🌹ಶಾಕುಂತಲದ ಒಂದು ಕುಸುಮ🌹

*इदमुपनतमेवं रूपमक्लिष्टकान्ति प्रथमपरिगृहीतं स्यान्न वेति व्यवस्यन् । भ्रमर इव विभाते कुन्दमन्तस्तुषारं न च खलु परिभोक्तुं नैव शक्नोमि हातुम् ।।*

_ಪತಿಗಾಗಿ ಬಂದ ಶಕುಂತಲೆಯನ್ನು ದುಷ್ಯಂತ ಪತ್ನಿ ಎಂದು ಒಪ್ಪದಿದ್ದಾಗ ಗೌತಮಿಯು ಒಂದು ಕ್ಷಣ ಮುಖದ ಪರದೆಯನ್ನು ಸರಿಸುತ್ತೇನೆ, ಆಗಲಾರದೂ ರಾಜ ಗುರುತು ಹಿಡಿಯಬಹುದು ಎಂದು ಅವಳ ಪರದೆಯನ್ನು ಸರಿಸುತ್ತಾಳೆ. ಆಗ ಅವಳ ಮನಮೋಹಕ ಸೌಂದರ್ಯವನ್ನು ನೋಡಿದ ದುಷ್ಯಂತನ ಮಾತು. ನಿಷ್ಕಲ್ಮಶವಾದ ಕಾಂತಿಯಿಂದ ಕೂಡಿರುವ ತಾನೇ ತಾನಾಗಿ ನನಗೆ ಬಂದೊದಗಿರುವ ಈ ರೂಪಸಿಯನ್ನು ಹಿಂದೆ ಸ್ವೀಕರಿಸಿದ್ದೆನೊ ಇಲ್ಲವೊ ಎಂಬುದನ್ನು ನಿರ್ಧರಿಸಲಾಗದೆ , ಬೆಳಗಿನ ಜಾವದ ಮಂಜು ತುಂಬಿದ ಮಲ್ಲಿಗೆ ಹೂವನ್ನು ಕಂಡ ದುಂಬಿಯಂತೆ ಕಷ್ಟದ ಪರಿಸ್ಥಿತಿ ನನಗೂ ಆಗುತ್ತಿದೆ. ದುಂಬಿ ಹೂವನ್ನು ಕಂಡ ಕ್ಷಣವೇ ಮಕರಂದ ಹೀರಲು ಧಾವಿಸುತ್ತದೆ. ಆದರೆ ಬೆಳಿಗ್ಗೆಯ ಸಮಯದಲ್ಲಿ ಮಲ್ಲಿಗೆ ಹೂವಿನ ಮೇಲೆ ಮಂಜು ಬಿದ್ದು ಮಕರಂದ ಹೀರಲು ಅಡ್ಡಿಯಾಗುವುದು. ಎದುರಿಗೆ ಸುಂದರ ಪುಷ್ಪ ಇದ್ದರೂ ಅನುಭವಿಸಲಾರದ ಸ್ಥಿತಿ ಆ ದುಂಬಿಗೆ. ಪ್ರಕೃತ ರಾಜನ ಸ್ಥಿತಿಯೂ ಹಾಗೇ ಆಗಿದೆ. ಬಯಸದೆಯೇ ಅಪರೂಪದ ರೂಪಸಿ ಕಣ್ಣೆದುರು ನಿಂತಿರುವಳು. ತಾನೇ ಅವಳ ಪತಿ ಎಂದೂ ನುಡಿಯುತ್ತಿದ್ದಾಳೆ. ಆದರೆ ಮಂಜಿನಂತೆ ತಡೆಯಾಗಿರುವುದು ಅವಳನ್ನು ವರಿಸಿದ್ದೆನೊ ಇಲ್ಲವೋ ಎಂಬ ಮನಸ್ಥಿತಿ. ಮನವು ಅವಳ ಪರಿಣಯವನ್ನು ನಿಶ್ಚಯಿಸದೇ ಕಾರ್ಯದಲ್ಲಿ ತೊಡಗುವುದು ಸರ್ವಥಾ ತಪ್ಪು‌. ಹೀಗಾಗಿ ಎದುರಿಗೆ ಅನಾಯಾಸವಾಗಿ ದೊರೆತ ಈ ಸುಂದರಿಯನ್ನು ಅನುಭವಿಸಲೂ ಆಗುತ್ತಿಲ್ಲ. ಅಥವಾ ಬಿಟ್ಟು ಬಿಡೋಣವೆಂದರೆ ಅವಳ ಸೌಂದರ್ಯದ ಮೋಡಿ ಬಿಡಲು ಒಪ್ಪುತ್ತಿಲ್ಲ. ಆ ದುಂಬಿಗೆ ಅನುಭವಿಸಲೂ ,ಬಿಡಲೂ ಆಗದೆ ಚಡಪಡಿಕೆ ಉಂಟಾದಂತೆ ನನಗೂ ಏನು ಮಾಡಲೆಂದೇ ತಿಳಿಯುತ್ತಿಲ್ಲ. ಕಾಳಿದಾಸ ಮೌಲ್ಯಗಳನ್ನು ತಿಳಿಸುತ್ತಾ ರಸಗಳ ಪ್ರಕಾಶದಲ್ಲೂ ಹೆಚ್ಚು ಕಾಳಜಿ ವಹಿಸುತ್ತಾನೆ. ಶಕುಂತಲೆಯ ಸೌಂದರ್ಯ ಅದು ನಿಷ್ಕಲ್ಮಶ. ಒಂದೇ ಒಂದು ಕಪ್ಪುಚುಕ್ಕೆ ಕಾಣದು. ಬೆಂಕಿಯಲ್ಲಿ ಕಾಯಿಸಿದ ಚಿನ್ನದಂತೆ ಹೊಳಪಿನದು. ಅದನ್ನು ಅನುಭವಿಸಲೂ ಹಿಂದೆ ಮುಂದೆ ನೋಡುವ ಅನಿವಾರ್ಯ ಪರಿಸ್ಥಿತಿ. ಯಾವುದೇ ಕುಂದಿಲ್ಲದ ಅಥವಾ ಕೃತಕತೆ ಇಲ್ಲದ ಸಹಜ ಸೌಂದರ್ಯ ಅಕೆಯದು. ಹಿಮದಿಂದ ಮುಚ್ಚಿರುವ ಹೂವು ದುಂಬಿಗೆ ಜೇನಿದೆಯೋ ಜೇನಿದೆಯೋ ಇಲ್ಲವೋ ಎಂಬ ಸಂಶಯ ಹುಟ್ಟುಹಾಕುತ್ತಿದೆ. ಶಾಪದ ಕಾರಣದಿಂದ ಸುಪ್ತವಾದ ಸಂಸ್ಕಾರವುಳ್ಳ ದುಷ್ಯಂತನು ಶಕುಂತಲೆಯನ್ನು ಗುರುತಿಸಲಾಗದೇ ತೊಳಲಾಡುತ್ತಿರುವ ಮನಸ್ಥಿತಿಯನ್ನು ಕವಿ ದುಂಬಿಗೆ ಹೋಲಿಸಿ ಉಪಮಾ ಹಾಗೂ ಸಸಂದೇಹ ಅಲಂಕಾರಗಳಿಂದ ಸಮರ್ಪಕವಾಗಿ ವರ್ಣಿಸಿದ್ದಾನೆ. ಮೊದಲೇ ಸ್ವೀಕರಿಸಿರುವ ಅಂಶ ಶಾಪದಿಂದಾಗಿ ಮರೆತುಹೋಗಿದೆ. ನಮಗೂ ರಾಜನಂತೆ ಪರಿಸ್ಥಿತಿಗಳು ಬರುತ್ತವೆ. ವಸ್ತುವಿನ ಸೌಂದರ್ಯ ನೋಡಿ ಮರುಳಾಗಿ ವಿಚಾರ ಮಾಡದೇ ಪ್ರವೃತ್ತಿ ಮಾಡುತ್ತೇವೆ. ಅಂತಹ ಸಂದರ್ಭದಲ್ಲಿ ಯೋಚನೆ ಮಾಡಿ ಹೆಜ್ಜೆ ಇಡುವುದು ಒಳ್ಳೆಯದು ಎಂಬ ಸಂದೇಶ ಕವಿಯ ಆಶಯ_

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩