📃ವೇದ-ಧರ್ಮ ಭಾಗ-೬

*ವೇದಗಳ ಸಂಹಿತೆಗಳು*  

*ಅನೇಕೇಷಾಂ ಶಬ್ದಾನಾಂ ಯತ್ರ ಸಂಧಿರ್ಭವತಿ ತತ್ರ ಸಂಹಿತಾ* *ಪರ: ಸನ್ನಿಕರ್ಷ: ಸಂಹಿತಾ* ಎಂಬಂತೆ ಪದಗಳ ನಡುವಿನ ಸಂಬಂಧ ಅಥವಾ ಸಂಧಿ ಆದಲ್ಲಿ ಅದೆಲ್ಲ ಸಂಹಿತೆ ಎಂದು ಕರೆಸಿಕೊಳ್ಳುತ್ತದೆ. ವೇದಗಳ ಲಕ್ಷಾಂತರ ಮಂತ್ರಗಳು ಒಂದೆಡೆ ಸೇರಿಕೊಂಡಿವೆ ಎನ್ನುವ ಕಾರಣದಿಂದ ಇವುಗಳ ಮಂತ್ರಗಳ ಸಮೂಹವನ್ನು *ಸಂಹಿತೆಗಳು* ಎಂದು ಕರೆದರು. ನಾಲ್ಕು ವೇದಗಳಿಗೆ ಮುಖ್ಯವಾಗಿ ನಾಲ್ಕು ಸಂಹಿತೆಗಳಿವೆ. ಆದರೆ ಪಾಠ ಭೇದದಿಂದ ಮಂತ್ರ ಕ್ರಮದ ಭೇದದಿಂದ ಅವುಗಳು ಸಾಕಷ್ಟು ಭಿನ್ನವಾಗಿ ಅನೇಕ ಸಂಹಿತೆಗಳಾಗಿ ಉಳಿದುಕೊಂಡಿವೆ. ಸಂಹಿತೆಗಳ ಬಗ್ಗೆ ಪುರಾಣದ ಮಾತು ಹೀಗಿದೆ.( ಭಾಗವತ ಇರಬೇಕು) *ಋಕ್ ಯಜುಸ್ಸಾಮಾಥರ್ವಾಖ್ಯಾನ್ ವೇದಾನ್ ಪೂರ್ವಾದಿಭಿರ್ಮುಖೈ: ಶಸ್ತ್ರಮಿಜ್ಯಾ ಸ್ತುತಿಸ್ತೋಮಂ ಪ್ರಾಯಶ್ಚಿತ್ತಂ ವ್ಯದಧಾತ್ ಕ್ರಮಾತ್* ಅಂದರೆ ಋಗ್ವೇದ ಸಂಹಿತೆಯ ವಿಷಯ ಶಸ್ತ್ರ. ಯಜುರ್ವೇದದ ವಿಷಯ ಯಜ್ಞ. ಸಾಮವೇದದ ವಿಷಯ ಸ್ತುತಿ. ಅಥರ್ವವೇದದ ವಿಷಯ ಪ್ರಾಯಶ್ಚಿತ್ತ. ಇದು ಸಾಂಕೇತಿಕವಷ್ಟೇ ಹೊರತು ಅದೇ ಮುಖ್ಯವಲ್ಲ. ಭಗವಂತನನ್ನು ಶಸ್ತ್ರದ ಮೂಲಕ ಅಂದರೆ ಭಕ್ತಿಜ್ಞಾನಗಳ ಮೂಲಕ ಪಡೆಯಲು ಸಹಕರಿಸುವುದು ಋಗ್ವೇದ. ಕರ್ಮಗಳ ಮೂಲಕ ಪಡೆಯಲು ಸಹಕರಿಸುವುದು ಯಜುರ್ವೇದ. ಸ್ತೋತ್ರದ ಮೂಲಕ ಹೊಂದಲು ಸಹಕರಿಸುವುದು ಸಾಮವೇದ. ಈ ಮೂರಕ್ಕೆ ಅರ್ಹತೆ ಹೊಂದಲು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಪಡೆದು ಮುಂದುವರೆಯಲು ಸಹಾಯ ಮಾಡುವುದು ಅಥರ್ವವೇದ. *ಸಮ್ಯಕ್ ಧೀಯತೇ , ಸಮ್ಯಕ್ ಹಿತಂ ಪ್ರತಿಪಾದ್ಯಂ ಯಸ್ಯಾ:* ಅಂದರೆ ಯಾವುದು ಸರಿಯಾದುದನ್ನು ಪ್ರತಿಪಾದನೆ ಮಾಡುವುದೋ ಅದು ಸಂಹಿತೆ ಎಂಬ ಇನ್ನೊಂದು ವ್ಯಾಖ್ಯಾನವೂ ಇದೆ.
ಋಗ್ವೇದದ ಸಂಹಿತೆ ಪ್ರಸಿದ್ಧವಾದುದು ಐತರೇಯ ಸಂಹಿತೆ. ಹೀಗೆಯೇ ಶಾಕಲ ಬಾಷ್ಕಲ ಮೊದಲಾದ ಸಂಹಿತೆಗಳೂ ಇವೆ. ಆಯಾ ಗುರುಗಳ ಪರಂಪರೆಯಲ್ಲಿ ನಡೆದುಬಂದ ಪಾಠಕ್ಕನುಗುಣವಾಗಿ ಈ ಹೆಸರುಗಳನ್ನು ಹೊಂದಿತು. ಐತರೇಯನೆಂಬ ಮುನಿಯಿಂದ ಬೋಧಿಸಲ್ಪಟ್ಟದ್ದು ಅಥವಾ ಆ ಮುನಿಯು ಕಂಡುಕೊಂಡಿದ್ದು ಐತರೇಯ ಸಂಹಿತೆ. ಈ ಸಂಹಿತೆ ಧಾರ್ಮಿಕ ಸ್ತೋತ್ರಗಳ ಖಜಾನೆಯೇ ಹೌದು. ಎಲ್ಲಾ ದೇವತೆಗಳ ಸ್ತುತಿ ಇದೆ. ಶ್ರೀ ಸೂಕ್ತ, ಪುರುಷಸೂಕ್ತ, ಗಣಪತಿ ಸೂಕ್ತ, ದೇವೀ ಸೂಕ್ತ, ರಾತ್ರಿ ಸೂಕ್ತ, ಮನ್ಯು ಸೂಕ್ತ, ಪವಮಾನ ಸೂಕ್ತ, ಸೌರ ಸೂಕ್ತ, ಸರಸ್ವತೀ ಸೂಕ್ತ ಹೀಗೆ ದೇವರುಗಳ ನಾನಾ ರೂಪಕ್ಕನುಗುಣವಾಗಿ ಚಂದದ ವರ್ಣನೆ ಅವರನ್ನು ಪ್ರಾರ್ಥಿಸುವುದು ಕಾಣುತ್ತದೆ. ಈ ಸಂಹಿತೆಯಲ್ಲಿ ಅನೇಕ ಋಷಿಗಳು ತಾವು ಕಂಡುಕೊಂಡ ಸತ್ಯವನ್ನು ಸುಲಲಿತ ಪದಗಳಿಂದ ಭಾವನಾತ್ಮಕವಾಗಿ ಭಕ್ತಿಯಿಂದ ಸ್ತುತಿಸಿದ್ದಾರೆ. ಒಬ್ಬೊಬ್ಬ ದೇವರ ಬಗೆಗೂ ನೂರಾರು ಸ್ತೋತ್ರಗಳು ಇವೆ. ಋಗ್ವೇದದ ಮಂತ್ರಗಳು ಒಂದೇ ರೀತಿಯಲ್ಲಿ ಕಂಡುಬರಲು ಇದೂ ಒಂದು ಕಾರಣ. *ಯದ್ವೈ ಯಜ್ಞಸ್ಯ ಸಾಮ್ನಾ ಯಜುಷಾ ಕ್ರಿಯತೇ ಶಿಥಿಲಂ ತತ್ ಯದೃಚಾ ತತ್ ದೃಢಮಿತಿ* ( ತೈ ಸಂ ೬-೫-೧೦-೩) ಋಗ್ವೇದದ ವಿಧಾನವು ಅಥವಾ ಮಂತ್ರಗಳ ಜೋಡಣೆಯು ಅತ್ಯಂತ ದೃಢವಾದುದು.ಪಾಠಗಳಲ್ಲಿ ವ್ಯತ್ಯಾಸವಾಗಲು ಮಂತ್ರಗಳು ತಪ್ಪಿಹೋಗಲು ಅವಕಾಶ ಕಡಿಮೆ. ಹಾಗಾಗಿಯೇ ಋಗ್ವೇದದ ಶಾಖೆಗಳು ಕಡಿಮೆ ಇರಬಹುದೆಂಬುದು ನನ್ನ ಭಾವನೆ. ಈ ಸಂಹಿತೆಯಲ್ಲಿ ಸೃಷ್ಟಿ ಪ್ರಕ್ರಿಯೆಯಿಂದ ಹಿಡಿದು ಅನೇಕ ರಹಸ್ಯ ವಿದ್ಯೆಗಳ ಬಗೆಗೆ ಹೇಳಿದ್ದಾರೆ. ಮಹಾಭಾಷ್ಯಕಾರರು ೨೧ ಶಾಖೆಗಳನ್ನು ಉಲ್ಲೇಖಿಸಿದ್ದರೂ ಈಗ ಕೇವಲ ಐದು ಶಾಖೆಗಳು ದೇಶದಲ್ಲಿ ಕಾಣಸಿಗುತ್ತವೆ. ಈ ಸಂಹಿತೆಯನ್ನು ಎರಡು ರೀತಿಯಲ್ಲಿ ವಿಭಾಗಿಸಬಹುದು. ಅಷ್ಟಕ ಹಾಗೂ ಮಂಡಲಗಳ ರೂಪದಲ್ಲಿ. ಮಂಡಲಗಳು ಹತ್ತು, ಅಷ್ಟಕಗಳಾದರೆ ಎಂಟು. ಇದರಲ್ಲಿನ ಸೂಕ್ತಗಳನ್ನು ನಾಲ್ಕು ರೀತಿ ವಿಭಾಗಿಸಬಹುದು.
ಋಷಿ ಸೂಕ್ತ: ಒಬ್ಬನೇ ಋಷಿಯಿಂದ ಅಥವಾ ಒಂದೇ ಕುಲದ ಋಷಿಗಳಿಂದ ಸಾಕ್ಷಾತ್ಕರಿಸಲ್ಪಟ್ಟ ಮಂತ್ರಗಳ ಗುಂಪು. ಉ: ಪುರುಷ ಸೂಕ್ತ. ಇದರ ಹದಿನಾರು ಮಂತ್ರಗಳಿಗೂ ನಾರಾಯಣ  ಹೆಸರಿನ ಒಬ್ಬನೇ ಋಷಿ.
ದೇವತಾ ಸೂಕ್ತ: ಒಬ್ಬನೇ ದೇವನನ್ನು ಸ್ತುತಿಸುವ ತುಂಬಾ ಮಂತ್ರಗಳ ಸಮೂಹ. ಉ: ಪವಮಾನ ಸೂಕ್ತ. ಇದರಲ್ಲಿ ಸೋಮನನ್ನು ಸ್ತುತಿಸುವ ಸಾಕಷ್ಟು ಮಂತ್ರಗಳು ಸಾಲುಸಾಲಾಗಿವೆ.
ಛಂದ ಸೂಕ್ತ: ಒಂದೇ ಛಂದಸ್ಸನ್ನು ಹೊಂದಿರುವ  ಮಂತ್ರಗಳ ಗುಂಪು. ಉ: ಶಂನ ಸೂಕ್ತ. ಇಲ್ಲಿ ತ್ರಿಷ್ಟುಪ್ ಛಂದಸ್ಸು.
ಅರ್ಥ ಸೂಕ್ತ: ಅರ್ಥದಲ್ಲಿ ಏಕರೂಪತೆಯನ್ನು ಹೊಂದಿರುವ ಸೂಕ್ತಗಳು. ಉ: ಅಗ್ನಿ ಸೂಕ್ತ. ಅಲ್ಲಿ ಯಜ್ಞದ ಅವಯವಗಳಲ್ಲೆಲ್ಲ ಅಗ್ನಿಯನ್ನು ಚಿಂತಿಸಿ ಪ್ರಾರ್ಥಿಸುವುದು.

ಈ ಸಂಹಿತೆಯಲ್ಲಿ ೬೫ ಅನುವಾಕಗಳು, ೧೦೮ ವರ್ಗಗಳು, ೧೦೪೬೭ ಮಂತ್ರಗಳು ಇವೆ. ಮಂತ್ರಗಳ ಸಂಖ್ಯೆಯಲ್ಲಿ ಅಲ್ಪ ಸ್ವಲ್ಪ ಭೇದವಿದೆ. ೨ ಹಾಗೂ ೭ ನೇ ಮಂಡಲದ ಮಂತ್ರಗಳು ದೀರ್ಘತಮಸ್ಸೆಂಬ ಋಷಿಯ ಗೋತ್ರದವರಿಂದ ಸಾಕ್ಷಾತ್ಕೃತವಾದವುಗಳು. ೮ ನೇ ಮಂಡಲದ ಸೂಕ್ತಗಳು ಕಣ್ವ ಮಹರ್ಷಿಗಳ ಗೋತ್ರದವರಿಂದ ಸಾಕ್ಷಾತ್ಕೃತವಾದವುಗಳು. ೯ ನೆಯ ಮಂಡಲದಲ್ಲಿ ಮಂತ್ರಗಳು ಒಬ್ಬನಿಗೆ ಸಂಬಂಧಿಸಿದ್ದಾದರೂ ಋಷಿಗಳು ಅನೇಕ. *ತಿಸ್ರ ಏವ ದೇವತಾ.... ಸೂರ್ಯೋ ದ್ಯುಸ್ಥಾನ:* ಎಂಬ ಮಂತ್ರ ಈ ಸಂಹಿತೆಯದ್ದೇ ಆಗಿದೆ. ಇದರಂತೆ ಮೊದಲಿಗೆ ಮೂರು ಶಕ್ತಿಗಳಿದ್ದವು ಎನ್ನುವ ಅಭಿಪ್ರಾಯ. ಯಾಸ್ಕರು ಋಗ್ವೇದವನ್ನು ಆಧರಿಸಿ ನಿರುಕ್ತದಲ್ಲಿ ದೇವತೆಗಳನ್ನು ಹೆಸರಿಸಿದ್ದಾರೆ. ಅಸ್ಯವಾಮೀಯ, ನಾಸದೀಯ ಪುರುಷ ಮುಂತಾದ ಸೂಕ್ತಗಳು ಈಗಿನ ವಿಜ್ಞಾನಿಗಳ ಅಧ್ಯಯನಕ್ಕೂ ಆಕರಗಳಾಗಿವೆ.ಇವುಗಳಲ್ಲಿ ಅತ್ಯಂತ ವೈಜ್ಞಾನಿಕ ಸತ್ಯಗಳನ್ನು ಸರಳವಾಗಿ ಪ್ರತಿಪಾದಿಸಿರುವುದು ವೇದದ ಮಹತ್ವವನ್ನು ಎತ್ತಿಹಿಡಿಯುತ್ತದೆ. ದೇವಕಣದ ಸಂಶೋಧನೆಗೂ ನಾಸದೀಯ ಸೂಕ್ತದ ಕೆಲವು ವಾಕ್ಯಗಳು ಕಾರಣ ಎನ್ನುತ್ತಾರೆ ಭಾರತೀಯ ವಿಜ್ಞಾನಿಗಳು. ಹೀಗೆ ಋಗ್ವೇದ ಸಂಹಿತೆಯು ಸ್ತೋತ್ರದ ದೃಷ್ಟಿಯಿಂದಲೂ , ವಿಶಾಲತೆಯ ದೃಷ್ಟಿಯಿಂದಲೂ, ವೈಜ್ಞಾನಿಕ ದೃಷ್ಟಿಯಿಂದಲೂ ಅತ್ಯಂತ ಮಹತ್ವಪೂರ್ಣವಾದುದು.ಮುಂದುವರೆಯುವುದು.......

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩