ರಾಮನ್ ೧೯೮

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೭🏝📖

*कृतस्वस्त्ययनं मात्रा पित्रा दशरथेन च। पुरोधसा वसिष्ठेन मङ्गलैरभिमन्त्रितम् ।।ददौ कुशिकपुत्राय सुप्रीतेनान्तरात्मना।।*

_ರಾಘವನ ವನಗಮನ ನಿಶ್ಚಯವಾಯಿತು. ರಾಮನ ನಡೆ ಸರ್ವರಿಗೂ ಅಡಿಗಡಿಗೆ ಮಾರ್ಗದರ್ಶಕ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಅರಮನೆಯಲ್ಲಿ ಸುಖವಾಗಿ ಕಳೆವ ಹೊತ್ತಲ್ಲಿ ಅಪ್ಪ ಕಾಡಿಗೆ ಕಳುಹಿದನಲ್ಲ ಎಂದು ಇನಿತೂ ಬೇಸರಿಸದೇ ತಂದೆ- ತಾಯಂದಿರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು, ಗುರುಗಳಾದ ವಸಿಷ್ಠರಿಗೆ ನಮಸ್ಕರಿಸಿ ಅವರಿಂದ ಕೆಲವು ರಕ್ಷಾಮಂತ್ರಗಳಿಂದ ಅಭಿಮಂತ್ರಿತನಾಗಿ ಹೊರಟ ಬಾಲರಾಮ. ದೂರ ಪ್ರಯಾಣ ಮಾಡುವುದಾದರೆ ಅಥವಾ ಬಹುದಿನ ಎಲ್ಲಾದರೂ ಹೋಗುವುದಾದರೆ ತಂದೆ-ತಾಯಂದಿರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದು ಹೋಗುವ ಸುಂದರ ಪರಂಪರೆಯ ದರ್ಶನ ಇಲ್ಲಿದೆ. ತಾನು ಹೋದವನು ತಿರುಗಿ ಬರುವನೋ ಇಲ್ಲವೋ ಅಥವಾ ಇವರೀರ್ವರು ವಯೋಸಹಜತೆಯಿಂದ ಸ್ವರ್ಗದ ದಾರಿ ಕ್ರಮಿಸಿದರೆ ಎಂಬ ಒಂದು ಜಾಗೃತಿ ಅಲ್ಲದೆ  ಗುರುಹಿರಿಯರ ನಿತ್ಯವಂದನೆಯು ಆಯುಷ್ಯವನ್ನೂ-ವಿದ್ಯೆಯನ್ನೂ-ಯಶಸ್ಸನ್ನೂ- ಮನೋಬಲವನ್ನೂ ಹೆಚ್ಚು ಮಾಡುತ್ತದೆ. ಅವರ ಮನಃಪೂರ್ವಕ ಆಶೀರ್ವಾದವು ನಮ್ಮಲ್ಲಿ ಇನ್ನಷ್ಟು ಕಸುವನ್ನು ತುಂಬಿಕೊಡುತ್ತವೆ. ಹಾಗಾಗಿ ಅಭಿವಾದನ ಎನ್ನುವುದು ತಂದೆ ತಾಯಂದಿರಿಂದ ಆರಂಭವಾಗಿ ಯಾರು ಜ್ಞಾನಿಗಳು ಎದುರಾದರೂ ಮಾಡುವುದು ಅತ್ಯಂತ ಅವಶ್ಯ ಕರ್ತವ್ಯ. ‌ಅದನ್ನೇ ರಾಮ ತನ್ನ ನಡೆಯಿಂದ ತೋರಿಸಿದ್ದು. ವಿಶ್ವಾಮಿತ್ರರಂತಹ ಬ್ರಹ್ಮರ್ಷಿಗಳೇ ರಕ್ಷಕರಾಗಿರುವಾಗ ಹೆದರಿಕೆ ಎಲ್ಲಿಯದು? ಆದರೂ ಸೂರ್ಯವಂಶದ ಏಳ್ಗೆಗಾಗಿ ಸದಾ ತುಡಿವ ವಸಿಷ್ಠರು ರಾಮನಿಗೂ ಅಥರ್ವವೇದೋಕ್ತ ಮಂತ್ರಗಳ ರಕ್ಷೆ ಕೊಟ್ಟು ಕಳುಹಿದರು. ಒಂದು ನಮಸ್ಕಾರ ಪ್ರಯೋಜನ ಹತ್ತು.ಹಾಗಾಗಿ ನಮನ ಎನ್ನುವುದು ಸದಾ ಮನದಲ್ಲಿ ನೆನಪಿರಬೇಕು._

*अनुयातौ श्रियौ दीप्तौ शोभयेतामनिन्दितौ। स्थाणुं देवमिवाचिन्त्यं कुमाराविव पावकी।। रामेति मधुरां वाणीं विश्वामित्रोsभ्यभाषत।।*

_ಪ್ರಸ್ಥಾನ ಪ್ರಾರಂಭವಾಗಿದೆ. ದೇವಲೋಕದಲ್ಲಿ ಬ್ರಹ್ಮನನ್ನು ಅಶ್ವಿನಿ ದೇವತೆಗಳು ಅನುಸರಿಸುವಂತೆ ಕೌಶಿಕನನ್ನು ಅಣ್ಣತಮ್ಮಂದಿರು ಅನುಸರಿಸುತ್ತಿದ್ದಾರೆ. ಸುಕುಮಾರರು, ಸುಮನೋಹರರು, ಸುಧಾಸದೃಶ ಕಾಂತಿಮಂತರೂ,ಸಣ್ಣ ತಪ್ಪೂ ಮಾಡದ ನಿಷ್ಕಳಂಕ ವ್ಯಕ್ತಿತ್ವದ ಸಹೋದರರು, ಯಜ್ಞೇಶ್ವರನ ದಯೆಯಿಂದ ಜನಿಸಿದ ಸ್ಕಂದ-ವಿಶಾಖರು ( ಸ್ಕಂದನ ಜೊತೆಗೆ ಹುಟ್ಟಿದ ಅವನ ತಾಪ ಅಥವಾ ಸ್ಕಂದನ ವಜ್ರ ಪ್ರಹಾರದಿಂದ ಜನಿಸಿದ ಒಬ್ಬ ಪುರುಷ)  ತಂದೆಯಾದ ಮಹಾದೇವನನ್ನು ಅನುಸರಿಸುವಂತೆ ಮಹರ್ಷಿಗಳನ್ನು ಅನುಸರಿಸಿ ಮುಂದುವರೆದರು. ಗುರುಗಳ ನಡಿಗೆಗೆ ಭಂಗ ತರದೆ ತಮ್ಮ ವಿಷಯ ಬಯಕೆಗಳನ್ನು ಭಂಗ ಪಡಿಸಿಕೊಂಡು ಶೋಭಿಸಿದರು ಕುಮಾರರು. ಸರಯೂ ನದಿ ಸಮೀಪಿಸಿದಂತೆ ವಿಶ್ವಾಮಿತ್ರರು *ರಾಮ* ಎಂಬ ಮಧುರವಾಣಿಯಿಂದ ಮಾತನಾಡಲಾರಂಭಿಸಿದರು. ಯೋಗಿಗಳಿಗೆ ಧ್ಯಾನಮಾರ್ಗದಿಂದ ಬಹುಕಾಲ ಅಗೋಚರನಾದ ಈ ಆನಂದದಾಯಕ ಪ್ರಭು ರಾಮ ವಿಶ್ವಾಮಿತ್ರನಿಗೆ ಸುಲಭದಲ್ಲಿ ಒಲಿದು ಬಂದನೆಂದು ಬಣ್ಣಿಸುತ್ತಾನೆ ಭೋಜ. ರಾಮ ಎಂಬ ಹೆಸರೇ ನಮ್ಮ ಆನಂದ ವರ್ಧಕವಾದುದು. ಪಾಪ ಕಡಿಮೆ ಆದಂತೆ ಪುಣ್ಯವಿಶೇಷಗಳಿಂದ ಸದಾ ಅನಂದ ಒದಗಿದರೆ ಮತ್ತೇಕೆ ತಡ ರಾಮ ಎನ್ನಲು. ವಿಶ್ವಾಮಿತ್ರರು ಅನೇಕ ಬಾರಿ ರಾಮ ಎಂದು ಮನದಲ್ಲಿ ಧ್ಯಾನಿಸಿ ಮಾತಿನಲ್ಲಿ ಕರೆದರು._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩