[20/01, 3:25 PM] shreenidhiabhyankar: 🌹ಮೇಘದೂತದ ಒಂದು ಸುಂದರ ಸುಮ🌹

*तस्य स्थित्वा कथमपि पुर: कौतुकाधानहेतो: अन्तर्बाष्पश्चिरमनुचरो राजराजस्य दध्यौ । मेघालोके भवति सुखिनोप्यन्यथावृत्तिचेत: कण्ठाश्लेषप्रणयिनि जने किं पुनर्दूरसंस्थे ।।*

_ದೊರೆಯ ಕ್ರೋಧಕ್ಕೆ ತುತ್ತಾಗಿ ರಾಮಗಿರಿಯ ಆಶ್ರಮ ಪ್ರದೇಶದಲ್ಲಿ ವಿರಹದ ವೇದನೆಯನ್ನು ಅನುಭವಿಸುತ್ತಿದ್ದಾನೆ ಆ ಯಕ್ಷ. ( ಹಿಂದೆ ರಾಮಾದಿಗಳು ಪರ್ಣಶಾಲೆಯನ್ನು ರಚಿಸಿ ವಾಸವಾದ ಸ್ಥಳ. ಈಗಿನ ರಾಮಟೀಕ್ ಎಂಬ ಪರ್ವತದ ತಪ್ಪಲು) ನವದಾಂಪತ್ಯದ ಸವಿಯನ್ನುಣ್ಣುವ ಸಮಯದಿ ಏಕಾಂಗಿಯಾಗಿ ನಿಟ್ಟುಸಿರು ಬಿಡುತ್ತಿದ್ದಾನೆ. ಅವನ ಕೈಯಲ್ಲಿದ್ದ ಬಂಗಾರದ ಕಡಗ ಎಂದೋ ಜಾರಿ ಹೋಗುವಷ್ಟು ಸೊರಗಿದ್ದಾನೆ. ಆ ಸಮಯದಲ್ಲಿ ಆಷಾಢ ಪ್ರವೇಶಿಸುತ್ತಿದೆ. ಜುಲೈ ತಿಂಗಳ ದಟ್ಟ ಮಳೆ ಬೀಳುವ ಸಮಯವದು. ಆಕಾಶದೆಲ್ಲೆಡೆ ಮೋಡಗಳು ಗುಂಪುಗುಂಪಾಗಿ ಬೆಳಗ್ಗಿನ ಕೆಲಸಕ್ಕೆ ಬಸ್ಸು ಹಿಡಿಯಲು ನಿಂತ ಜನರಂತೆ ಒಟ್ಟುಗೂಡಿವೆ. ಆ ಮೋಡವನ್ನು ನೋಡಿ ಯಕ್ಷನ ಮನದಲ್ಲೊಂದು ಬಯಕೆ ಮೂಡಿತು.  ವಿರಹದಿಂದ ನರಳುತ್ತಿರುವ ಕುಬೇರನ ಅನುಚರನಾದ ಇವನು  ತನ್ನ ಕಣ್ಣೀರನ್ನು ಗಂಟಲಲ್ಲೇ ತಡೆಹಿಡಿದು ಆಸೆಯ ಕಂಗಳಿಂದ ಮೇಘವನ್ನು ನೋಡುತ್ತಾ ಚಿಂತಿಸಿದನು. ಪರರೆದುರು ನಮ್ಮ ದು:ಖವನ್ನು ವ್ಯಕ್ತಪಡಿಸುವುದು ಅವರ ದು:ಖಕ್ಕೂ ಕಾರಣವಾದೀತು ಎಂಬ ದೃಷ್ಟಿಯಿಂದ ಯಕ್ಷನು ಅವನೆದುರು ನಿಂತು ಕಣ್ಣೀರಿನ ಬಿಂದುಗಳನ್ನು ತಡೆಹಿಡಿದನು. ಮೋಡವೊಂದು ನಿರ್ಜೀವ ವಸ್ತು. ಅದರೂ ಇದರಿಂದ ನನಗೇನಾದರೋ ಪ್ರಯೋಜನವಾದೀತೇನೋ ಎಂಬ ಆಸೆ ಹಾಗೂ ಇದರ ಕೈಯಲ್ಲಿ ಸಾಧ್ಯವೇ ಎಂಬ ಕುತೂಹಲ ಮಿಶ್ರಿತವಾಗಿ ಬೆರಗಿನಿಂದ ನೋಡಿದನು. ಕವಿಯ ಮುಂದಿನ ಮಾತುಗಳು ಸುಂದರ. ಸುತ್ತಲೂ ಮೋಡಗಳು ಗುಂಪುಗೂಡಿರಲು, ಆಕಾಶದಲ್ಲಿ ರವಿಯ ಬೆಳಕು ಕುಂದಿ ಮಳೆ ಬರುವ ಮುನ್ಸೂಚನೆ ಕಾಣಲು, ಹಕ್ಕಿಗಳ ಚಿಲಿಪಿಲಿ ಸುತ್ತೆಲ್ಲ ಕೇಳುತ್ತಿರಲು, ಹೂಗಳೆಲ್ಲ ನೇಸರನನ್ನು ಚುಂಬಿಸಲೆಂಬಂತೆ ತಮ್ಮ ತುಟಿಗಳೆಂಬ ಪಕಳೆಗಳನ್ನು ಅರಳಿಸಿ ಕಾಯುತ್ತಿರಲು ಯಾವ ಪ್ರಣಯಿಯ ಮನವು ಪ್ರಿಯೆ ಸಮೀಪದಲ್ಲಿರುವಾಗ ಪ್ರೇಮವನ್ನು ಅನುಭವಿಸಲಾರದು! ಸಹಜವಾಗಿ ಪ್ರೇಮ ಉಕ್ಕಿ ಹರಿಯುವುದು ಆ ಕಾಲದ ತೊರೆಗಳ ಹರಿವಂತೆ. ಅಂತಹುದರಲ್ಲಿ ಇನ್ನೂ ಸರಿಯಾಗಿ ಪತ್ನಿಯನ್ನು ಬಿಗಿದಪ್ಪದ ಕೈಗಳುಳ್ಳ ಈ ಯಕ್ಷನ ಸ್ಥಿತಿ ಹೇಗಿರಬಹುದು! ಅವನು ಈಗಷ್ಟೇ ಗೃಹಸ್ಥಾಶ್ರಮ ಪ್ರವೇಶಿಸಿದ್ದಾನಷ್ಟೇ. ಪತ್ನಿಯನ್ನು ಗಟ್ಟಿಯಾಗಿ ಆಲಿಂಗಿಸಲು ಬಯಸುವ ಕಾಲದಲ್ಲಿ ಹೀಗೆ ಆ ಆಶ್ರಮದ ಸುಖವನ್ನು ತ್ಯಜಿಸಿ ಈ ರಾಮಗಿರಿಯ ಆಶ್ರಮದಲ್ಲಿ ಏಕಾಂಗಿಯಾಗಿ ವಾಸಿಸುವಾಗಿನ ಮನಸ್ಥಿತಿ ಮೋಡವನ್ನು ಕಂಡಾಗ ಹೇಗಾದೀತು. ಬಹಳ ಕಾಲ ಸುಖಿಸಿದ ಜನರೇ ಆಷಾಢದಲ್ಲಿ ಮತ್ತೆ ಪ್ರೀತಿಯ ಭಾವನೆ ತುಂಬಿ  ಪ್ರಕೃತಿಯಲ್ಲಿ ಒಂದಾಗುತ್ತಾರೆ. ಅಂತಹುದರಲ್ಲಿ ಮೋಡವನ್ನು ನೋಡಿ ತನ್ನ ಪ್ರಿಯೆಯ ನೆನಪು ಮಾಡಿಕೊಂಡ ಆ ವಿರಹಿಯ ಪಾಡು ಹೇಗಿದ್ದೀತು! ಇಲ್ಲಿ ಅರ್ಥಾಂತರ ನ್ಯಾಸ ಅಲಂಕಾರ. ಪ್ರಕೃತಿಯ ಸಹಜ ಸೌಂದರ್ಯವು ನಮಗೆ ಮುಖವಾಡ ಹಾಕದೇ ಸಹಜವಾಗಿ ಬದುಕುವ ಬಗೆಯನ್ನು ಕವಿ ಇಲ್ಲಿ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾನೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
[20/01, 3:25 PM] shreenidhiabhyankar: ಮೇಘದೂತ: ಮೋಡವನ್ನೇ ದೂತನನ್ನಾಗಿಸಿ ಕಾಳಿದಾಸ ಬರೆದ ಮಹೋನ್ನತ ಕಾವ್ಯ. ಒಂದು ವರ್ಷದ ಕಾಲ ಪ್ರಿಯೆಯ ವಿರಹ ಅನುಭವಿಸುವಂತೆ ಶಾಪಗ್ರಸ್ತನಾದ ಯಕ್ಷನೊಬ್ಬನ ಸಂದೇಶವನ್ನು ಮೋಡದ ಮೂಲಕ ಪತ್ನಿಗೆ ಕಳುಹಿಸುವ ಕಲ್ಪನೆ ನಿಜಕ್ಕೂ ಹೃದ್ಯ. ಈಗಿನಂತೆ ತಂತ್ರಜ್ಞಾನ ಇಲ್ಲದಿದ್ದ ಆ ಸಮಯದಲ್ಲಿ ಕವಿ ಸಂದೇಶ ಕಳುಹಿಸಲು ಬಳಸಿದ ಮಾರ್ಗ ಒಂದು ಉತ್ತಮ ಕಲ್ಪನೆ. ದಮಯಂತಿ ನಳರ ಮಧ್ಯೆ ಪಕ್ಷಿಗಳು ಇದ್ದರೆ ಇಲ್ಲಿ ಯಕ್ಷ ಯಕ್ಷಿಣಿಯರ ಮಧ್ಯೆ ಮೋಡವಿದೆ. ಇದು ನಿರ್ಜೀವವಾದರೂ ವಿರಹಿಗೆ ಸಜೀವವೇ! ವಿರಹ ವೇದನೆಯ ಪರಾಕಾಷ್ಠೆ ಅದು. ಯಾವ ದಾರಿಯನ್ನು ಬಳಸಿ ಪಯಣ ಬೆಳೆಸಬೇಕು ಅಲ್ಲಿಯ ವಿಶೇಷತೆಗಳನ್ನು ಈಗಿನ ಪ್ರವಾಸ ಕಥನಗಳಂತೆ ಕವಿ ವರ್ಣಿಸಿದ್ದಾನೆ.ಮಧ್ಯ ಮಧ್ಯದಲ್ಲಿ ನೀತಿಯನ್ನು ಬೋಧಿಸುತ್ತಾ ಶೃಂಗಾರ ಹಾಡುತ್ತಾ ವರ್ಣಿಸುವ ಪರಿ ಮನಮೋಹಕ. ಈಗಿನ ನಾಗಪುರ ದಿಂದ ಆರಂಭಿಸಿ ಹೃಷೀಕೇಶ ಬದರಿ ದಾಟಿ ಮುಂದೆ ಸಾಗುವ ದಾರಿಯನ್ನು ಕವಿ ಒಳ್ಳೆಯ ಸರ್ವೇ ವಿಜ್ಞಾನಿಯಂತೆ ಒಂದೂ ತಪ್ಪದಂತೆ ವರ್ಣಿಸಿದ್ದಾನೆ. ಬಹುಶ: ಈ ಪ್ರದೇಶಗಳಲ್ಲಿ ಕವಿ ಬಹಳ ಕಾಲ ನೆಲೆಸಿದ್ದಿರಬಹುದು. ಡಾ. ಭಾವೆಯವರು ಇದರ ಬಗ್ಗೆ ವಿಸ್ತಾರವಾದ ಸಂಶೋಧನೆ ನಡೆಸಿದ್ದಾರೆ. ಒಳ್ಳೆಯ ಗೂಗಲ್ ಮ್ಯಾಪ್ ನಲ್ಲಿ ನೋಡುವಂತೆ ಕವಿ ನದಿ ಪರ್ವತ ಗಳನ್ನು ವರ್ಣಿಸಿರುವುದು ಆಗಿನ ಕಾಲಕ್ಕೆ ನಿಜಕ್ಕೂ ಅದ್ಭುತ. ಇದು ಗೀತಕಾವ್ಯವೂ ಹೌದು. ಮಂದಾಕ್ರಾಂತಾ ಎಂಬ ವೃತ್ತವನ್ನು ಬಳಸಿ ರಚಿಸಿದ ಈ ಕಾವ್ಯ ನೀರಿನ ಮೆಲ್ಲನೆಯ ಹರಿವಂತೆ ಸಹೃದಯರ ಹೃದಯಕ್ಕೆ ಪುಲಕವನ್ನು ತಂದುಕೊಡುತ್ತದೆ. ರಾಮಾಯಣದ ರಾಮನ ವಿರಹದ ಮಾತುಗಳು ಕವಿಗೆ ಮೂಲ ಪ್ರೆರಣೆ ಎಂದು ಕೆಲವರ ಅಭಿಪ್ರಾಯ. ಅವನ ವಿರಹವನ್ನು ಕಲ್ಪಿಸಿ ತನ್ನ ಕಲ್ಪನೆಯೆಂಬ ಕಡಲಿನಲ್ಲಿ ಹೆಕ್ಕಿ ತೆಗೆದ ಮುತ್ತಿದು. ಇದರ ಕೆಲವು ಮೋಹಕ ಶ್ಲೋಕಗಳ ಸಿಹಿಯನ್ನು ಯಥಾಮತಿ ತಿಳಿಯುವ ಪ್ರಯತ್ನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩