रರಾಮಾಯಣ ೧೯೬
📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೫🏝📖
*इक्ष्वाकूणां कुले जातः साक्षाद्धर्म इवापरः। धृतिमान् सुव्रतः श्रीमान् न धर्मं हातुमर्हसि।। स्वधर्मं प्रतिपद्यस्व नाधर्मं वोढुमर्हसि।।*
_ಸಜ್ಜನರ ಕೋಪವೆಂದರೆ ಕ್ಷಣ ಹೊತ್ತಾದರೂ ಅದು ಜಗತ್ತಿಗೆ ಮಾರಕ. ಸಹಜವಾಗಿ ಕೋಪಗೊಳ್ಳದ ಅವರು ಅಪರೂಪಕ್ಕೆ ಕೋಪಗೊಂಡರೆ ಅದರ ಪರಿಣಾಮ ಬಹಳ ತಾಪವನ್ನು ತಂದುಕೊಡುತ್ತದೆ. ಜಗದ ಹಿತವನ್ನೇ ಸದಾ ಬಯಸುವ ವಿಶ್ವಾಮಿತ್ರರು ಕೋಪಗೊಂಡುದನ್ನು ಕಂಡ ಇಳೆ ನಡುಗಿತು, ಸುರರು ಬೆದರಿದರು, ಜಗದ ಜೀವಿಗಳು ತತ್ತರಿಸಿದರು. ಒಡನೆಯೇ ಕಾರ್ಯಪ್ರವೃತ್ತರಾದ ತಪನಕುಲಪುರೋಹಿತರಾದ ವಸಿಷ್ಠರು ಈ ಮಾತನ್ನು ನುಡಿಯುತ್ತಾರೆ. ರಾಜನೇ, ನೀನು ಜನಿಸಿದ ಕುಲ ಸಾಮಾನ್ಯವಾದುದಲ್ಲ, ಇಕ್ಷ್ವಾಕು ಅಂತಹ ಶ್ರೇಷ್ಠರ ಕುಲದಲ್ಲಿ ಜನ್ಮ ತಾಳಿರುವೆ.ಇಂದಿನವರೆಗೂ ಸದ್ಧರ್ಮಾಚರಣೆಯಲ್ಲಿ ಧರ್ಮದೇವತೆಗೆ ಸಮಾನನಾಗಿ ಮೆರೆದಿರುವೆ. ದಶರಥನಿಗೆ ಮಗನಾಗಿ ಜನಿಸಬೇಕಾದರೆ ಅವನ ಯೋಗ್ಯತೆ ಎಷ್ಟಿತ್ತೆಂದು ನಾವು ಊಹಿಸಬಹುದು. ಭಗವಂತನ ಯಾವ ರೂಪದಲ್ಲಿ ಕಾಣಿಸಿಕೊಳ್ಳಬೇಕಾದರೂ ನಮ್ಮ ತಪಸ್ಸು ಹೆಚ್ಚಿರಬೇಕು. ಸಕಲ ಸಂಪತ್ತುಗಳೂ ನಿನ್ನನ್ನು ಆಶ್ರಯಿಸಿವೆ. ಮಕ್ಕಳಿಲ್ಲವೆಂಬ ಕೊರಗೂ ನಾಲ್ವರಿಂದ ದೂರವಾಗಿದೆ. ಬದುಕಿನಲ್ಲಿ ಪಡೆದು ತೀರಬೇಕಾದುದು ಇನ್ನೇನೂ ಉಳಿದಿಲ್ಲ. ಸತ್ಯಸಂಕಲ್ಪನೆಂದು ಖ್ಯಾತನಾಗಿರುವೆ. ಇಷ್ಟೆಲ್ಲ ಇದ್ದೂ ಇಂದು ನೀನು ಮಾತು ತಪ್ಪುವ ಅಧರ್ಮಕ್ಕೆ ಗುರಿಯಾಗದಿರು. ದಶರಥ ಧರ್ಮಾತ್ಮನೆಂಬ ನೆಗಳ್ತೆಗೆ ಭಂಗ ತರದಿರು. ಅಧರ್ಮದ ಭಾರವನ್ನು ತಲೆಯ ಮೇಲೆ ಹೊತ್ತು ಪರಿತಪಿಸದಿರು. ಸಣ್ಣದಾಗಲಿ ದೊಡ್ಡದಾಗಲಿ ಅಧರ್ಮದ ಪರಿಣಾಮ ದುಃಖದಾಯಕವೇ ಆಗಿದೆ. ಅಂತಹ ದುಃಖವನ್ನು ನೀನೆ ತಂದುಕೊಳ್ಳಬೇಡ. ದುಃಖ ಸಹಜವಾಗಿ ಒದಗಿದರೆ ಅನುಭವಿಸಬೇಕು. ನಾವಾಗಿ ತಂದುಕೊಳ್ಳುವ ಮೂರ್ಖತನ ಮಾಡಬಾರದು._
*संश्रुत्यैव करिष्यामि इत्यकुर्वाणस्य राघव। इष्टापूर्तवधो भूयात्तस्माद्रामं विसर्जय।।*
_ಅಪ್ಪಾ ದಶರಥ, ಕೊಡುವೆನೆಂದು ಹೇಳಿ ಮುಂದೆ ಕೊಡಲಾರೆ ಎಂದು ಮಾತು ತಪ್ಪಿದರೆ ಅಥವಾ ನಿಮ್ಮ ಕರ್ತವ್ಯ ಮಾಡಿಕೊಡುವೆ ಎಂದು ಪ್ರತಿಜ್ಞೆ ಮಾಡಿ ಮುಂದೆ ಹಿಂಜರಿದರೆ ಅವರಿಗೆ ಇಷ್ಟಾಪೂರ್ತ ಹಾಳುಗೆಡವಿದ ಪಾಪ ಅಡರುವುದು. ಇಷ್ಟವೆಂದರೆ ಶ್ರೌತೋಕ್ತ ಯಜ್ಞಗಳು. ಪೂರ್ತವೆಂದರೆ ಜಲಮೂಲಗಳಾದ ಬಾವಿ ಕೆರೆ ಕಾಲುವೆ ತೋಡಿಸುವುದು,ಸೇತುವೆ ಕಟ್ಟುವುದು,ಅನ್ನದಾನ ಮಾಡುವುದು, ಉದ್ಯಾನ ನಿರ್ಮಿಸುವುದು. ಈ ಎಲ್ಲಾ ಕರ್ಮಗಳಿಂದ ನೀನು ಯಾವ ಪುಣ್ಯವನ್ನು ಸಂಪಾದಿಸಿರುವೆಯೋ ಅವೆಲ್ಲವೂ ಕ್ಷಣದಲ್ಲಿ ನಾಶವಾದೀತು! ಇಂತಹ ಅನರ್ಥಕ್ಕೆ ಗುರಿಯಾಗದೇ ಸಕಲರ ಆರ್ತಿ ಕಳೆವ ರಾಮನನ್ನು ಒಡನೆಯೇ ಮುನಿಗಳ ಜೊತೆಗೆ ಕಳಿಸಿಕೊಡು. ಈವರೆಗೆ ಸಾಕಷ್ಟು ಪ್ರಮಾಣದಲ್ಲಿ ಸಂಪಾದಿಸಿದ ಪುಣ್ಯವನ್ನು ಅತಿಯಾದ ಪುತ್ರಪ್ರೇಮವೊಂದೇ ಕಳೆಯಬಾರದಲ್ಲವೇ! ಹಾಗಾಗಿ ಹೆಚ್ಚು ಯೋಚಿಸದೇ ರಾಮನನ್ನು ಬಿಡು. ನಾವೂ ದಶರಥನಂತೆ ನಮ್ಮ ಮಕ್ಕಳು, ನಮ್ಮ ಮನೆಯವರು, ನಮ್ಮ ಮಡದಿ, ನಮ್ಮ ಮನೆ ಇತ್ಯಾದಿ ಮೋಹಕ್ಕೆ ಒಳಗಾಗಿ ಭಗವಂತನನ್ನು ಮರೆಯುತ್ತಿರುತ್ತೇವೆ. ಆಗೆಲ್ಲಾ ವಸಿಷ್ಠರ ಮಾತು ಅನುಸರಣೀಯ.ಇವೆಲ್ಲವೂ ಭಗವಂತನನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕಿಂತ ಮನದಲ್ಲಿ ಭಜಿಸುವುದು ಮುಕ್ತಿಗೆ ಸಾಧನ. ಮನೆಯಲ್ಲಿ ಎಷ್ಟು ಪೂಜಿಸಿ ಮನದಲ್ಲಿ ಜಗದ ಮೋಹವೇ ತುಂಬಿಕೊಂಡರೆ ಅವನೊಲುಮೆ ಸಿಗುವುದೇ!_
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ