ರಾಮಾಯಣ ೨೦೨
📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೨೦೧🏝📖
*दग्धस्य तस्य रौद्रेण चक्षुषा रघुनन्दन। व्यशीर्यन्त शरीरात्स्वात्सर्वगात्राणि दुर्मतेः।। स चाङ्गविषयः श्रीमान्यत्राङ्गं प्रमुमोच ह।*
_ರಾಮರನ್ನು ಕುರಿತು ಮಹರ್ಷಿಗಳು ಸ್ಥಳಪುರಾಣವನ್ನು ಅರುಹುತ್ತಿದ್ದಾರೆ. ಈ ಆಶ್ರಮದಲ್ಲಿ ಹಿಂದೆ ಸಾಕ್ಷಾತ್ ಪರಮೇಶ್ವರನು ತಪವ ಮಾಡಿದ್ದನು. ಮರುದ್ಗಣಗಳೊಂದಿಗೆ ದೇವತೆಗಳ ಆಶಯದಂತೆ ತಪಸ್ಸು ಕೆಡಿಸಲು ಯತ್ನಿಸಿದ ಮನ್ಮಥನನ್ನು ಶಿವನು ಹುಂಕರಿಸಿ ಫಾಲನೇತ್ರದಿಂದ ಸುಟ್ಟ ಪ್ರದೇಶವಿದು. ಮನ್ಮಥನು ತನ್ನ ಅಂಗವನ್ನು ತ್ಯಜಿಸಿ ಅನಂಗನಾದ ಈ ಪ್ರದೇಶ ಅಂದಿನಿಂದ ಅಂಗದೇಶವೆಂದು ಖ್ಯಾತವಾಯಿತು.ಈ ಆಶ್ರಮವು ಶಿವನ ಶಿಷ್ಯಪರಂಪರೆಯ ತಪಸ್ವಿಗಳಿಂದ ಕೂಡಿದೆ. ಈ ಋಷಿಗಳು ಸದಾ ಧರ್ಮಪರರು ಹಾಗೂ ಪಾಪರಹಿತರು.ನಾವೂ ಈ ಪುಣ್ಯಭೂಮಿಯಲ್ಲಿ ಈ ರಾತ್ರಿ ಕಳೆಯೋಣ. ಇಂದಿನ ಬಿಹಾರದ ಭಾಗಲ್ಪುರ ನಗರದ ಸಮೀಪದ ಪ್ರದೇಶವನ್ನು ಅಂಗ ದೇಶ ಎನ್ನುತ್ತಾರೆ. ರಾಮಾಯಣ ಕಾಲದಲ್ಲಿ ರೋಮಪಾದನು ಈ ದೇಶದ ದೊರೆಯಾಗಿದ್ದನೆಂದು ತೋರುತ್ತದೆ. ಈ ದೇಶದ ಸಂಸ್ಕೃತಿ ಅಷ್ಟೇನೂ ಒಳ್ಳೆಯದಿದ್ದಂತಿಲ್ಲ. ಬುಡಕಟ್ಟು ಜನಾಂಗದವರಿದ್ದ ಈ ಪ್ರದೇಶದ ಜನರು ತಮ್ಮ ಪತ್ನಿಯನ್ನು ಪರರಿಗೆ ಮಾರುತ್ತಿದ್ದುದೇ ಬಹುಶಃ ಅದಕ್ಕೆ ಕಾರಣವಿರಬಹುದು. ಅಲ್ಲಿಯ ಜನರನ್ನು ಅಂಗರು ಎಂದು ಕರೆದಿದ್ದಾರೆ. ಬೋಧಾಯನ ಧರ್ಮಸೂತ್ರದಲ್ಲಿ ಅಂಗದೇಶಕ್ಕೆ ಹೋದರೆ ಶುದ್ಧಿಗಾಗಿ ಎರಡು ಯಜ್ಞ ಮಾಡಬೇಕೆಂದು ವಿಧಾನ ಮಾಡಿರುವುದು ಹಾಗೂ ಮಿಶ್ರಜನಾಂಗ ಎಂದು ಉಲ್ಲೇಖಿಸಿರುವುದು ಅಲ್ಲಿಯ ಇತಿಹಾಸವನ್ನು ತಿಳಿಸಿಕೊಡುತ್ತದೆ. ಜನ ಜೀವನ ಹೇಗಿದ್ದರೂ ಶಿವನು ತಪಗೈದ ಪ್ರದೇಶ ಅತ್ಯಂತ ಪುಣ್ಯತಮ. ಹಾಗಾಗಿ ಸಂದರ್ಶಿಸದೇ ಮುಂದುವರಿಯುವುದು ಸರಿಯಲ್ಲ ಎಂದೇ ವಿಶ್ವಾಮಿತ್ರರು ಉಳಿದದ್ದು ಹಾಗೂ ಅರುಹಿದ್ದು.ರಾಮನು ನಡೆದಾಡಿದ ಭಾರತಭೂಮಿಯ ಕಣಕಣವೂ ಪವಿತ್ರ. ರಾಮನ ಸ್ಮರಣೆಯೂ ಪವಿತ್ರ. ರಾಮಾಯಣದ ಅಧ್ಯಯನವೂ ಪವಿತ್ರ. ರಾಮನ ಬಗೆಗಿನ ಎಲ್ಲವೂ ನಮ್ಮನ್ನು ಮುಕ್ತಿಮಾರ್ಗದ ಪಥಕ್ಕೆ ಕೊಂಡೊಯ್ಯುವ ಮೆಟ್ಟಿಲುಗಳು. ರಾಮ ನವಮಿ ನವವಿಧ ಭಕ್ತಿಯನ್ನು ಜಾಗೃತ ಮಾಡಿ ಆರಾಮವಾಗಿ ಆ ರಾಮನನ್ನು ನೋಡುವ ಪಾಡುವ ಕೊಂಡಾಡುವ ಭಾಗ್ಯ ಒದಗಿಸಲಿ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ