💐ಪ್ರತಿಮಾನಾಟಕದ ಒಂದು ಸುಮ💐

*अनुचरति शशाङ्कं राहुदोषेपि तारा पतति च वनवृक्षे याति भूमिं लता च । त्यजति न च करेणु: पङ्कलग्नं गजेन्द्रं व्रजतु चरतु धर्मं भर्तृनाथा हि नार्य: ।।*

_ವನವಾಸ ನಿಶ್ಚಿತವಾದ ಮೇಲೆ ರಾಮನು ತಾನು ಹೊರಡಲು ಅನುವಾಗಿ ಸೀತೆಗೆ ಇಲ್ಲೇ ಅತ್ತೆ ಮಾವಂದಿರೊಡನೆ ಇರುವಂತೆ ಹೇಳುತ್ತಾನೆ. ಅದಕ್ಕವಳು ಒಪ್ಪದಿದ್ದಾಗ ಲಕ್ಷ್ಮಣ ನೀನಾದರೂ ಕಾಡಿನ ಬಗ್ಗೆ ಅತ್ತಿಗೆಗೆ ತಿಳಿಹೇಳು ಎನ್ನುತ್ತಾನೆ ರಾಮ. ಆಗ ಲಕ್ಮ್ಷಣ ಸೀತೆಯ ಅಭಿಪ್ರಾಯವನ್ನೇ ತಾನೂ ಸಮರ್ಥಿಸುತ್ತಾನೆ. ಪತಿಯನ್ನು ಹಿಂಬಾಲಿಸುವ ಶುಭ ಕಾರ್ಯದಲ್ಲಿ ತೊಡಗುತ್ತಿರುವ ಇವಳನ್ನು ಯಾಕೆ ನಾನು ತಡೆಯಲಿ? ಲೋಕದ ಸ್ಥಿತಿ ಹೀಗಿದೆ. ಚಂದ್ರನ ಮಡದಿ ತಾರೆ ತನ್ನ ಪತಿ ರಾಹುವಿನಿಂದ ನುಂಗಲ್ಪಡುತ್ತಿದ್ದರೂ ಅವನನ್ನೇ ಹಿಂಬಾಲಿಸುತ್ತಾಳೆ. ಮರವೊಂದು ಭುವಿಗೆ ಬಿದ್ದಾಗ ಜೊತೆಗಾತಿ ಬಳ್ಳಿಯೂ ಅವನೊಡನೆ ತಾನೂ ನೆಲವನ್ನು ಆಶ್ರಯಿಸುವುದು. ಮರವನ್ನು ಬಿಟ್ಟು ಹೋಗದು ವೃಕ್ಷ. ಅಂತೆಯೇ ಹೆಣ್ಣು ಆನೆಯು ಕೆಸರಿನಲ್ಲಿ ಮುಳುಗುತ್ತಿರುವ ತನ್ನ ಪತಿಯನ್ನು ಬಿಟ್ಟು ಎಂದಿಗೂ ಮುಂದುವರಿಯಲಾರದು. ಹೀಗೆ ದೇವತೆಗಳಲ್ಲಿ, ಮರಗಿಡಗಳಲ್ಲಿ, ಪ್ರಾಣಿಗಳಲ್ಲೇ ಇಂತಹ ಅನ್ಯೋನ್ಯತೆ ಕಂಡುಬರುತ್ತಿರುವಾಗ ಭಾವನೆಗಳ ಜೊತೆಗೆ ಬದುಕು ಸಾಗಿಸುವ ಮನುಷ್ಯ ಮಾತ್ರಳಾದ ಈ ನಿನ್ನ ಸತಿ ನಿನ್ನನ್ನು ಹಿಂಬಾಲಿಸಲಿ, ಧರ್ಮದ ಕಾರ್ಯಗಳನ್ನು ಜೊತೆಗೆ ನಡೆಸಲಿ. ಎಷ್ಟೆಂದರೂ ಪತ್ನಿಯರು ಪತಿಯನ್ನೇ ಆಶ್ರಯಿಸಿರುವರು ಅಲ್ಲವೇ! ಸೊಗಸಾಸ ದೃಷ್ಟಾಂತ ಭಾಸನ ಈ ಶ್ಲೋಕದಲ್ಲಿ ನಿರೂಪಿತವಾಗಿದೆ. ಗ್ರಹಣದ ಕಾಲದಲ್ಲಿ ರಾಹುವು( ವಿಜ್ಞಾನದ ರೀತಿಯಲ್ಲಿ ನೆರಳು ) ಚಂದ್ರನನ್ನು ಆವರಿಸುತ್ತಾನೆ. ತಾರೆಯೂ ದೂರವಿರದೇ ಪತಿಯನ್ನೇ ಹಿಂಬಾಲಿಸುತ್ತಾಳೆ. ಪತಿಯ ಕಷ್ಟವನ್ನು ಹಂಚಿಕೊಳ್ಳಲು ಸಿದ್ಧಳಾಗುತ್ತಾಳೆ. ಮರಕ್ಕೆ ಲತೆಯೇ ಪತ್ನಿಯಂತೆ. ಕವಿ ಸಮಯದಂತೆ ಲತೆಗೆ ತರುವೇ ಪತಿ. ಕಾರಣಾಂತರಗಳಿಂದ ಮರ ಧರೆಗೆ ಒರಗಿದಾಗ ಲತೆ ಪ್ರತ್ಯೇಕವಾಗಿ ಇರುವುದೇ! ತರುವಿನೊಡನೆ ಅದೂ ಧರಾಶಾಯಿಯಾಗುವುದು. ಗಂಡು ಆನೆಯೊಂದು ಜಲಕ್ರೀಡೆಯಾಡುತ್ತಾ ಮೈ ಮರೆತು ಕೆಸರಿನಲ್ಲಿ ಸಿಕ್ಕಿಕೊಂಡಾಗ ಕರಿಣಿಯು ಬಿಟ್ಟು ಹೋಗುವುದೇ! ಸಾಧ್ಯವೇ ಇಲ್ಲ. ಘೀಳಿಟ್ಟು ಉಳಿದವುಗಳನ್ನು ಕರೆಸಿ ಕಾಪಾಡಲು ಪ್ರಯತ್ನಿಸುತ್ತದೆ. ಲೋಕದ ಎಲ್ಲಾ ವರ್ಗಗಳಲ್ಲಿ ಈ ವರ್ತನೆ ಸಾಮಾನ್ಯ. ಹಾಗಾಗಿ ಸೀತೆಯ ಬಯಕೆ ಸಮಂಜಸವಾಗಿದೆ. ಅದರಲ್ಲೇನೂ ವಿಶೇಷವಿಲ್ಲ. ಅವಳು ನಿನ್ನನ್ನೇ ನಂಬಿ ಬಂದವಳು. ಈಗ ನೀನು ಕಾಡಿನ ಕಲ್ಲು ಮುಳ್ಳುಗಳ ಹಾದಿಯಲ್ಲಿ ಗಡ್ಡೆ ಗೆಣಸು ತಿಂದು ದು:ಖ ಪಡುವಾಗ ಅವಳಿಲ್ಲಿ ಹೇಗೆ ತಾನೇ ಸುಖದಿಂದಿರುವಳು! ನಿನ್ನ ಕಷ್ಟ ಸುಖಗಳೆರಡರಲ್ಲೂ ಅವಳು ಸಮವಾಗಿ ಭಾಗಿಯಾಗುವಳು. ಹಾಗಾಗಿ ಅವಳೂ ನಿನ್ನೊಡನೆ ಬರಲಿ. ಇಲ್ಲಿ ಇನ್ನೊಂದು ಸೂಕ್ಷ್ಮ ವರ್ಣನೆ ಕೂಡ ಇದೆ. ರಾಮನ ಸೌಂದರ್ಯ ಚಂದ್ರನಂತೆ, ಮರದಂತೆ ಸಕಲರನ್ನೂ ಸಲಹುವ ಹೃದಯ ವೈಶಾಲ್ಯ, ಆನೆಯಂತೆ ಪರಾಕ್ರಮ ಇವೆಲ್ಲ ಕವಿಯ ಪದಗಳಲ್ಲಿ ಅಡಗಿದ ಧ್ವನಿ. ಅರ್ಥಾಂತರನ್ಯಾಸ ಅಲಂಕಾರ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩