🌹ಶಾಕುಂತಲದ ಮಧುರ ಸುಮ🌹

*अत: परीक्ष्य कर्तव्यं विशेषात्सङ्गतं रह: । अज्ञातहृदयेष्वेवं वैरीभवति सौहृदम् ।।*

_ಕಾಳಿದಾಸನ ಸಾರ್ವಕಾಲಿಕ ಸಂದೇಶ. ಶಾರ್ಙರವ ಶಕುಂತಲೆಗೆ ಹೇಳುವ ಮಾತು. ಶಕುಂತಲೆ ಈ ವಂಚಕನಿಂದ ನಾನು ಮೋಸಹೋದೆ ಎಂದು ಅತ್ತಾಗ ನುಡಿಯುವ ಮಾತು. ಯಾರೊಡನೆಯೂ ರಹಸ್ಯವಾದ ಸಂಪರ್ಕ ಬೆಳೆಸುವ ಮುನ್ನ ಅವರನ್ನು ಪರೀಕ್ಷಿಸಬೇಕು. ಇಲ್ಲದಿದ್ದರೆ ಅಂತಹ ಒಂದು ಸ್ನೇಹ ಕೊನೆಗೊಮ್ಮೆ ಶತ್ರುತ್ವದಲ್ಲಿ ಕೊನೆಗೊಳ್ಳುವುದು. ಗುರುತು ಪರಿಚಯ ಇಲ್ಲದ ಅಜ್ಞಾತ ವ್ಯಕ್ತಿಗಳಲ್ಲಿ ಸ್ನೇಹ ಸಂಬಂಧ ಬೆಳೆಸುವ ಮುನ್ನ ಹತ್ತಾರು ಬಾರಿ ಪರೀಕ್ಷಿಸಿ ಮುಂದಡಿ ಇಡಬೇಕು. ಶಕುಂತಲೆ ದುಷ್ಯಂತರು ಬಹುಕಾಲದ ಪರಿಚಿತರೇನಲ್ಲ. ಆದರೆ ಯಾವುದೋ ಆಕರ್ಷಣೆಗೆ ಒಳಗಾಗಿ ಗಾಂಧರ್ವ ವಿವಾಹ ಮಾಡಿಕೊಂಡರು. ಈಗ ಆಕೆ ತುಂಬು ಗರ್ಭಿಣಿ. ದುಷ್ಯಂತ ರಾಜನೆಂದು ಪರಿಚಿತನೇ ಹೊರತು  ಶಕುಂತಲೆಗೆ ಬೇರೆ ರೀತಿಯಲ್ಲಿ ಪರಿಚಯವಿರಲಿಲ್ಲ.   ಅವನನ್ನು ನೋಡಿ ಅವನೊಡನೆ ಮಾತನಾಡಿ ಹಿರಿಯರನ್ನು ಕೇಳದೆ ಗಾಂಧರ್ವ ವಿವಾಹ ಮಾಡಿಕೊಳ್ಳುವುದು ತಪಸ್ವಿಯ ಸಂಗದಲ್ಲಿ ಬೆಳೆದ ಶಕುಂತಲೆ ಮಾಡಿದ ಮೂರ್ಖತನದ ಕೆಲಸ. ಯಾರು ಇಂತಹ ಕೆಲಸ ಮಾಡಿದರೂ ಮೂರ್ಖತನವೇ. ಅಧಿಕಾರಿಗಳು ಸಿರಿವಂತರು ಅದನ್ನು ಸಾಧಿಸಿಕೊಳ್ಳುವರು. ಆದರೆ ಬಡವರು ಏನು ತಾನೇ ಮಾಡಿಯಾರು! ಈ ಮಾತು ಸ್ತ್ರೀಯರಿಗೆ ಮಾತ್ರವಲ್ಲ. ಪುರುಷರಾದರೂ ಅಷ್ಟೇ. ಅಜ್ಞಾತರಲ್ಲಿ ಸ್ನೇಹ ಅಥವಾ ಪ್ರೀತಿ ಮಾಡುವ ಮುನ್ನ ಅವನ ಅಥವಾ ಅವಳ ವ್ಯಕ್ತಿತ್ವವನ್ನು ನಾನಾ ರೀತಿಯಲ್ಲಿ ಪರೀಕ್ಷಿಸಬೇಕು. ಸ್ತ್ರೀಯಾದಲ್ಲಿ ಮೋಸ ಹೋದಾಗ ಸಮಾಜದ ಮುಂದೆ ತಲೆತಗ್ಗಿಸಬೇಕಾಗುತ್ತದೆ ಎನ್ನುವುದು ವಾಸ್ತವ. ಪುರುಷನಾದರೆ ಅವಮಾನ ಹೇಗೋ ಸಹಿಸಿಕೊಳ್ಳಬಲ್ಲ ಆದರೆ ಸ್ತ್ರೀಗೆ ಅದು ಸಾಧ್ಯವೇ! ಏಕೆಂದರೆ ಭಾವನೆ ಇಲ್ಲದೆ ನಿರ್ಭಾವುಕ ಬದುಕು ಅವರಿಗೆ ಕಷ್ಟ. ನೀನು ಅವನೊಡನೆ ದೇಹಸಂಪರ್ಕ ರಹಸ್ಯವಾಗಿ ಮಾಡುವಾಗ ಇದನ್ನು ವಿಚಾರ ಮಾಡಿಲ್ಲ. ಈಗ ರೋದಿಸುತ್ತಿರುವೆಯಲ್ಲ. ಏನು ಪ್ರಯೋಜನ! ಸ್ನೇಹವು ಶತ್ರುತ್ವದಲ್ಲಿ ಕೊನೆಗೊಳ್ಳುವ ಕಾರಣ ಪರಿಚಯ ಇಲ್ಲದಿರುವುದೇ ಆಗಿದೆ.ಇದು ನಮಗೂ ಕವಿಯ ಪಾಠ. ಒಂದು ಸಲ ಪರಿಚಯ ಹೇಳಿದವರನ್ನು ನಂಬಿ ಎಟಿಮ್ ಸಂಖ್ಯೆಯನ್ನೋ ನಮ್ಮೆಲ್ಲಾ ಮಾಹಿತಿಯನ್ನೋ ದುಡ್ಡನ್ನೋ ಕೊಡುವಾಗ ನಮ್ಮ ಬುದ್ಧಿಗೆ ಮಂಕು ಬಡಿದಿರುವುದೇ? ಎಷ್ಟೋ ಜನ ಮಹಿಳೆಯರು ಅಥವಾ ಪುರುಷರು ದೇಹಾಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸಿ ದೈಹಿಕ ಸಂಪರ್ಕ ಬೆಳೆಸುತ್ತಾರೆ. ಕೊನೆಗೆ ತಾನು ಮೊಸಹೋದೆನೆಂದು ಹಲುಬುತ್ತಾರೆ. ಮೊದಲೇ ಯಾಕೆ ವಿಚಾರ ಮಾಡುವುದಿಲ್ಲ. ಕೆಲವರು ಮದುವೆಯೂ ಆಗಿ ಆಮೇಲೆ ಪರಿತಪಿಸುತ್ತಾರೆ. ಇಂತಹ ಎಲ್ಲಾ ಜನರಿಗೆ ಕಾಳಿದಾಸನ ಅದ್ಭುತವಾದ ಸಂದೇಶ. ಇಂದು ಆತ್ಮೀಯತೆಯಿಂದ ಇದ್ದ ಆ ಸ್ನೇಹಸಂಬಂಧವು ಮುಂದೊಂದು ದಿನ ಹೊಡೆದಾಟ ಮಾಡುವ ಹಂತಕ್ಕೆ ತಲುಪುತ್ತದೆ. ಹಾಗಾಗಿ ಇಂತಹ ತಿಳಿಯದವರೊಡನೆಯ ಒಡನಾಟವನ್ನು ಜಾಗರೂಕತೆಯಿಂದ ನಿರ್ವಹಿಸೋಣ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩