🌹 ಮೇಘದೂತದ ಒಂದು ಮಧುರ ಹನಿ 🌹

*जातं वंशे भुवनविदिते पुष्करावर्तकानां जानामि त्वां प्रकृतिपुरुषं कामरूपं मघोन: । तेनार्थित्वं त्वयि विधिवशाद्दूरबन्धुर्गतोहं याञ्चा मोघा वरमधिगुणे नाधमे लब्धकामा ।।*

_ಮೇಘವನ್ನು ಕುರಿತು ಯಕ್ಷನಾಡುವ ಮಾತು. ಎಲೈ ಮೇಘವೇ, ನೀನು ಪ್ರಸಿದ್ಧವಾದ ಪುಷ್ಕರ ಹಾಗೂ ಆವರ್ತಕಗಳೆಂಬ ಮೇಘಗಳ ವಂಶದಲ್ಲಿ ಹುಟ್ಟಿರುವನೆಂದು ನಾನು ಅರಿತಿದ್ದೇನೆ. ನೀನು ಸತ್ಕುಲಪ್ರಸೂತ. ಅಷ್ಟಲ್ಲದೇ ಇಂದ್ರನ ಪ್ರಧಾನ  ಸೇವಕನೂ ನೀನೇ ಆಗಿರುವೆ. ಮಳೆಯ ಒಡೆಯ ಇಂದ್ರ. ಆ ಕೆಲಸ ನಿರ್ವಹಿಸುವ ಕಾರಣ ನೀನು ಅವನ ಸೇವಕ. ನೀನು ಕಾಮರೂಪನೂ ಹೌದು. ಇಷ್ಟ ಬಂದ ವೇಷವನ್ನೆಲ್ಲ ಧರಿಸಿ ಆಕಾಶದೆಲ್ಲೆಡೆ ಸಂಚರಿಸಬಲ್ಲೆ.( ಕೆಲವೊಮ್ಮೆ ಕಪ್ಪು ಕೆಲವೊಮ್ಮೆ ಬಿಳಿ , ಗಾತ್ರದಲ್ಲಿ ದೊಡ್ಡ ಸಣ್ಣ ಚಪ್ಪಟೆ ಉದ್ದ ಹೀಗೆ ಹಲವು ರೂಪ) ಈ ಎಲ್ಲಾ ಕಾರಣಗಳಿಂದ ನೀನು ನನಗೆ ದೂರದ ಬಂಧುವಾಗಿದ್ದಿ. ವಿಧಿಯು( ಶಾಪದ ಕಾರಣ) ನಿನ್ನನ್ನು ನನಗೆ ತೋರಿಸಿಕೊಟ್ಟಿದೆ. ನಾನು ನಿನ್ನ ಬಂಧುವೇ ಆದ್ದರಿಂದ ಈ ನನ್ನ ಕೋರಿಕೆಯನ್ನು ನಡೆಸಿಕೊಡಬಲ್ಲೆಯಾ! ನನ್ನ ಮನದರಸಿಗೆ ಈ ವಚೋರಸವನ್ನು ಅರುಹಬಲ್ಲೆಯಾ! ಒಂದು ವೇಳೆ ನೀನು ಆ ಕಾರ್ಯ ಮಾಡದಿದ್ದರೂ ಎನಗೆ ಚಿಂತೆಯಿಲ್ಲ. ಏಕೆಂದರೆ ಅಧಿಕ ಗುಣಶಾಲಿಗಳಲ್ಲಿ ನಮ್ಮ ಬಯಕೆ ಈಡೇರದಿದ್ದರೂ ಅದು ಶ್ರೇಷ್ಠವೇ ಹೌದು. ಅದೇ ಅಧಮರಲ್ಲಿ ನಮ್ಮ ಬಯಕೆ ಈಡೇರಿದರೂ ಶ್ರೇಷ್ಠವಲ್ಲ. ಅದು ಕನಿಷ್ಠ. ಕವಿ ಸುಂದರವಾಗಿ ಹೆಣೆದಿದ್ದಾನೆ ಅರ್ಥವನ್ನು. ನಮ್ಮ ಕೆಲಸಗಳು ನಡೆಯಬೇಕಾದರೆ ಎದುರಿಗೆ ಯಾರಿದ್ದರೂ ಆ ವ್ಯಕ್ತಿಯನ್ನು ಸ್ವಲ್ಪ ಹೊಗಳಬೇಕಾಗುತ್ತದೆ. ಆಗ ನಮ್ಮ ಮಾತಿನಿಂದ ಸಂತೋಷಗೊಂಡು ಆ ಕಾರ್ಯ ಅವನಿಂದ ನಡೆಯಬಹುದು. ಇಲ್ಲೂ ಮೇಘವನ್ನು ಶ್ರೇಷ್ಠ ವಂಶ, ಇಂದ್ರನ ಬಲಗೈ ಎಂದೆಲ್ಲಾ ಹೊಗಳುತ್ತಾ ಯಕ್ಷ ಉಬ್ಬಿಸುತ್ತಾನೆ. ನೀನು ನನ್ನ ಬಂಧು ಎಂದೂ ಹೇಳುತ್ತಾನೆ. ಆದರೆ ನಿವೇದನೆ ಯಾರಲ್ಲಿ ಮಾಡಬೇಕು ಯಾರಲ್ಲಿ ಅಲ್ಲ ಅನ್ನುವುದನ್ನೂ ಹೇಳುತ್ತಾನೆ. ಶ್ರೇಷ್ಠ ವ್ಯಕ್ತಿಯಲ್ಲಿ ನಮ್ಮ ಕೋರಿಕೆ ನಡೆಸಲ್ಪಡದಿದ್ದರೂ ಅದು ನಷ್ಟವಲ್ಲ. ಅಥವಾ ಅದರಿಂದೇನೂ ಹಾನಿಯಿಲ್ಲ. ಅವರು ಇಂತಹವರು ನನ್ನ ಬಳಿ ಸಹಾಯ ಯಾಚಿಸಿದ್ದರು ಎಂದೆಲ್ಲಾ ಹೇಳಿಕೊಂಡು ತಿರುಗುವುದಿಲ್ಲ. ಅಥವಾ ತಮ್ಮ ಸಾಮರ್ಥ್ಯ ಇಷ್ಟೆಲ್ಲಾ ಇದೆ ಎಂದು ಅಹಂಕಾರವನ್ನೂ ಯಾಚಿಸಿದವನ ಬಗೆಗೆ ಕನಿಕರವನ್ನೂ ತೋರುವುದಿಲ್ಲ. ಅದೇ ಅಧಮರು ಸ್ವಲ್ಪ ಸಹಾಯ ಮಾಡಿದರೂ ಊರೆಲ್ಲಾ ಹೇಳಿಕೊಂಡು ತಿರುಗುತ್ತಾ ತಮ್ಮ ಕೆಲಸವನ್ನು ಅಗತ್ಯಕ್ಕಿಂತ ಹೆಚ್ಚು ಪ್ರಕಟಪಡಿಸುತ್ತಾರೆ. ಮಾಡಿದ ಕಾರ್ಯಕ್ಕಿಂತ ಹೆಚ್ಚು ಪ್ರಚಾರ ತೆಗೆದುಕೊಳ್ಳುತ್ತಾರೆ. ಸಹಾಯ ತೆಗೆದುಕೊಂಡವನನ್ನು ಕನಿಷ್ಠನಂತೆ ನಡೆಸಿಕೊಳ್ಳುತ್ತಾರೆ. ಅಂತಹವರ ಬಳಿ ಯಾಚಿಸದಿರುವುದೇ ಮೇಲು. ಅದೇ ಗುಣಿಗಳ ಬಳಿ ಯಾಚನೆ ಫಲಕಾರಿಯಾಗದಿದ್ದರೂ ಅದೇ ಶ್ರೇಷ್ಠ ಎನ್ನುತ್ತಾ ಯಕ್ಷನ ಮೂಲಕ ಕವಿ ಜೀವನ ಪಾಠ ಬೋಧಿಸುತ್ತಾನೆ. ಅರ್ಥಾಂತರನ್ಯಾಸ ಅಲಂಕಾರ. ಪ್ರಿಯತಮನ ಮಾತಾದ್ದರಿಂದ ಪ್ರೇಯವೆಂಬ ಅಲಂಕಾರವೂ ಹೌದು. ನಾವೂ ನಮ್ಮ ಕೋರಿಕೆಗಳನ್ನು ಉತ್ತಮರಲ್ಲಿ ಮಾತ್ರ ಕೇಳಿ ಮರ್ಯಾದೆ ಉಳಿಸಿಕೊಳ್ಳೋಣ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩