📃ವೇದ-ಧರ್ಮ ಭಾಗ-೪

೫. ರುದ್ರ= *ರುಜಂ ದ್ರಾವಯತಿ* ರೋಗಗಳನ್ನು ಪರಿಹರಿಸುವವನು, *ರೋದಯತಿ ಇತಿ* ಹುಟ್ಟುವಾಗಲೇ ಅಳುತ್ತಿದ್ದವನನ್ನು ಬ್ರಹ್ಮ ವರಗಳನ್ನು ಕೊಟ್ಟು ಸಮಾಧಾನ ಮಾಡಿದ ಕಥೆ ಪುರಾಣಗಳಲ್ಲಿರುವಂತೆ, ಅಥವಾ ರೋಗಗಳ ದುಷ್ಟಶಕ್ತಿಗಳ ನಿಯಂತ್ರಕ ಎಂಬೆಲ್ಲಾ ಅರ್ಥಗಳು ಇವೆ. ಬ್ರಹ್ಮನ ಕೋಪದಿಂದ ಸೃಷ್ಟಿಯ ಕಾಲದಲ್ಲಿ ಹುಬ್ಬುಗಳ ಮಧ್ಯದಿಂದ ಜನಿಸಿದ ದೇವತೆ. ಅಂತರಿಕ್ಷ ಇವನ ಸ್ಥಾನ. ಋಗ್ವೇದದ ೩ ಸೂಕ್ತಗಳಲ್ಲಿ ಇವನನ್ನು ಸಂಪೂರ್ಣವಾಗಿ, ಇನ್ನು ಕೆಲವೆಡೆ ಬೇರೆ ದೇವತೆಗಳೊಡನೆ ಸ್ತುತಿಸಿದ್ದಾರೆ.  ಇವನು ಬೂದುಬಣ್ಣದ ದೇವತೆ. ಹೀಗಾಗಿಯೇ *ಬಭ್ರು* ಹೆಸರಿನಿಂದ ಕರೆದಿದೆ ವೇದ. ಇಂದ್ರನಿಗೂ ರುದ್ರನಿಗೂ ತುಟಿಗಳ ಸೌಂದರ್ಯದ ಕಾರಣ *ಸುಶಿಪ್ರ* ಎಂಬ ಹೆಸರೂ ಕಂಡುಬರುವುದು. ಶುಕ್ಲ ಯಜುರ್ವೇದವು ರುದ್ರನನ್ನು ರಕ್ತವರ್ಣದಿಂದ ಪ್ರಕಾಶಿಸುವನೆಂದೂ , ಬೇರೆ ಬೇರೆ ರೂಪಗಳನ್ನು ಧರಿಸಿ ಸೂರ್ಯನಂತೆ ಶೋಭಿಸುತ್ತಾನೆಂದೂ ವರ್ಣಿಸಿದೆ. ಚರ್ಮವೇ ಇವನ ಅಂಬರ. ಪರ್ವತವೇ ಮನೆ. ಭಸ್ಮವೇ ಲೇಪನ. ಸದಾ ಧ್ಯಾನವೇ ಕಾರ್ಯ. *ಧನುರಾತನೋಮಿ ಬ್ರಹ್ಮದ್ವಿಷೇ ಶರವೇ ಹಂತ ವಾ ಉ* ಲಕ್ಷ್ಮಿಯು ನಾಸ್ತಿಕರ ಅಥವಾ ಅಧರ್ಮಿಗಳ  ಸಂಹಾರಕ್ಕೆಂದು ರುದ್ರನಿಗೆ ಧನುಸ್ಸನ್ನು ನೀಡಿದ್ದಾಳೆ. ರುದ್ರನು ಕೆಲವೊಮ್ಮೆ ಚಕ್ರ, ವಜ್ರ ,ಕತ್ತಿ ಹೀಗೆ ವಿವಿಧ ಆಯುಧ ಧರಿಸಿರುವ ವರ್ಣನೆ ಇದೆ. ರುದ್ರನ ಖಡ್ಗ ಮಿಂಚಿನಿಂದ ತಯಾರಿಸಿದ್ದು. ಗಾಳಿಗಿಂತಲೂ ವೇಗದ ಚಲನೆ ಇವನ ಖಡ್ಗಕ್ಕೆ. ರುದ್ರನ ಘೋರ ಹಾಗೂ ಅಘೋರ ಎರಡೂ ರೂಪಗಳನ್ನು ವೇದ ಸ್ತುತಿಸಿದೆ. *ಅಘೋರೇಭ್ಯೋ ಅಥ ಘೋರೇಭ್ಯೋ* ಇತ್ಯಾದಿ ಮಂತ್ರಗಳಲ್ಲಿ. ಘೋರ ರೂಪದಲ್ಲಿ ನಾಶಕ, ಅಘೋರ ರೂಪದಲ್ಲಿ ಪಾಲಕ.ಇವನ ಹಸ್ತವು ಭಕ್ತರಿಗೆ ಸುಖ ಕೊಡುವ ಕಾರಣ *ಭೃಣಯಾಕು* ಎಂದಿದೆ ವೇದ. ಬಾಳಿಗೆ ತಂಪು ಕೊಡುವ ಕಾರಣ ಜೂಷ, ಆರೋಗ್ಯ ನೀಡುವ ಕಾರಣ ಭೇಷಜ ಹೀಗೆ ನಾನಾ ಹೆಸರು ಇವೆ. *ಪ್ರಥಮೋ ದೈವ್ಯೋ ಭಿಷಕ್* ಎಂದು ದೇವತೆಗಳ ಮೊದಲ ವೈದ್ಯ ಇತ್ಯಾದಿ ಸ್ತುತಿಸಿವೆ. ರುದ್ರ ಪ್ರಶ್ನೆಯ ಚಮಕದಲ್ಲಂತೂ *ಅಶ್ಮಾ ,ಮೃತ್ತಿಕಾ, ಗಿರಯ , ಪರ್ವತ,  ಆಧಿಪತ್ಯ, ಅಗ್ನಿ, ಗರ್ಭ, ಇಧ್ಮ, ಒಂದು ಎರಡು ಸಂಖ್ಯೆ, ಪ್ರಿಯ ಅಪ್ರಿಯ, ಪಯ* ಹೀಗೆ ಜಗತ್ತಿನ ಜೀವ ಜಡ ವಸ್ತುಗಳು , ಜೀವಿಗಳ ಭಾವಗಳು, ಎಲ್ಲಾ ದೇವತೆಗಳು ಶಿವನ ಸ್ವರೂಪ ಎಂದೇ ಬಲು ಸುಂದರವಾದ ನಿರೂಪಣೆ ಕಾಣುತ್ತದೆ. ನಮಕ ಪ್ರಶ್ನೆಯಲ್ಲಿ ಎಲ್ಲದರ ಕರ್ತೃವೆಂದು ಸಕಲ ಕ್ರಿಯೆಗಳ ಕಾರಣ ಕಾರ್ಯ ರೂಪ ಅವನದ್ದೆಂದೂ ಸ್ತುತಿಸಿದೆ. ರುದ್ರ ಪಾರಾಯಣ ಮಾಡಿದರೆ ನೀವು ಶಿವನನ್ನು ಜಗತ್ತಿನ ಎಲ್ಲದರ ಸ್ವರೂಪ ಭೂತವಾಗಿ ಸ್ತುತಿಸಿದಂತೆ ಆಗುತ್ತದೆ. *ರೋರೂಯಮಾಣೋ ದ್ರವತಿ* ಭಕ್ತಿಯಿಂದ ಸ್ತುತಿಸುವ ಭಕ್ತರಿಗೆ ಕರುಣಾಸಾಗರ ಇವನು. ಮಾನವ, ದೇವತೆ , ರಾಕ್ಷಸ ಹೀಗೆ ಯಾರೇ ಸ್ತುತಿಸಿದರೂ ಕೇಳಿದ್ದೆಲ್ಲ ಕರುಣಿಸುವ ದಯಾಳು. *ಯದರೋದೀತ್ ತದ್ರುದ್ರಸ್ಯ ರುದ್ರತ್ವಂ* ಎಂದು ಅವನ ಉತ್ಪತ್ತಿಯ ಬಗ್ಗೆ ಬೆಳಕು ಚೆಲ್ಲುತ್ತದೆ ವೇದಮಂತ್ರ. ಹೀಗೆ ರುದ್ರನ ವಿಶ್ವ ರೂಪಿತ್ವ, ದಯಾಮಯತ್ವ, ಲಯಕಾಲದ ಉಗ್ರರೂಪ ಇತ್ಯಾದಿ ಬಹುವಿಧದ ವರ್ಣನೆ ಕಂಡುಬರುವುದು.

೬. ಬೃಹಸ್ಪತಿ= ಭೂಮಿಯಲ್ಲಿನ ದೇವತೆ. ಋಗ್ವೇದವು ಸುಮಾರು ೧೧ ಸೂಕ್ತಗಳಲ್ಲಿ ಇವನನ್ನು ಸ್ತುತಿಸಿದೆ. ಇನ್ನೂ ಕೆಲವೆಡೆ ಇಂದ್ರನ ಜೊತೆಗೆ ಇವನ ಸ್ತುತಿ ಇದೆ. ಬೃಹ ಎಂದರೆ ವೃದ್ಧಿ ಅದರ ಪತಿ. ನಮ್ಮ ಅಭಿವೃದ್ಧಿಯ ಸಾಕಾರಮೂರ್ತಿ. ಬೃಹ ಶಬ್ದಕ್ಕೆ ಸ್ತೋತ್ರ , ಪ್ರಾರ್ಥನೆ ಇತ್ಯಾದಿ ಅರ್ಥಗಳೂ ಇವೆ. ಇದರಂತೆ ನಮ್ಮ ದೇವರ ಕುರಿತಾದ ಮಾತುಗಳೆಲ್ಲದರ ನಿಯಂತ್ರಣ ಬೃಹಸ್ಪತಿಯ ಅಧೀನ. ಇವನಿಗೆ ಬ್ರಹ್ಮಣಸ್ಪತಿ, ಸದಸಸ್ಪತಿ, ಗಣಪತಿ, ಸಪ್ತಮುಖ, ಸಪ್ತರಶ್ಮಿ, ಸಪ್ತಜಿಹ್ವ, ಮಂದ್ರಜಿಹ್ವ, ನೀಲಪೃಷ್ಠ, ಪಥಿಕೃತ  ಮುಂತಾದ ಹೆಸರೂ ಇವೆ. ಇದರಂತೆ ಏಳು ನಾಲಗೆ, ಏಳು ಮುಖಗಳು, ಏಳು ನಾಲಗೆ ಹೊಂದಿರುವ ಮಹಾನ್ ರೂಪವನ್ನು ಕಲ್ಪಿಸಬಹುದು. ಚಿನ್ನದಂತೆ ಹೊಳೆಯುವ ಕಾಂತಿ ಇವನದ್ದು, ಕೈಗಳಲ್ಲಿ ಧನುರ್ಬಾಣ ಹಿಡಿದು ಹೋರಾಡುವ ವೀರನಿವನು. ಪರಶು ಮತ್ತು ಶಕ್ತಿಯರ ಪುತ್ರ. ಆಂಗಿರಸ ಎಂಬ ಹೆಸರೂ ಇದೆ. ಪರಾ, ಪಶ್ಯಂತೀ, ಮಧ್ಯಮಾ ಎಂಬ ಮೂರು ವಾಕ್ಕುಗಳ ಜೊತೆ ಇವನ ಸಂಬಂಧದ ಬಗ್ಗೆ ವೇದಗಳಲ್ಲಿ ಕಂಡುಬರುತ್ತದೆ. ಕಪ್ಪುಪೀಠ ಇವನ ಆಸನ. ಚಿನ್ನದ ಕೊಡಲಿ ಪ್ರಮುಖ ಆಯುಧ. ಇವನ ದಿವ್ಯ ರಥಕ್ಕೆ ಕೆಂಪು ಕುದುರೆಗಳನ್ನು ಜೋಡಿಸಿದ್ದಾರೆ. ಇಂದ್ರನ ಜೊತೆ ಇವನು ದಂಡೆತ್ತಿ ಹೋಗಿ ಅಸುರರ ಹುಟ್ಟಡಗಿಸಿ ಧೇನುಗಳನ್ನು ಬಿಡಿಸಿದನು. ಮಂತ್ರ ಅಥವಾ ಸ್ತೋತ್ರಗಳ ಉಚ್ಚಾರಣೆಗೆ ಇವನ ಪ್ರೇರಣೆಯೇ ಮೂಲ ಕಾರಣ. ಹಾಗಾಗಿ ಎಲ್ಲ ಬಗೆಯ ಸ್ತುತಿ ಸರಿಯಾಗಲು ಇವನ ಅನುಗ್ರಹ ಅವಶ್ಯಕ. ಇವನ ದಯೆಯಿಲ್ಲದೆ ಯಜ್ಞಗಳ ಅನುಷ್ಠಾನ ಅಸಾಧ್ಯ. ಅದು ನಿಷ್ಫಲವೂ ಆಗುತ್ತದೆ. ಅಗ್ನಿಯಂತೆ ಇವನೂ ಪುರೋಹಿತನು. ಕೆಲವೊಮ್ಮೆ ಅಗ್ನಿಯ ಪ್ರತೀಕನೂ ಹೌದು. ವಾಸಸ್ಥಾನದ ದೇವತೆಯೆಂಬ ಅರ್ಥದಲ್ಲಿ ಸದಸಸ್ಪತಿಯೆಂಬ ಹೆಸರು. ಅಗ್ನಿಯಂತೆ ಮೂರು ಸ್ಥಾನಗಳ ದೇವನಿವನು. *ಬೃಹಸ್ಪತೇ .....ಅಸ್ಮಾಸು ದ್ರವಿಣಂ ಧೇಹಿ* ಎಂಬ ಸ್ತುತಿಯಂತೆ ನಮಗೆ ಸತ್ಯವಾದ ಅಂದರೆ ಶಾಶ್ವತವಾದ ಸಂಪತ್ತನ್ನು ಕರುಣಿಸು ಎಂದು ಪ್ರಾರ್ಥಿಸುವುದು. *ಸದಸಸ್ಪತಿಮದ್ಭುತಂ* ಎಂಬ ಮಂತ್ರದಲ್ಲಿ ಮೇಧಾಶಕ್ತಿಯನ್ನು ಕರುಣಿಸು ಎಂಬ ಪ್ರಾರ್ಥನೆ. *ಬೃಹಸ್ಪತೇ ಸುಪ್ರಜಾ ವೀರವಂತೋ* ಎಂಬಲ್ಲಿ ಒಳ್ಳೆಯ ಮಕ್ಕಳನ್ನು ಕರುಣಿಸು ಎಂಬ ಸ್ತುತಿ ಕಂಡುಬರುತ್ತದೆ. *ಬೃಹಸ್ಪತಿ: ಪ್ರಥಮಂ ಜಾಯಮಾನ:* ಎಂಬ ಮಂತ್ರದ ತಾತ್ಪರ್ಯದಂತೆ ಒಳ್ಳೆಯ ಹಾಗೂ ಕೆಟ್ಟ ಸೃಷ್ಟಿ ಇವನ ಪ್ರೇರಣೆಯಿಂದಲೇ ಆಗುವುದು. *ಬ್ರಹ್ಮಣಸ್ಪತೇ ತ್ವಮಸ್ಯ ಯಂತಾ* ಎಂಬಲ್ಲಿ ವಿಶ್ವದ ನಿಯಾಮಕನೆಂದು ಸ್ತುತಿಸಿದೆ.ಹೀಗೆ ಹತ್ತು ಹಲವು ಬಗೆಯ ಮಂತ್ರಗಳು ರೂಪಗಳು ವಿಧ ವಿಧದ ಬಯಕೆಗಳಿಗಾಗಿ ಯಾಚನೆಗಳು ಬೃಹಸ್ಪತಿಯ ಉದ್ದೇಶವಾಗಿ ಕಂಡುಬರುತ್ತವೆ.

📙ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩