📃ವೇದ- ಧರ್ಮ ಭಾಗ-೫

ವೇದದ ದೇವತೆಗಳು. ಮುಂದುವರಿದ ಭಾಗ.....

೭._ಅಶ್ವಿನೀ ದೇವತೆಗಳು= ಹೆಸರೇ ಸೂಚಿಸುವಂತೆ ಅಶ್ವೀ ಎಂದರೆ ಹೆಣ್ಣು ಕುದುರೆಯಿಂದ ಜನಿಸಿದ ಅವಳಿ ದೇವತೆಗಳು. ಸೂರ್ಯನು ತ್ವಷ್ಟೃವಿನ ಮಗಳಾದ ಸಂಜ್ಞೆಯು ಅಶ್ವರೂಪದಲ್ಲಿರುವಾಗ ಸೇರಿ ಜನಿಸಿದ ವೀರರು. ಸ್ವರ್ಗ ಇವರ ಸ್ಥಾನ. ಋಗ್ವೇದದ ಸುಮಾರು ೫೦ ಸೂಕ್ತಗಳಲ್ಲಿ ಇವರ ವರ್ಣನೆ ಕಂಡುಬರುತ್ತದೆ. ಇವರ ಸ್ತುತಿ, ವರ್ಣನೆ ಎಲ್ಲವೂ ಒಟ್ಟಿಗೇ ಕಂಡುಬರುತ್ತದೆ. ಆಹುತಿ ನೀಡುವುದು ಕೂಡ ಇಬ್ಬರಿಗೂ ಸೇರಿ ಒಂದೇ. ಇವರು ಭೂಮಿ ಹಾಗೂ ಅಂತರಿಕ್ಷಗಳನ್ನು ಪ್ರತಿನಿಧಿಸುವರೆಂದೂ, ಹಗಲು ರಾತ್ರಿಗಳನ್ನು ಪ್ರತಿನಿಧಿಸುವರೆಂದೂ, ಸೂರ್ಯ ಚಂದ್ರರನ್ನು ಪ್ರತಿನಿಧಿಸುವರೆಂದೂ ವಿಧ ವಿಧವಾಗಿ ವರ್ಣಿಸಿದೆ ವೇದ. ಒಟ್ಟಾರೆ ಎರಡು ಶಕ್ತಿಗಳ ಪ್ರತಿನಿಧಿಗಳು ಇವರು. ವೇದದಲ್ಲಿ ಉಳಿದ ದೇವತೆಗಳೊಡನೆಯೂ ಇವರ ಸ್ತುತಿ ಇದೆ. ಅವಿಭಕ್ತ ರೂಪದಲ್ಲೇ ಅನುಗ್ರಹಿಸುವ ದೇವತೆಗಳು. ನಿತ್ಯ ಯುವಕರಿವರು. ಇಬ್ಬರೂ ದೇದೀಪ್ಯಮಾನರಾಗಿ ಬೆಳಗುತ್ತಾ ಕಮಲದ ಹಾರವನ್ನು ಧರಿಸಿ ವೇಗದಿಂದ ಸಂಚರಿಸುತ್ತಾರೆ. ದಸ್ರ , ನಾಸತ್ಯಾ, ಹಿರಣ್ಯವರ್ತನ್, ಸುದಾನೂ, ಮಧುಯುವಾ, ಮಧವಾನಾ, ತುವಿಷ್ಯಾ, ಅಧ್ರಿಗೂ ಎಂದೆಲ್ಲಾ ನಾನಾ ಹೆಸರುಗಳಿಂದ ಸ್ತುತಿಸಿವೆ ವೇದಗಳು. ಹೆಸರಿನಂತೆ ಜೇನಿನ ಕೊಡವನ್ನು ಧರಿಸಿದ್ದಾರೆ. ಇವರ ರಥ ಅಂಕುಶ ಎಲ್ಲ ಮಧುಮಯವೇ ಆಗಿದೆ.      ಉಷಾ ಮತ್ತು ಸೂರ್ಯರ ಮಕ್ಕಳೆಂದೂ ಕೆಲವೆಡೆ ಉಲ್ಲೇಖಿಸಲಾಗಿದೆ. ಇವರ ರಥದಲ್ಲಿ ಕೆಲವೊಮ್ಮೆ ಎತ್ತುಗಳು, ಕೆಲವೊಮ್ಮೆ ಪಕ್ಷಿಗಳು ಇರುತ್ತವೆ. ಜೀವಿಗಳನ್ನು ವಿಪತ್ತಿನಿಂದ ಪಾರುಮಾಡುವ ದೇವತೆಗಳು. ದೇವವೈದ್ಯರು. ಅಣಿ ಎಂಬ ಮಹಾತ್ಮನನ್ನು ಕಾರಾವಾಸದಿಂದ ಬಿಡುಗಡೆಗೊಳಿಸಿದವರು. ಭುಜ್ಯುವಿನ ಹಡಗು ಸಮುದ್ರದಲ್ಲಿ ತುಂಡಾಗಿ  ಮುಳುಗುತ್ತಿದ್ದಾಗ ಇವರೇ ಅವನನ್ನು ಉದ್ಧರಿಸಿದರು. ಅತ್ಯಂತ ಸುಂದರರು. ಸೂರ್ಯನ ಅಳಿಯರೆಂದೂ ಕೆಲವೆಡೆ ಉಲ್ಲೇಖಿಸಲಾಗಿದೆ. *ಯಾವಾಂ ಕಶಾ ಮಧುಮತ್ಯಶ್ವಿನಾ ಸೂನೃತಾವತೀ ತಯಾ ಯಜ್ಞಂ ಮಿಮಿಕ್ಷತಮ್* ಎಂಬ ಮಂತ್ರದ ಭಾವದಂತೆ ಸತ್ಯದ ಪಥಕ್ಕಾಗಿ ಅಥವಾ ಜೀವನದಲ್ಲಿ ಪ್ರಾಮಾಣಿಕತೆಗಾಗಿ ಇವರ ಆರಾಧನೆ ಇದೆ. *ಅಶ್ವಿನಾವರ್ತಿ....ಸಮನಸಾ ನಿಯಚ್ಛತಂ* ಎಂಬ ಇನ್ನೊಂದು ಮಂತ್ರದಲ್ಲಿ ಒಳ್ಳೆಯ ಮನಸ್ಸಿನಿಂದ ಉದ್ಧರಿಸು ಎಂಬ ಪ್ರಾರ್ಥನೆ ಕಂಡುಬರುತ್ತದೆ.

೮. ವರುಣ= *ವೃಣೋತಿ ಸರ್ವಂ, ವ್ರಿಯತೇ ಅನ್ಯೈ:*  ಎಂಬ ವ್ಯುತ್ಪತ್ತಿಯಂತೆ ಎಲ್ಲರನ್ನೂ  ತನ್ನವರೆಂದು ಭಾವಿಸಿ ಅನುಗ್ರಹಿಸಿತ್ತಾನೆ ಅಥವಾ ಎಲ್ಲರಿಂದಲೂ ಸ್ತುತಿಸಲ್ಪಡುವವನು ಅಥವಾ ಎಲ್ಲರಿಗೂ ಅಗತ್ಯನಾದವನು ಎಂಬೆಲ್ಲ ಅರ್ಥಗಳನ್ನು ಹೇಳಬಹುದು. ಸ್ವರ್ಗ ಇವನ ಸ್ಥಾನ. ಕಶ್ಯಪ ಅದಿತಿಯರ ಪುತ್ರ. ಜಲಾಧಿಪತಿ. ಪಶ್ಚಿಮ ದಿಕ್ಕಿಗೂ ಇವನೇ ಒಡೆಯ. ರಾಜಹಂಸ ಇವನ ವಾಹನ. ಕೈಯಲ್ಲಿ ಪಾಶವನ್ನು ಧರಿಸಿ ಪಾಪಿಗಳ ಕತ್ತನ್ನು ಕತ್ತರಿಸುತ್ತಾನೆ. ಋಗ್ವೇದದ ೧೨ ಸೂಕ್ತಗಳಲ್ಲಿ ಇವನನ್ನು ಸ್ತುತಿಸಲಾಗಿದೆ. ಬಹಳ ಸುಂದರನೂ, ಪುಷ್ಟಿಯಿಂದ ಕೂಡಿದವನೂ , ಜಟ್ಟಿಗಳಂತೆ ಗಟ್ಟಿಯಾದ ಅವಯವ ಇವನ ವಿಶೇಷ ಗುಣ. ಬೇರೆಲ್ಲಾ ದೇವತೆಗಳು ದೈಹಿಕ ಶಕ್ತಿಯಲ್ಲಿ ಇವನಷ್ಟಿಲ್ಲ. ಭುಜಗಳನ್ನು ಲಯಬದ್ಧವಾಗಿ ಕುಣಿಸುತ್ತಾ ಸಂಚರಿಸುತ್ತಾನೆ. ಸ್ವರ್ಣಕವಚವನ್ನು ಧರಿಸಿದ್ದಾನೆ. ಭಕ್ತರ ಬಾಹುಗಳಲ್ಲಿ ಬಲವನ್ನು ತುಂಬುತ್ತಾನೆ. ಸೂರ್ಯನು ಇವನ ಕಣ್ಣು ಎಂದು ವರ್ಣಿಸಲಾಗಿದೆ. ಸಾವಿರ ಕಣ್ಣುಗಳು ಇವನಿಗೆ ಎಂದೂ ವರ್ಣಿಸಿದ್ದಾರೆ. ( ಸಹಸ್ರಾಕ್ಷ ಇಂದ್ರನೂ, ವಿಷ್ಣುವೂ ,ವರುಣನೂ ಹೌದು.) ದೂರದರ್ಶಿ ಇವನು. ಇವನ ಅರಮನೆ ಊರ್ಧ್ವಲೋಕದಲ್ಲಿ     ಸಾವಿರ ಕಂಬಗಳು ಹಾಗೂ ಸಾವಿರ ದ್ವಾರಗಳಿಂದ ಕೂಡಿದೆ.( ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿದ್ದ ಸಾವಿರ ಕಂಬದ ಬಸದಿಗೆ ಇದು ಪ್ರೇರಣೆ ಇರಬಹುದು) ಇಲ್ಲಿ ಸದಾಕಾಲವೂ ಗುಪ್ತಚರರು ಸಂಚರಿಸುತ್ತಾ ಮಾಹಿತಿ ಕಲೆಹಾಕುವ ಕೆಲಸ ನಿರ್ವಹಿಸುವರು. ವೇದಗಳಲ್ಲಿ ಇವನನ್ನು ಸಮ್ರಾಟನೆಂದೂ ,ಧೃತವ್ರತನೆಂದೂ ವರ್ಣಿಸಿದ್ದಾರೆ. ಇವನ ನಿಯಮಗಳು ಅತ್ಯಂತ ಕಠಿಣ, ಹಾಗೂ ಆಜ್ಞೆಗಳು ಪಾಲಿಸಲು ಕಷ್ಟಸಾಧ್ಯ. ಎಲ್ಲಾ ಲೋಕಗಳೂ ಇವನನ್ನೇ ಆಶ್ರಯಿಸಿವೆ. ಇವನು ತನ್ನ ಭಕ್ತರಿಗೆ ಅವರಿಂದ ಅಥವಾ ತಂದೆತಾಯಂದಿರಿಂದ ಅಥವಾ ಉಳಿದ ಸಂಬಂಧಿಗಳಿಂದ ಉಂಟಾದ ಪಾಪಗಳನ್ನು ಪರಿಹರಿಸುವನೆಂದು ವೇದ ಸ್ತುತಿಸಿದೆ. *ಅಹೇಡಮಾನೋ ವರುಣೇಹ ಬೋಧ್ಯುರುಷಗ್ಂ ಸಮಾನ ಆಯು: ಪ್ರಮೋಷೀ:* ಎಂಬ ಮಂತ್ರದ ಭಾವದಂತೆ ಸುಖವಾಗಿ ಬದುಕುವ ಆಯುಸ್ಸನ್ನು ಕರುಣಿಸು ಪಾಪ ಪರಿಹರಿಸು ಎಂಬ ಸ್ತುತಿ, *ಯುಯೋಪಿಮಮಾನಸ್ತಸ್ಮಾದೇನಸೋ ದೇವ ರೀರಿಷ:* ಎಂಬ ಮಂತ್ರದಲ್ಲಿ ಏನಸ ಎಂದರೆ ನಮ್ಮಿಂದಾಗುವ ತಪ್ಪಿನ ಕೆಟ್ಟ ಫಲಗಳು ಅವುಗಳಿಂದ ಬಿಡುಗಡೆಗೊಳಿಸು ಎಂಬ ಸ್ತುತಿ, ಇನ್ನೊಂದೆಡೆ *ವರುಣಗ್ಂ ಸುಷುವಾಣಮನ್ನಾದ್ಯಂ ಕಾಮಯೇತ* ಸ್ತೋತ್ರ ಮಾಡುವವನಿಗೆ ಅನ್ನಾದಿಗಳನ್ನು ಕರುಣಿಸುವವನು ಅಥವಾ ಅನ್ನ ವಸ್ತ್ರ ಮುಂತಾದ ದಿನನಿತ್ಯದ ಅವಶ್ಯಕತೆಗಳಿಗೆ ವರುಣನನ್ನು ಸ್ತುತಿ ಮಾಡಿ ಎಂಬ ಭಾವ, ಹೀಗೆ ವಿಧ ವಿಧದ ಸ್ತುತಿ ಕಂಡುಬರುವುದು. ಅಸುರ,( ಅಸುಷು ರಮತೇ= ಆತ್ಮತತ್ವವನ್ನು ತಿಳಿದು ಇಂದ್ರಿಯಗಳನ್ನು ಧ್ಯಾನಾವಸ್ಥೆಗೆ ತೆಗೆದುಕೊಂಡು ಹೋಗಿ ಆನಂದ ಅನುಭವಿಸುವವನು) ಕ್ಷತ್ರಿಯ( ಶರಣಾದವನನ್ನು ಸಲಹುವವನು ಅಥವಾ ಆಪತ್ತಿನಿಂದ ರಕ್ಷಿಸುವವನು, ಕ್ಷತಾತ್ ತ್ರಾಯತೇ ಇತಿ) ಋತಗೋಪಾ( ಸತ್ಯದ ರಕ್ಷಕ)  , ಉರುಶಂಶ: ( ಗಟ್ಟಿಮುಟ್ಟು) , ಸ್ವರಾಟ್= ಒಡೆಯ, ಮಾಯಾವೀ = ಮಾಯೆಯನ್ನು ಅರಿತವನು, ಹೀಗೆ ಹಲವು ಹೆಸರುಗಳಿಂದ ವೇದಗಳಲ್ಲಿ ಕರೆಸಲ್ಪಟ್ಟಿದ್ದಾನೆ‌.

     ೯. ಉಷಸ್ = ಇವಳು ಸಂಧ್ಯಾಕಾಲದ ದೇವತೆ. ಬೆಳಿಗ್ಗೆ ನಕ್ಷತ್ರಗಳಿದ್ದು ಸೂರ್ಯೋದಯ ಆಗುವ ತನಕ ಹಾಗೂ ಸಂಜೆ ಸೂರ್ಯ ಮುಳುಗಿ ಚಂದ್ರನು ಬರುವ ತನಕದ ಸಮಯದ ದೇವತೆ. ಸ್ವರ್ಗ ಇವಳ ಸ್ಥಾನ. *ಔಷತಿ ಅಂಧಕಾರಮ್* ಅಂಧಕಾರವನ್ನು ನಾಶಮಾಡುವವಳು, *ರಾತ್ರಿಶೇಷ:* ರಾತ್ರಿಯ ಉಳಿದ ಭಾಗ, *ದಿವಾಶೇಷ:* ಹಗಲಿನ ಉಳಿದ ಭಾಗ ಹೀಗೆ ಉಷಸ್ ಶಬ್ದ ಬಹ್ವರ್ಥಕವಾಗಿದೆ. ಉಷ:ಕಾಲದ ದೇವತೆ. ಋಗ್ವೇದದಲ್ಲಿ ಸುಮಾರು ೨೦ ಸೂಕ್ತಗಳಲ್ಲಿ ಇವಳ ಸ್ತುತಿ ಇದೆ. *ವಸ್ ದೀಪ್ತೌ* ಎಂಬ ಧಾತುವಿನಿಂದ ಜನಿಸಿದ ಈ ಶಬ್ದಾರ್ಥ ಬೆಳಗುವುದು, ಪ್ರಕಾಶಮಾನ ಎಂದು. ಋಷಿಗಳು ಇವಳನ್ನು ಅತ್ಯಂತ ಪುರಾತನ ದೇವತೆಯೆಂದೂ, ಸುಂದರ ನರ್ತಕಿಯ ರೂಪದವಳೆಂದೂ, ನಿತ್ಯ ಯುವತಿಯೆಂದೂ ಕೊಂಡಾಡಿದ್ದಾರೆ. ತನ್ನ ನಿಯಮಗಳನ್ನು ಪಾಲಿಸುತ್ತಾ ತ್ರಿಮೂರ್ತಿಗಳ ಆಜ್ಞೆಯಂತೆ ಕಾಲದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುವಳು ಇವಳು. ಯಜ್ಞಗಳಲ್ಲಿ ಸೋಮಪಾನಕ್ಕಾಗಿ ದೇವತೆಗಳನ್ನು ಆಹ್ವಾನಿಸುವವಳು ಇವಳೇ ಆಗಿದ್ದಾಳೆ. ಸುಸಜ್ಜಿತವಾದ ನೂರು ರಥಗಳಲ್ಲಿ ಸಂಚರಿಸುತ್ತಾಳೆ. ಸೂರ್ಯನ ಜೊತೆ ಹೆಚ್ಚಿನ ಸಂಬಂಧ ಇವಳಿಗಿದೆ. ಸೂರ್ಯನ ತಾಯಿಯೆಂದೂ, ಸೋದರಿಯೆಂದೂ, ಪತ್ನಿಯೆಂದೂ ಇವಳ ಉಲ್ಲೇಖ ಇದೆ. ಇದರರ್ಥ ಸೂರ್ಯನ ಕಾರ್ಯಕ್ಕೆ ಉಳಿದೆಲ್ಲರಿಗಿಂತ ಹೆಚ್ಚಿನ ಸಹಕಾರ ಕೊಡುವವಳು ಎಂದು. ದಿವಸನ ಮಗಳು, ರಾತ್ರಿಯ ಸಹೋದರಿ ಎಂದೆಲ್ಲ ವೇದ ಹೇಳುವುದು. ಇಂದ್ರ, ಅಗ್ನಿ, ಅಶ್ವಿನೀ ದೇವತೆಗಳ ಕಾರ್ಯದಲ್ಲೂ ಸಹಕಾರ ನೀಡುತ್ತಾಳೆ. *ಋತಾವರೀ* ಸತ್ಯದ ಪಥ ಬಿಡದಿರುವವಳು, *ರೇವತೀ*  ಮಧೋನೀ ವಿಶ್ವವಾರಾ , ಗೋಮತೀ, ಸುಭಗಾ, ದುಹಿತಾದಿವ: , ಅಮೃತತ್ವಹೇತು:, ಹೀಗೆಲ್ಲಾ ಹೆಸರುಗಳಿಂದ ಸ್ತುತಿಸಲಾಗಿದೆ. ಇವಳ ಆರಾಧನೆಯಿಂದ ಧನ,  ಮಕ್ಕಳು, ದೀರ್ಘಾಯುಷ್ಯ ಯಶಸ್ಸು ಇತ್ಯಾದಿಗಳು ದೊರಕುವವು. *ಉಷೋ ಭದ್ರೇಭಿರಾಗಹಿ* ಉಷಾ ದೇವಿಯೇ ಮಂಗಳಗಳೊಂದಿಗೆ ನಮ್ಮ ಕಾಲವನ್ನು ಬೆಳಗಿಸುತ್ತಾ ಬಾ ಎಂಬ ಸುಂದರ ಸ್ತವನ ಇಲ್ಲಿದೆ.

೧೦. ಸೋಮ= ಪೃಥ್ವಿಯ ದೇವತೆ. ಋಗ್ವೇದದ ಪವಮಾನ ಮಂತ್ರಗಳೆಂದು ಕರೆಸಲ್ಪಡುವ ಒಂಭತ್ತನೇ ಮಂಡಲದ ೧೪೪ ಸೂಕ್ತಗಳಲ್ಲಿ ಹಾಗೂ ಇನ್ನೂ ಕೆಲವೆಡೆ ಇವನ ಸ್ತುತಿ ಇದೆ. ಇಂದ್ರ ಅಗ್ನಿ ರುದ್ರ ಉಷಸ್ ಮೊದಲಾದ ದೇವತೆಗಳೊಡನೆ ಇವನ ಸ್ತುತಿ ಕಂಡುಬರುತ್ತದೆ. ಸೋಮಲತೆಯ ಅಭಿಮಾನಿ ಇವನು. ಸೋಮ ಎಂಬ ಬಳ್ಳಿ ಶ್ರೌತ ಯಜ್ಞ ಗಳಲ್ಲಿ ಅತ್ಯಂತ ಅವಶ್ಯವಾದ ದ್ರವ್ಯ.ಬಳ್ಳಿಗಳನ್ನು ಹತ್ತು ಬೆರಳುಗಳಿಂದ ಹಿಂಡುವಾಗ ಹುಟ್ಟುವ ಸೋಮರಸದಂತೆ ಇವನನ್ನೂ ಹತ್ತು ಜನ ಯುವತಿಯರಿಂದ ಜನಿಸಿದ ಎನ್ನುತ್ತದೆ ವೇದ. ಇದರ ಸಂಕೇತ ಮರಗಿಡಗಳಲ್ಲೂ ದೇವರನ್ನು ಕಾಣುವ ವಿಶಾಲ ಮನೋಭಾವ. ಸೋಮನನ್ನು ಸ್ವರ್ಗದ ಪುತ್ರ, ದುಗ್ಧ ( ಹಾಲು ಕರೆದು ಕೊಡುವವನು ) ಎಂದು ಕರೆದಿದ್ದಾರೆ. ಇದರ ಸೇವನೆಯು ಅಮೃತತ್ವವನ್ನು ಕರುಣಿಸುವುದು, ಹಾಗಾಗಿ ವನಸ್ಪತಿ ಎಂಬ ಹೆಸರೂ ಇದೆ.( ಈಗಿನ ಅಮೃತಬಳ್ಳಿ ಅದೇ ಎನ್ನುವುದು ಕೆಲವರ ಮತ ) ಇಂದ್ರನ ಪಾಲಿಗೆ ಇವನು ಶಕ್ತಿದಾಯಕ. ರೋಗಗಳ ನಾಶಕನಾಗಿ ಔಷಧರಾಜನೆಂದೂ ಸ್ತುತಿಸಿದ್ದಾರೆ. ಪರ್ವತಗಳ ಮೇಲೆ ವೇಗವಾಗಿ ಚಲಿಸುವ ಕಾರಣ ( ಅಥವಾ ಬೆಳೆಯುವ ) ಮೌಂಜನತ್ ಎಂಬ ಹೆಸರೂ ಇದೆ. *ಸೋಮೋ ಧೇನುಗ್ಂ ಸೋಮೋ ಅರ್ವಂತಮಾಶುಂ ಸೋಮೋ ವೀರಂ ಕರ್ಮಣ್ಯಂ ದದಾತಿ* ಎಂಬ ಮಂತ್ರದ ಸರಳ ಅರ್ಥದಂತೆ ಧೇನುಗಳನ್ನೂ , ಕೀರ್ತಿಯನ್ನು, ವೀರ್ಯವನ್ನೂ , ಉತ್ತಮ ಕರ್ಮಗಳನ್ನೂ ಕರುಣಿಸುತ್ತಾನೆ. ಪಿತೃಗಳ ಒಡೆಯನೆಂದೂ ಸ್ತುತಿಸಿದೆ ವೇದ. *ತ್ವನ್ನ: ಸೋಮ ವಿಶ್ವತೋ ರಕ್ಷಾ ರಾಜನ್ನಘಾಯತ:* ಪಾಪಕರ್ಮಗಳಲ್ಲಿ ತೊಡಗದಂತೆ ನಮ್ಮನ್ನು ನಮ್ಮ ಬುದ್ಧಿಯನ್ನು ಪ್ರಚೋದಿಸು ಎಂಬ ಭಾವದ ಪ್ರಾರ್ಥನೆ ಕಂಡುಬರುವುದು. ವನಸ್ಪತಿ, ವಾಚಸ್ಪತಿ, ವಿಶ್ವಚರ್ಷಣಿ, ರಕ್ಷೋಹಾ, ಅಮರ್ತ್ಯ, ಇಂದ್ರಪೀಲ, ಸಹಸಾಧಾರ, ಶಿಶು ಎಂಬ ನಾನಾ ಹೆಸರುಗಳು ಇವನಿಗಿವೆ‌. ಹೀಗೆ ಹತ್ತು ದೇವತೆಗಳು ವೇದಗಳಲ್ಲಿ ಪ್ರಧಾನವಾಗಿ ಸ್ತುತಿಸಲ್ಪಟ್ಟಿವೆ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩