🌹ಶಾಕುಂತಲದ ಒಂದು ಕುಸುಮ🌹

*अभ्यक्तमिव स्नात: शुचिरशुचिमिव प्रबुद्ध इव सु्प्तम् । बद्धमिव स्वैरगतिर्जनमिह सुखसङ्गिनमवैमि ।।*

_ಕಣ್ವರ ಶಿಷ್ಯನಾದ ಶಾರದ್ವತನ ಮಾತು. ಅವರ ಸಂದೇಶವನ್ನು ರಾಜನಿಗೆ ನಿವೇದಿಸಲು ನಗರಕ್ಕೆ ಬಂದಿದ್ದಾನೆ.ನಗರದ ಧಾವಂತದ ಬದುಕನ್ನು ನೋಡಿ ಅವನಿಗನ್ನಿಸಿದ ಭಾವವೇ ಈ ಶ್ಲೋಕ. ನಗರ ಪ್ರವೇಶ ಮಾಡಿದಾಗಿನಿಂದ ನನಗೆ ವಿಚಿತ್ರವೆನಿಸುತ್ತಿದೆ. ಸುಖಲೋಲುಪರಾದ ಈ ಜನರನ್ನು ಕಂಡು ಸ್ನಾನ ಮಾಡಿದವನು  ಎಣ್ಣೆ ಮೆತ್ತಿಕೊಂಡು ಅಭ್ಯಂಗಕ್ಕೆ ಸಿದ್ಧನಾಗಿರುವವನನ್ನು ಕಂಡಂತೆ, ಪರಿಶುದ್ಧನಾದವನು ಅಶುಚಿಯಾದವನ ಕಂಡಂತೆ, ಎಚ್ಚೆತ್ತವನು ಮಲಗಿದವನನ್ನು ಕಂಡಂತೆ, ಸ್ವತಂತ್ರವಾಗಿರುವವನು ಬಂಧನದಲ್ಲಿದ್ದವನನ್ನು ಕಂಡಂತೆ ಅನುಭವ ಎನಗಾಗುತ್ತಿದೆ. ಹಿಂದೆ ಶಾರ್ಙರವನಿಗೂ ನಗರವು ಹೊತ್ತಿ ಉರಿಯುತ್ತಿರುವಂತೆ ತೋರಿತ್ತು.ಈಗ ಶಾರದ್ವತನಿಗೂ ಅದೇ ಭಾವ.ನಗರದ ಧಾವಂತದ ಬದುಕಲ್ಲಿ ಸ್ನಾನ ಪಾನ ಭೋಜನಗಳಿಗೆ ನಿಯಮಿತ ಸಮಯ ಹೊಂದಿಸಿಕೊಳ್ಳುವುದು ಬಹಳ ಕಷ್ಟ. ಒಬ್ಬ ಸ್ನಾನ ಮಾಡಿ ಸಿದ್ಧನಾಗುವ ಸಮಯದಲ್ಲಿ ಇನ್ನೊಬ್ಬ ಕೆಲಸ ಮುಗಿಸಿ ಬಂದು ಸ್ನಾನಕ್ಕೆಂದು ಹೊರಡುತ್ತಿರುತ್ತಾನೆ.ಅಥವಾ ತಾನು ನಿದ್ರೆ ಮಾಡಲು ತಯಾರಾಗುತ್ತಾನೆ. ಇನ್ನು ಭಾರೀ ಸುಗಂಧದ್ರವ್ಯ ಪೂಸಿಕೊಂಡು ಗರಿಗರಿ ಬಟ್ಟೆ ಹಾಕಿಕೊಂಡು ಹೊರಟ ಕ್ಷಣದಲ್ಲಿಯೇ ಯಾವ ವಾಹನದ ಕೆಸರು ಅಂಟುವುದೋ ತಿಳಿಯುವುದಿಲ್ಲ. ಅಥವಾ ಬೇಗನೆ ಎದ್ದು ನಿತ್ಯಕರ್ಮ ಮಾಡುವವನು ಸೂರ್ಯ ಮೇಲೆ ಬಂದ ಮೇಲೆ ಏಳುವ ವ್ಯಕ್ತಿಯನ್ನು ನೋಡಿ ಅಸಮಾಧಾನ ಪಡುವಂತೆ, ಸ್ವತಂತ್ರವಾಗಿ ವ್ಯವಹರಿಸುವ ವ್ಯಕ್ತಿ ಪಟ್ಟಣದ ರೀತಿ ರಿವಾಜುಗಳ ಬಂಧನಕ್ಕೆ ಒಳಪಟ್ಟು ತಾನೂ ಪಾಪಕೂಪದಲ್ಲಿ ಬಂಧಿತನಾದಂತೆ ಅನ್ನಿಸುವ ಅವನ ಭಾವ ಈಗಿನ ನಗರದ ಜನರನ್ನು ನೋಡಿಯೇ ಹೇಳಿರುವಂತಿದೆ.ಕಾಳಿದಾಸನೇನೋ ಆಗ ಕಲ್ಪನೆ ಮಾಡಿಕೊಂಡಿದ್ದ ಆ ದೃಶ್ಯ ಈಗ ಎಲ್ಲೆಡೆ ನಗರದ ಬದುಕಿನಲ್ಲಿ ನಿಜವೇ ಆಗಿದೆ ಅಲ್ಲವೇ! ಮಾಲೋಪಮಾ ಅಲಂಕಾರ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩