🌹ಶಾಕುಂತಲದ ಒಂದು ಸುಮ🌹

*कुमुदान्येव शशाङ्क: सविता बोधयति पङ्कजान्येव । वशिनां हि परपरिग्रहसंश्लेषपराङ्मुखी वृत्ति: ।।*

_ಶಾರ್ಙರವನು ಶಕುಂತಲೆಯನ್ನು ನಿಂದಿಸಲು ತೊಡಗಿದಾಗ ರಾಜನಾಡುವ ಮಾತು. ತಪಸ್ವಿಯೇ ಇವಳೊಡನೇಕೆ ವಾದಿಸುವೆ? ಚಂದ್ರನು ಕುಮುದಗಳನ್ನು ಮಾತ್ರ ಅರಳಿಸುವನು. ಸೂರ್ಯನು ಕಮಲಗಳನ್ನು ಮಾತ್ರ ಅರಳಿಸುವನು. ಇಂದ್ರಿಯ ನಿಗ್ರಹವುಳ್ಳವರ ನಡತೆಯು ಬೇರೆಯವರ ಹೆಂಡಂದಿರನ್ನು ಆಲಿಂಗಿಸಲು ಪ್ರತಿಕೂಲವಾಗಿರುವುದು. ಬಹಳ ಮಾರ್ಮಿಕವಾದ ಮಾತು. ತನ್ನನ್ನು ತಾನು ರಾಜ ಸಮರ್ಥಿಸಿಕೊಳ್ಳುತ್ತಾನೆ. ಚಂದ್ರನೆಂದೂ ತಾವರೆ ಅರಳಿಸಲಾರ. ಅವನು ರಾತ್ರಿ ಕಾಲದ ನೈದಿಲೆಯನ್ನು ಮಾತ್ರ ಅರಳುವಂತೆ ಮಾಡಬಲ್ಲ. ಅವನ ನಡತೆ ಅದು ಶುದ್ಧ. ಸೂರ್ಯನು ಕಮಲವನ್ನು ಬಿಟ್ಟು ಬೇರೆ ಹೂಗಳೊಡನೆ ಅಂತಹ ಸಂಬಂಧ ಹೊಂದಿಲ್ಲ. ಕಮಲಗಳನ್ನು ಅವನೇ ಅರಳಿಸಬಲ್ಲನು. ಅವನೂ ತನ್ನ ಪತ್ನಿಗೆ ( ಕಮಲಕ್ಕೆ) ನಿಷ್ಠನಾಗಿದ್ದಾನೆ. ಯಾರು ತಮ್ಮ ಇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೋ ಅಂತಹ ವ್ಯಕ್ತಿಗಳು ಎಂದಿಗೂ ಬೇರೊಬ್ಬರ ಪತ್ನಿಯ ಆಲಿಂಗನವನ್ನು ಇಷ್ಟಪಡಲಾರರು. ತಾನೇ ತಾನಾಗಿ ಶಕುಂತಲೆ ಈಗ ಬಂದಿದ್ದರೂ ಇಂದ್ರಿಯನಿಗ್ರಹ ಹೊಂದಿರುವ ನಾನು ಅವಳನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ಹಾಗೆಲ್ಲ ಪರ ಪತ್ನಿಯ ಆಲಿಂಗನ ನನ್ನಂತಹ ಅಚಾರ ಶ್ರೇಷ್ಠ ರಿಗೆ ಸಮಂಜಸವೂ ಅಲ್ಲ. ಹೀಗಾಗಿ ಅವಳೊಡನೆ ಸುಮ್ಮನೆ ಚರ್ಚೆ ಮಾಡದೇ ಅವಳನ್ನು ಕರೆದುಕೊಂಡು ಹೋಗು. ನೀನು ಇಲ್ಲಿಯೇ ಬಿಟ್ಟು ಹೋದರೆ ಅವಳಿಗೆ ಯಾರು ಗತಿ! ನಾನಂತೂ ಸ್ವೀಕರಿಸಲಾರೆ. ಕವಿ ಇಲ್ಲಿ ಜಿತೇಂದ್ರಿಯತ್ವದ ಪ್ರಾಮುಖ್ಯತೆಯನ್ನು ತಿಳಿಹೇಳಿದ್ದಾನೆ. ಅಪ್ರಸ್ತುತ ಪ್ರಶಂಸಾ ಅಲಂಕಾರ. *ಜಿತೇಂದ್ರಿಯತ್ವಂ ವಿನಯಸ್ಯ ಕಾರಣಂ ....ಜನಾನುರಾಗ ಪ್ರಭವಾಹಿ ಸಂಪದ:* ಎಂಬ ಇನ್ನೊಂದು ಶ್ಲೋಕದಲ್ಲೂ ಇಂದ್ರಯನಿಗ್ರಹವು ಎಲ್ಲವನ್ನೂ ತಂದುಕೊಡುವುದು ಎಂದೇ ಸಾರಿದ್ದಾರೆ. ಹಾಗಾಗಿ ನಾವೂ ಜಿತೇಂದ್ರಿಯರಾಗಿ ಯಶಸ್ಸು ಸಂಪಾದಿಸೋಣ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩