನ್ನೇ ಚಿಂತಿಸುತ್ತಿವೆ. ಅಶ್ವಗಳು ಕೇವಲ ಕಣ್ಣಿನಲ್ಲಿ ನೀರು ಮಾತ್ರ ತುಂಬಿಕೊಂಡಿಲ್ಲ ಹೊರತು ಕೆನೆಯುವುದನ್ನೇ ಬಿಟ್ಟುಬಿಟ್ಟಿವೆ. ಇನ್ನು ಜನರ ಬಗ್ಗೆ ಹೇಳುವುದಾದರೆ ವೃದ್ಧರು ವನಿತೆಯರು ಬಾಲರಾದಿಯಾಗಿ ಎಲ್ಲರೂ ಪೌರರು ಸಂತೋಷವಾಗಿ ಮಾತನಾಡುವುದನ್ನೂ, ಆಹಾರ ಸ್ವೀಕರಿಸುವುದನ್ನೂ ಬಿಟ್ಟುಬಿಟ್ಟಿದ್ದಾರೆ. ಕಾಂತಿ ಕಳೆದ ಮುಖದಲ್ಲಿ ಸದಾ ಕಣ್ಣೀರು ಸುರಿಸುತ್ತಿದ್ದಾರೆ. ಇವರೆಲ್ಲರ ನೋಟವೂ ಒಂದೇ ದಿಕ್ಕಿನೆಡೆ ಕೇಂದ್ರೀಕೃತವಾಗಿದೆ ರಾಮ ಯಾವ ದಿಕ್ಕಿನತ್ತ ಪಯಣಿಸಿದನೋ ಆ ಕಡೆಗೆ. ಸೀತಾಲಕ್ಷ್ಮಣರೊಡಗೂಡಿ ರಾಮ ಅಯೋಧ್ಯೆಯೊಂದ ವನಕ್ಕೆ ತೆರಳುತ್ತಿರುವನು. ಅಯೋಧ್ಯೆಯ ಜೀವರಾಶಿಯೆಲ್ಲವೂ ರಾಮನಿಗಾಗಿ ಮಿಡಿಯುತ್ತಿದೆ. ಗಜಗಳು ಆಹಾರ ತಿನ್ನುವುದನ್ನು ಬಿಟ್ಟು ಇನ್ನು ನಮಗೆ ರಾಮನ ಪ್ರೀತಿ ಸಿಗುವುದಿಲ್ಲವಲ್ಲ ಎಂದು ಚಿಂತಿಸುತ್ತಾ ರಾಮ ಹೋದ ಕಡೇಗೆ ನೋಡುತ್ತಿವೆ. ಅಶ್ವಗಳು ಕಣ್ಣೀರಿಡುತ್ತಾ ಖುಷಿಯ ಸಂಕೇತವಾಗಿರುವ ಕೆನೆಯುವಿಕೆಯನ್ನು ತ್ಯಜಿಸಿವೆ. ಊರ ಜನರೆಲ್ಲರೂ ಆಹಾರ ನಿದ್ರಾದಿಗಳನ್ನು ತ್ಯಜಿಸಿ ಸುಖದ ವಾರ್ತಾಲಾಪಗಳನ್ನೂ ತ್ಯಜಿಸಿ ಕಳೆಗುಂದಿದ ಮುಖದಿಂದ ಕೂಡಿ( ದು:ಖದ ಕಾರಣ ಎಂದಿನ ಕಾಂತಿ ಇಲ್ಲದ ಮುಖ) ಸತತ ಅಳುತ್ತಿದ್ದಾರೆ. ತಮ್ಮ ಆಪ್ತನೊಬ್ಬ ತಮ್ಮನ್ನು ಬಿಟ್ಟು ದೂರ ತೆರಳುವುದನ್ನು ಅವರಾರೂ ಸಹಿಸುತ್ತಿಲ್ಲ. ಎಲ್ಲರ ದೃಷ್ಟಿಯೂ ರಾಮ ಹೋದ ದಿಕ್ಕಿನೆಡೆಗೇ ನೆಟ್ಟಿದೆ. ಯಾರೊಬ್ಬರೂ ಸಂತೋಷದಿಂದಿಲ್ಲ.ರಾಮನಿಲ್ಲದ ಅಯೋಧ್ಯೆ ಆರಾಮವಾಗಿಲ್ಲ ಎಂದು ಕವಿ ಕಂಚುಕಿಯ ಮಾತಿನಲ್ಲಿ ಸಾರುತ್ತಿದ್ದಾನೆ. ನಾವೂ ನಮ್ಮ ಹೃದಯದಲ್ಲಿ ರಾಮನನ್ನು ತುಂಬಿಕೊಂಡು ಸುಖಿಸೋಣ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩