💐ಪ್ರತಿಮಾ ನಾಟಕದ ಒಂದು ಕುಸುಮ💐

*वनगमननिवृत्ति: पार्थिवस्यैव तावन्मम पितृपरवत्ता बालभाव: स एव । नवनृपतिविमर्शे नास्ति शङ्का प्रजानां अथ च न परिभोगैर्वञ्चिता भ्रातरो मे ।।*

_ರಾಮನ ಮಾತು.ಕೈಕೇಯಿಯಿಂದಾಗಿ ನಿನ್ನ ಪಟ್ಟಾಭಿಷೇಕ ನಿಂತು ಹೋಯಿತು , ಇದು ಅನರ್ಥವಲ್ಲದೆ ಮತ್ತೇನು ಎಂದು ಕಂಚುಕಿಯು ನುಡಿದಾಗ ರಾಮನಾಡುವ ಸುಂದರ ಮಾತು. ಕೈಕೇಯಿಯ ಈ ನಿರ್ಧಾರ ನನಗಂತೂ ಅನುಕೂಲಕರವೇ ಆಗಿದೆ,ಇದರಲ್ಲಿ ಯಾವ ದೋಷವೂ ಕಂಡುಬರುತ್ತಿಲ್ಲ.ಹೇಗೆಂದರೆ ನಾನು ರಾಜನಾದರೆ ದಶರಥನು ಇಕ್ಷ್ವಾಕು ವಂಶದ ಪರಂಪರೆಯಂತೆ ಆಡಳಿತದ ಎಲ್ಲಾ ಜವಾಬ್ದಾರಿಗಳನ್ನು ನನಗೆ ವಹಿಸಿ ತಾನು ಕಾಡಿಗೆ ತೆರಳಬೇಕಿತ್ತು.ಆದರೆ ನನ್ನ ಅಭಿಷೇಕ ನಿಂತ ಕಾರಣ ದಶರಥನ ವನಗಮನವು ನಿವೃತ್ತವಾಯಿತು. ಎರಡನೆಯದಾಗಿ ನಾನಿನ್ನೂ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳದೆ ಅಪ್ಪನ ಪಾಲಿಗೆ ಮಗುವಾಗಿಯೇ ಉಳಿಯುವಂತಾಯಿತು.ರಾಜನಾಗಿದ್ದರೆ ಆ ಸಲುಗೆ , ಪ್ರೀತಿ, ಮುದ್ದಾಟ ಸಾಧ್ಯವಾಗುತ್ತಿರಲಿಲ್ಲ. ಮೂರನೆಯದಾಗಿ ಪ್ರಜೆಗಳು ಹೊಸ ರಾಜನ ಆಡಳಿತ ಹೇಗೆ ಇರುತ್ತದೆಯೋ ಏನೋ, ನಮ್ಮ ಪಾಲಿಗೆ ಪ್ರತಿಕೂಲವೋ ಅನುಕೂಲವೋ ಇತ್ಯಾದಿ ಚಿಂತಿಸುವುದೂ ನಿಂತಿತು.ಅವರಿಗೆ ಮೊದಲಿನಂತೆ ಉತ್ತಮ ಆಡಳಿತ ದಶರಥನ ನೇತೃತ್ವದಲ್ಲಿ ದೊರಕಿತು.ನಾಲ್ಕನೆಯದಾಗಿ ನಾವೆಲ್ಲ ಅಣ್ಣತಮ್ಮಂದಿರು ರಾಜಕುಮಾರರಾಗಿಯೇ ಉಳಿದು ಭೋಗಗಳಿಂದ ವಂಚಿತರಾಗಿಲ್ಲ.ನಾನು ರಾಜನಾಗಿದ್ದರೆ ನನ್ನ ತಮ್ಮಂದಿರು ಕೆಲವು ಜವಾಬ್ದಾರಿ ಹೊಂದಿ ಈಗ ರಾಜಕುಮಾರರಾಗಿ ಅನುಭವಿಸುತ್ತಿರುವ ಸುಖದಿಂದ ವಂಚಿತರಾಗಬೇಕಿತ್ತು.ಹೀಗೆ ಅಮ್ಮ ಅಭಿಷೇಕ ನಿರಾಕರಣೆ ಮಾಡಿಸಿದ್ದು ಗುಣವನ್ನೇ ಉಂಟುಮಾಡಿತು ಹೊರತು ದೋಷವನ್ನಲ್ಲ.ಹಾಗಾಗಿ ನನ್ನ ಪಾಲಿಗಂತೂ ಅಮ್ಮನ ಕಾರ್ಯ ಸರ್ವಥಾ ಸಾಧುವೇ ಆಗಿದೆ.ಅಪ್ಪನಿಂದಾಗಿಯೋ ಇನ್ಯಾರಿಂದಾಗಿಯೋ ಅಧಿಕಾರದಿಂದ, ಪದವಿಯಿಂದ ,ಶಿಕ್ಷಣದಿಂದ, ಸಂಪತ್ತಿನಿಂದ , ಗೌರವದಿಂದ ವಂಚಿತನಾದೆ ಎಂದು ಕೊರಗುವ ಈಗಿನ ನಮ್ಮ ಜನರಿಗೆ ರಾಮನ ಉದಾರ ಹೃದಯದ ಮಾತು ನಿಜಕ್ಕೂ ಪಾಠ.ಕವಿ ರಾಮನ ನಡೆ ನುಡಿ ಯಾಕೆ ಆದರ್ಶ ಎಂಬುದನ್ನು ಇಂತಹ ಮಾತುಗಳಿಂದ ಲೋಕಕ್ಕೆಲ್ಲ ಸಾರಿದ್ದಾನೆ. ಸಕಲರಲ್ಲಿಯೂ ಪ್ರೀತಿ ಕಾಣುವ ರಾಮನ ಕಣ್ಣುಗಳು ಯಾರ ತಪ್ಪನ್ನೂ ಹೇಳಲಾರವು, ಎಲ್ಲೆಡೆ ಒಳಿತನ್ನೇ ಕಾಣುವವು, ಇಂತಹ ಬುದ್ಧಿ ನಮಗೂ ರಾಮನು ನೀಡಲೆಂದು ಆಶಿಸೋಣ,_

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩