ರಾಮಾಯಣ ೧೯೯

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೮🏝📖

*न श्रमो न ज्वरो वा ते न रूपस्य विपर्ययः। न च सुप्तं प्रमत्तं वा धर्षयिष्यन्ति नैऋताः।।न बाह्वोः सदृशो वीर्ये पृथिव्यामस्ति कश्चन। बलामतिबलां चैव पठतस्तात राघव।।*

_ಮಹರ್ಷಿಗಳು ಯೋಗ್ಯತೆಯನ್ನು ಗ್ರಹಿಸಿದ್ದಾರೆ. ಮಂತ್ರವಿರಲಿ ವಿದ್ಯೆಯಿರಲಿ ಅರ್ಹತೆ ಹಾಗೂ ಯೋಗ್ಯತೆ ಇದ್ದರೆ ಮಾತ್ರ ಉಪದೇಶಿಸಬೇಕು. ಆಗ ಮಾತ್ರ ಅದು ಸಮಾಜಕ್ಕೆ ಉಪಕಾರಿಯಾಗುವುದು. ಇಲ್ಲದಿದ್ದರೆ ವೈದ್ಯಕೀಯ ಕಲಿತು ಸಂಸತ್ತಿನ ಮೇಲೆ ದಾಳಿ ಮಾಡುವ ಪುಂಡರ ಗುಂಪಿಗೆ ಸೇರುತ್ತಾರೆ. ಮಗು ರಾಮ, ಮುಹೂರ್ತ ಮೀರುವ ಮುನ್ನ ಆಚಮನ ಮಾಡು, ಬಲಾ- ಅತಿಬಲಾ ಎಂಬ ವಿದ್ಯೆಗಳನ್ನು ಉಪದೇಶಿಸುವೆ.‌ಸಿದ್ಧಿಸಿಕೊ. ಅದರ ಫಲವಾದರೋ ಜಗದ ಯಾವ ತಾಪವೂ ಬಾಧಿಸದ ಅದ್ಭುತ ಫಲ. ಎಷ್ಟು ನಡೆದರೂ ಎಷ್ಟು ಕಾಲ ಯುದ್ಧ ಮಾಡಿದರೂ ದಣಿವಾಗದು. ಜ್ವರ ಮೊದಲಾದ ಯಾವ ಉಪದ್ರವವೂ ಸಮೀಪ ಬರದು. ಮೊಗದ ಕಾಂತಿ ಎಂದೂ ಮಾಸದು. ಮಲಗಿದರೂ ಏನನ್ನೋ ಯೋಚಿಸುತ್ತಿದ್ದರೂ ಯಾವೊಬ್ಬ ರಾತ್ರಿಚರನೂ ಪೀಡಿಸಲಾರನು. ಇದನ್ನು ಅನುಷ್ಠಾನ ಮಾಡಿ ಸಿದ್ಧಿಸಿಕೊಂಡವನ ಬಾಹುಬಲಕ್ಕೆ ಲೋಕದಲ್ಲಿ ಸಾಟಿಯೇ ಇರುವುದಿಲ್ಲ. ಸೌಭಾಗ್ಯದಲ್ಲಿ, ಸಾಮರ್ಥ್ಯದಲ್ಲಿ, ಲೌಕಿಕ-ಅಲೌಕಿಕ ವಿಷಯದ ಜ್ಞಾನದಲ್ಲಿ, ಬುದ್ಧಿಶಕ್ತಿಯಲ್ಲಿ, ವಾದಕ್ಕೆ ಉತ್ತರಿಸುವುದರಲ್ಲಿ ಈ ಮಂತ್ರದ ಪ್ರಭಾವದಿಂದ ನಿನ್ನ ಸಮನಾದವರು ಯಾರೂ ಇರುವುದಿಲ್ಲ. ಜನರ ಬದುಕಿನ ಏಕೈಕ ಚಿಂತೆಯಾದ ಹಸಿವು-ಬಾಯಾರಿಕೆಯೇ ಇರುವುದಿಲ್ಲ. ಇವೆರಡೂ ಸಾಕ್ಷಾತ್ ಬ್ರಹ್ಮನ ಮಕ್ಕಳು. ನೀನು ಸತ್ಪಾತ್ರನಾದುದರಿಂದ ಈಗಲೇ ಉಪದೇಶಿಸುತ್ತಿದ್ದೇನೆ. ಪ್ರತಿಗ್ರಹಿಸು ಎಂದರು ಕೌಶಿಕರು. ಮಾನವಾತೀತ ಅಥವಾ ಮಾನವರಿಗೆ ಹೆಚ್ಚಾದ ಯೋಗ್ಯತೆ ತಂದುಕೊಡುವ ಈ ಮಂತ್ರ ದೇವರಿಗೆ ಮಾತ್ರ ಸರಿಯಾದುದು. ಉಳಿದವರಿಗೆ ಯಾರಿಗೆ ಕೊಟ್ಟರೂ ತಮ್ಮ ಸಹಜತೆಯನ್ನು ಕಳೆದುಕೊಂಡು ಅಲಂಕಾರವನ್ನು ತುಂಬಿಕೊಳ್ಳುತ್ತಾರೆ. ರಾಮನು ಹಾಗಲ್ಲ, ಭಗವಂತನ ಸಾಕ್ಷಾತ್ ಅವತಾರ. ಅವತರಣದ ಉದ್ದೇಶವೇ ಭೂಭಾರಹರಣ-ಸುಮನಸರಿಗೆ ಸುಖಾಹರಣ. ಅವನಿಗಿಂತ ಯೋಗ್ಯರಾದವರು ವಿಶ್ವಾಮಿತ್ರರಿಗೆ ಆ ಯುಗದಲ್ಲಿ ಯಾರೂ ಸಿಗಲಾರರು. ನಮೇ ದ್ವೇಷ್ಯೋಸ್ತಿ ನ ಪ್ರಿಯಃ ಎಂಬಂತೆ ಬದುಕುತ್ತಿರುವ ಮುಂದೆ ಭೂಭಾರ ಇಳಿಸುವ ಮಹತ್ತರವಾದ ಹೊಣೆಗಾರಿಕೆ ಹೊತ್ತಿರುವ ರಾಮನನ್ನು ವಿದ್ಯೆಗಳು ಸೇರಿದವು.‌ಬಲಾ-ಅತಿಬಲಾಗಳು ಅಜ್ಜನ ಬಳಿ ಸೇರಿ ಸುಖಿಸಿದವು. ರಾಮನು ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕಿದವನು. ಈ ವಿದ್ಯೆಗಳ ಪ್ರಭಾವದಿಂದ ಮುಂದೆ ಒಂದಷ್ಟು ಅದ್ಭುತ ಕಾರ್ಯಗಳನ್ನು ನಡೆಸುತ್ತಾನೆ. ರಾಮಾಯಣದಲ್ಲಿ ಬಹುಶಃ ಈ ಪ್ರಸಂಗದ ತನಕ ರಾಮ ದೇವರಾಗಿ ಎಲ್ಲೂ ಅತಿಮಾನುಷ ವ್ಯವಹಾರ ಮಾಡಿಲ್ಲ. ಇದರ ನಂತರ ತಾಟಕೆಯ ಸಂಹಾರವೇ ಮೊದಲಾದ ಲೋಕ ದುಸ್ಸಹ ಕಾರ್ಯವನ್ನೂ ಕ್ಷಣದಲ್ಲಿ ಮಾಡಿಮುಗಿಸುತ್ತಾನೆ. ಇದೇ ಮಂತ್ರದ ಮಹಿಮೆ.ನಿರುಕ್ತವು ವೇದ ಪಾಠ ಹೇಳುವಾಗ *ನಾಸೂಯಕಾಯನೃಜವೇ ಶಠಾಯ* ಎನ್ನುತ್ತದೆ. ಅಸೂಯೆ, ಮೋಸ, ಹಠಮಾರಿತನ, ವಂಚನೆ ಇದ್ದವನಿಗೆ ಯಾವ ಕಾರಣಕ್ಕೂ ವಿದ್ಯೆ ಕೊಡಬೇಡ. ಕೌಟಿಲ್ಯನೂ ಶಸ್ತ್ರ-ಶಾಸ್ತ್ರ ಅಪಾತ್ರನಿಗೆ ಕೊಡಬೇಡ ಎನ್ನುತ್ತಾನೆ. ರಾಮನಂತಹ ಪಾತ್ರ ಲೋಕದಲ್ಲಿ ಸಿಗಲುಂಟೇ! ವಿಶ್ವಾಮಿತ್ರರು ತಮಗೆ ಗೊತ್ತಿದ್ದ ವಿದ್ಯೆಯನ್ನು ಬೋಧಿಸಿ ಕೃತಾರ್ಥರಾದರು._

*कामं बहुगुणाः सर्वे त्वय्येते नात्र संशयः।तपसा संभृते चैते बहुरूपे भविष्यतः।।*

_ಚಂದದ ಮಾತು. ರಾಮ ಈ ವಿದ್ಯೆ ಸಿದ್ಧಿಸಿದ ಮೇಲೆ ಒಲಿಯುವ ಸಾಕಾಣಿಕೆ ಗುಣಗಳು ಈಗಾಗಲೇ ನಿನ್ನಲ್ಲಿವೆ. ವಿದ್ಯೆಯಿಂದ ನೀನು ಹೊಂದಬೇಕಾದುದು ಇದೆಯೋ ಇಲ್ಲವೋ! ಆದರೂ ನಾನು ತಪದ ಪ್ರಭಾವದಿಂದ ಪಡೆದ ಈ ಸಂಪತ್ತನ್ನು ಸತ್ಪಾತ್ರನಿಗೆ ದಾನ ಮಾಡಿದಾಗ ಲೋಕದಲ್ಲಿ ಈ ದಾನ-ಪ್ರತಿಗ್ರಹ ಎರಡೂ ಸಾರ್ಥಕ ಎನಿಸುತ್ತವೆ. ಗುರುಗಳ ಮೊಗದಿಂದ ಪಡೆದ ಉಪದೇಶವು ರಾಮನನ್ನು ಅಭಿರಾಮನಾಗಿಸಿತು. ವಿದ್ಯೆ ಪಡೆದ ಉಪಕಾರಕ್ಕೆ ಪ್ರತಿಯಾಗಿ ವಿಶ್ವಾಮಿತ್ರರ ಸೇವೆಯನ್ನು ಸಾಕಷ್ಟು ಮಾಡಿ *ಗುರುಶುಶ್ರೂಷಯಾ ವಿದ್ಯಾ* ಎಂಬುದನ್ನು ಅಕ್ಷರಶಃ ತೋರಿಸಿಕೊಟ್ಟನು ಆದರ್ಶ ರಾಮನು. ರಾಮನ ಬದುಕೇ ಹಾಗೆ. ಪ್ರತಿಯೊಬ್ಬರಿಗೂ ಪ್ರತೀ ಹಂತದಲ್ಲೂ ಪಾಠ. ಮೀರದಿರಿ ಎಂಬ ಎಚ್ಚರಿಕೆ._ 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩