ಪದಶಕ್ತಿ ೪೭
ಪದಶಕ್ತಿ ೪೭🌄📔🖋️📕
*ಸಮಾನ*
_ಅನ ಎಂಬ ಧಾತುವಿಗೆ ಸಮ್ ಎಂಬ ಉಪಸರ್ಗ ಸೇರಿ ಹುಟ್ಟಿದ ಪದ. ಭಾರತೀಯರೆಲ್ಲರೂ ಸಮಾನರು ಎಂಬ ವಾಕ್ಯ ನೋಡಿದರೆ ಸಾದೃಶ್ಯ ಅಥವಾ ಸಹೋದರರು ಎಂಬ ಒಂದು ಅರ್ಥ ಕಂಡುಬರುತ್ತದೆ.ಮಾನದಲ್ಲಿ ಎಲ್ಲರೂ ಒಂದೇ ಎಂಬ ಅರ್ಥವನ್ನು ತಂದುಕೊಡುತ್ತದೆ._
_ಇನ್ನೊಂದು ಅಪರೂಪದ ಅರ್ಥ ಸರಿಯಾದುದು ಎಂದು. ಮರಾಠಿ ಭಾಷೆಯಲ್ಲಿ ಸಂಸ್ಕೃತದ ಈ ಅರ್ಥ ಸರಾಗವಾಗಿ ಬಳಕೆಯಲ್ಲಿ ಇದೆ. ಸಮಾನ ಆಯ್ತು ಎಂದರೆ ಸರಿಯಾಗಿ,ವ್ಯವಸ್ಥಿತವಾಗಿ ಆಯ್ತು ಎಂದು._
_ಮೂರನೆಯದಾಗಿ ಅಭಿಮಾನದಿಂದ ಕೂಡಿರುವುದು ಎಂಬ ಅರ್ಥವೂ ಇದೆ. ಸ್ಥೈರ್ಯಂ ಸಮಾನಮಹರತ್ ಮಧುಮಾನಿನೀನಾಂ ಎಂಬ ಶ್ಲೋಕದಲ್ಲಿ ಅಭಿಮಾನ ಅಥವಾ ಗರ್ವವನ್ನು ಅಪಹರಿಸಿದ ಉಲ್ಲೇಖ ಇದೆ._
_ನಾಲ್ಕನೆಯದಾಗಿ ಸಮಾನೋ ನಾಭಿದೇಶಗಃ ಎಂಬಂತೆ ಹೊಕ್ಕುಳಿನ ಬಳಿ ವಾಸ ಇರುವ ತಿಂದ ಅನ್ನಾದಿಗಳನ್ನು ಸರಿಯಾಗಿ ಜೀರ್ಣಿಸಲು ಸಹಕಾರಿಯಾದ ವಾಯುವಿನ ಒಂದು ಪ್ರಭೇದ._
_ಐದನೆಯದಾಗಿ ಪ್ರಾಣಾದಿ ವಾಯುವಿನ ಒಂದು ಭೇದ. ಇದನ್ನು ನಾಲ್ಕರಲ್ಲೇ ಸೇರಿಸಬಹುದು ಅಥವಾ ಜಗತ್ತಿಗೆ ಅನ್ವಯಿಸಿದಾಗ ಪ್ರತ್ಯೇಕಿಸಲೂಬಹುದು._
_ಕಡೆಯದಾಗಿ ಸಮಾನ ಅಂದರೆ ಒಟ್ಟಿಗೇ ಅಥವಾ ಒಂದೇ ಎಂಬ ಅರ್ಥವೂ ಇದೆ. ಸಮಾನತಂತ್ರದಲ್ಲಿ ಆಹುತಿ ಕೊಡಬೇಕು ಎಂಬಲ್ಲಿ ಒಂದೇ ನಿಯಮ ಅಥವಾ ಎಲ್ಲರಿಗೂ ಒಟ್ಟಿಗೇ ಕೊಡಬೇಕು ಎಂಬ ಅರ್ಥ ಸಿಗುತ್ತದೆ. ಹೀಗೆ ಅರ್ಥದಲ್ಲಿ ಸಮಾನತೆಯಿಲ್ಲದ ನಮ್ಮ ಸಂವಿಧಾನದ ಸಮಾನತೆಗೆ ಸದೃಶವಾದ ಪದ ಈ ಸಮಾನ._
_ಸಂಸ್ಕೃತ ಸಾಹಿತ್ಯದ ಬಹಳಷ್ಟು ಕಡೆ ಈ ಪದ ಕಂಡುಬರುತ್ತದೆ. भुजे भुजङ्गेन्द्रसमानसारे भूयः स भूमेर्धुरमाससञ्ज ॥ರಘುವಂಶದ ಈ ಶ್ಲೋಕದಲ್ಲಿ ಆ ವಂಶದ ರಾಜನು ತಲೆಯಲ್ಲಿ ನೆಲ ಹೊತ್ತ ಶೇಷನಂತೆ ಈ ನೆಲದ ಆಳ್ವಿಕೆಯ ಭಾರ ಹೊತ್ತರು ಎಂಬ ವರ್ಣನೆ ಇದೆ. ಇಲ್ಲಿ ಸಮಾನ ಶಬ್ದವು ಅದರಂತೆ ಎಂಬ ಸಾದೃಶ್ಯಾರ್ಥದಲ್ಲಿ ಬಳಕೆಯಾಗಿದೆ._
*ರಮಾನುಜನಿದರ ಒಕ್ಕಣೆಮಾಡಿಸಮಾನತೆಯಿಂದ ಹಂಚಿದನುಶ್ರಿಮಣಿಯಲ್ಲಿ ತುಂಬಿದನುಸಮಾನ ವೇದವೆನಿಸಿದನುಹಬ್ಬಿತು ಹರಡಿತುಧರೆಯೆಲ್ಲ* _ನಾರಾಯಣ ಶರ್ಮರ ಈ ಕೀರ್ತನೆಯಲ್ಲಿ ಒಂದೇ ತೆರನಾಗಿ ಎಂಬ ಅರ್ಥದಲ್ಲಿ ಭೇದವಿಲ್ಲದೆ ಅಥವಾ ಪಕ್ಷಪಾತವಿಲ್ಲದೆ ಎಂದು ಬಳಕೆಯಾಗಿದೆ._
ಭಗವಂತನಲ್ಲಿ ಭಕ್ತಿಯು ನಮ್ಮೆಲ್ಲರಲ್ಲೂ ಸಮಾನವಾಗಿರಲೆಂದು ಆಶಿಸೋಣ.
ತಪ್ಪುಗಳಿದ್ದರೆ ತಿದ್ದಿ.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ