ವಿಕ್ರಮೋರ್ವಶೀಯ ೧೦
📔👳♀️💛👩🦱📒 *ವಿಕ್ರಮೋರ್ವಶೀಯ* ಪದ್ಯ-೧೦
*इदमसुलभवस्तु प्रार्थनादुर्निवारं प्रथममपि मनो मे पञ्चबाणा क्षिणोति। किमुत मलयवातोन्मूलितापाण्डुपत्रैः उपवनसहकारैर्दर्शितेष्वङ्कुरेषु।।*
_ಬೇಸರ ಕಳೆಯಲೆಂದು ಉಪವನಕ್ಕೆ ಬಂದರೆ ಇದು ಇನ್ನಷ್ಟು ಬೇಸರ ತಂದರೆ ಹೇಗೆ ಎಂಬುದನ್ನು ಪುರೂರವನ ಮಾತಿನಲ್ಲಿ ಕವಿ ವರ್ಣಿಸುತ್ತಿದ್ದಾನೆ. ಊರ್ವಶಿಯ ಸೌಂದರ್ಯದ ಪರಿಯನ್ನು ಕಂಡ ರಾಜನು ಅವಳಿಲ್ಲದ ಕ್ಷಣ ಕಷ್ಟವೆಂದು ಇತ್ತ ಕಡೆ ಉದ್ಯಾನಕ್ಕೆ ಬಂದಿದ್ದಾನೆ. ಸುಲಭದಲ್ಲಿ ಸಿಗದ ವಸ್ತುವಿನ ಬಯಕೆಯನ್ನು ತಡೆಯಲು ಮೊದಲೇ ಮನವು ಕಷ್ಟಪಡುತ್ತಿದೆ. ಹೂವಿನ ಬಾಣದ ಅನಂಗನು ಹೂವಿನ ಮೃದುತ್ವ ಕೊಡದೆ ಬಾಣದ ಕಾಠಿಣ್ಯದಿಂದ ಕಂಗೆಡಿಸುತ್ತಿದ್ದಾನೆ. ಕಾಮನೆಯು ಮನದಲ್ಲಿ ಅಚ್ಚೊತ್ತಿ ಪೀಡಿಸುತ್ತಿದೆ. ಈ ಉದ್ಯಾನದಲ್ಲಾದರೋ ಮಲಯಮಾರುತದಿಂದ ಮೆಲ್ಲನೆ ಮಾತನಾಡಿಸುತ್ತಿರುವ ಮುಪ್ಪಾದ ಎಲೆಗಳ ಬೀಳುವಿಕೆಯ ಜೊತೆಗೆ ಮಾವಿನ ಮರಗಳ ಅರಳಿದ ಸುಮಗಳ ಚಿತ್ರವು ನನ್ನ ಪ್ರಿಯೆಯ ಜೊತೆಗೆ ವಿಹರಿಸುವ ಇಚ್ಛೆಯನ್ನು ಬಡಿದೆಬ್ಬಿಸಿ ಮನಕೆ ಇನ್ನಷ್ಟು ಪೀಡೆ ಕೊಡುತ್ತಿದೆಯಲ್ಲ! ಚಿತ್ರಕಾವ್ಯದಂತಿದೆ ಕಾಳಿದಾಸನ ಈ ಶ್ಲೋಕ. ನಾಯಕ ವಿರಹ ಕಾತುರನಾಗಿ ಉದ್ಯಾನ ಪ್ರವೇಶಿಸುವ ಆ ಕ್ಷಣದಲ್ಲಿ ಮಂದಮಾರುತ ಮೆಲ್ಲನೆ ಕೆಳಗೆ ಬೀಳುತ್ತಿರುವ ಒಣಗಿದ ಬಿಳಿ ಎಲೆಗಳು ಜೊತೆಗೆ ಹೊಸದಾಗಿ ಅರಳಿದ ಮಾವಿನ ಅಂಕುರಗಳು. ಅನೇಕ ಸಿನೆಮಾಗಳಲ್ಲಿ ಮಾವಿನ ಬದಲು ಬೇರೆ ಹೂವನ್ನು ಬಳಸಿದರೂ ಇಂತಹ ಕವಿಕಲ್ಪನೆ ವಿರಹದ ಪದ್ಯಗಳಿಗೆ ಮೂಡಿಬಂದಿದೆ. ವಸಂತದ ಒಂದೊಂದು ಘಳಿಗೆಯೂ ಪ್ರೇಮದ ಅಮಲನ್ನು ತರಿಸುತ್ತದೆ. ಎಷ್ಟೆಂದರೂ ಅನಂಗನ ಮಿತ್ರನಲ್ಲವೇ ವಸಂತ. ಕವಿ ಪುರೂರವನ ಮನದ ಭಾವವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾನೆ. ದೇವಲೋಕದ ಅಪ್ಸರೆಯಾದ್ದರಿಂದ ಅಸುಲಭ ಲಭ್ಯಳು ಅವಳು. ಇವನಾದರೋ ಮಾನುಷ ರಾಜ._
ಸಂಕಲನ: ಶ್ರೀನಿಧಿ ಅಭ್ಯಂಕರ್. ಪ್ರಮಾದಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ