ರಾಮಾಯಣ ೧೯೭
📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೬🏝📖_
*गुप्तं कुशिकपुत्रेण ज्वलनेनामृतं यथा।। एष विग्रहवान्धर्म एष वीर्यवतां वरः। एष बुद्ध्याधिको लोके तपसश्च परायणम्।।*
_ದಶರಥನಿಗೆ ಮನದಟ್ಟು ಮಾಡಿಸುವ ಮಾತುಗಳನ್ನು ವಸಿಷ್ಠರು ಆಡುತ್ತಿದ್ದಾರೆ. ಅಯ್ಯಾ ರಾಜನೇ, ವಿಶ್ವಾಮಿತ್ರರ ರಕ್ಷೆಯಲ್ಲಿ ಹೊರಟ ಇವರನ್ನು ಯಾರೂ ಏನೂ ಮಾಡಲಾರರು, ಸುತ್ತಲೂ ಬೆಂಕಿಯಿರುವಾಗ ಮಧ್ಯದ ಅಮೃತಕ್ಕಾಗಿ ಆಸೆಪಟ್ಟರೆ ಹೇಗೆ ಸುಟ್ಟು ಬೂದಿಯಾಗುವರೋ ಈ ಮಹರ್ಷಿಯೆಂಬ ಬೆಂಕಿಯಿರುವಾಗ ಯಾರೂ ಬಾಲರನ್ನು ಮುಟ್ಟಲಾರರು. ಇವನೇನು ಸಾಮಾನ್ಯನನಲ್ಲ ಧರ್ಮದ ಸಾಕಾರಮೂರ್ತಿ, ಪರಾಕ್ರಮ ದಲ್ಲಿ ಅಸದೃಶ, ಬುದ್ಧಿವಂತಿಕೆಯಲ್ಲೂ ಇವನ ಸಮೀಪ ಯಾರೂ ಬರಲಾರರು, ಈ ಮೂರಕ್ಕೂ ತಿಲಕವಿಟ್ಟಂತೆ ತಪಸ್ಸು ಇವನಲ್ಲಿ ಮಡುಗಟ್ಟಿದೆ. ಇವನಿಗೆ ತಿಳಿಯದ ಅಸ್ತ್ರಗಳಿಲ್ಲ, ಉಳಿದವರಿಗೆ ತಿಳಿಯದ ಅಸ್ತ್ರಗಳೂ ಇವನಿಗೆ ತಿಳಿದಿವೆ, ದೇವ-ಗಂಧರ್ವ-ಋಷಿ-ಅಸುರ-ರಾಕ್ಷಸ-ಉರಗ-ಕಿನ್ನರ ಇವರಾರೂ ಅಸ್ತ್ರವಿದ್ಯೆಯಲ್ಲಿ ಇವನಿಗೆ ಸಮರಲ್ಲ. ಇಲ್ಲಿ ವಸಿಷ್ಠರ ಹೃದಯ ವೈಶಾಲ್ಯವನ್ನೂ ವಿಶ್ವಾಮಿತ್ರರ ಮೇರು ವ್ಯಕ್ತಿತ್ವವನ್ನೂ ಎರಡನ್ನೂ ನಾವು ಗಮನಿಸಬಹುದು. ವಾಲ್ಮೀಕಿಗಳು ಮುಂದೆ ರಾಮನಿಗೆ ಈ ವಿಶೇಷಣ ಬಳಸಿದ್ದಾರೆ *ರಾಮೋ ವಿಗ್ರಹವಾನ್ಧರ್ಮ* ಎಂದು. ಇಲ್ಲಿ ವಸಿಷ್ಠರ ಬಾಯಲ್ಲಿ ವಿಶ್ವಾಮಿತ್ರರ ಧರ್ಮನಿಷ್ಠೆಯನ್ನು ಲೋಕಕ್ಕೆ ಸಾರಿದ್ದಾರೆ. ತನ್ನೊಂದಿಗೆ ಒಂದು ಕಾಲದಲ್ಲಿ ಸ್ಪರ್ಧೆಗಿಳಿದ ತರುಣನನ್ನು ತನಗಿಂತಲೂ ಮಿಗಿಲೆಂಬಂತೆ ಮನದುಂಬಿ ಪ್ರಶಂಸೆ ಮಾಡುವ ಉದಾರತೆ ನಮಗೆ ಬಂದೀತೆ! ವಸಿಷ್ಠರು ಒಂದಲ್ಲ ಎರಡಲ್ಲ ಹತ್ತಾರು ಮಾತುಗಳಲ್ಲಿ ಕೌಶಿಕನ ಮಹತ್ವ ಸಾರುತ್ತಾರೆ. ತಪಸ್ಸು ಇವನಲ್ಲಿದೆ, ಪರಾಕ್ರಮ ಇವನಲ್ಲಿದೆ, ಧರ್ಮವೂ ಇವನಲ್ಲಿದೆ, ಅಸ್ತ್ರ ಜ್ಞಾನವೂ ಇವನಲ್ಲಿದೆ ಅಂದ ಮೇಲೆ ಇವನನ್ನು ಎದುರಿಸುವ ಗಂಡೆದೆ ಯಾರಿಗಿದೆ? ಲೋಕದಲ್ಲಿ ಅಸ್ತ್ರ ಪ್ರಯೋಗಿಸುವ ಯಾರ್ಯಾರು ಈಗ ಇರುವರೋ ಅವರೆಲ್ಲರಿಗಿಂತಲೂ ಮೇಲು ಇವನ ಅಸ್ತ್ರಜ್ಞಾನ.ಅಂತಹ ಬ್ರಹ್ಮರ್ಷಿಯ ಜೊತೆಗೆ ಕಳಿಸಿದ ಮೇಲೆ ಹೆದರಿಕೆಯ ಮಾತೇಕೆ? ಅಯ್ಯಾ ಬೆದರದಿರು, ಮೋಹದಲ್ಲಿ ಮುಳುಗದಿರು, ಒಡನೆಯೇ ಬಿಡು ಮಕ್ಕಳ ಅವನೊಡನೆ._
_ಇಲ್ಲಿ ವಸಿಷ್ಠರು ಒಂದು ಸಣ್ಣ ಕಥೆಯನ್ನೂ ಹೇಳುವರು. ಹಿಂದೆ ಕೃಶಾಶ್ವ ಎಂಬ ಮಹರ್ಷಿ ಪ್ರಾಚೇತಸ ದಕ್ಷನ ೬೦ ಜನ ಮಕ್ಕಳಲ್ಲಿ ಅರ್ಚಿ- ಧಿಷಣಾ ಜಯಾ ಸುಪ್ರಭಾ ಮೊದಲಾದವರನ್ನು ವರಿಸಿದ್ದನು. ಅದಲ್ಲದೆ ಇನ್ನಿಬ್ಬರು ಮಡದಿಯರಾದ ಜಯೆಯಲ್ಲಿ ಐವತ್ತು ಮಂದಿ ಪುತ್ರರೂ, ಇನ್ನೊಬ್ಬ ಮಗಳಾದ ಸುಪ್ರಭೆಯಲ್ಲಿ ಐವತ್ತು ಮಂದಿ ಪುತ್ರರನ್ನೂ ಹಡೆದರು. ತನ್ನ ಮಕ್ಕಳು ಅಸ್ತ್ರ ರೂಪದಲ್ಲಿ ಇರುವುದನ್ನು ಕಂಡ ಕೃಶಾಶ್ವ ಇವರನ್ನು ಶಿಷ್ಯನಾದ ವಿಶ್ವಾಮಿತ್ರನಿಗೆ ಬಳುವಳಿಯಾಗಿ ಕೊಟ್ಟ.ಸುಪ್ರಭೆಯ ಮಕ್ಕಳಾದ ಸಂಹಾರಾಸ್ತ್ರಗಳು ಇವನಲ್ಲಿ ಇದೆಯೆಂದು ಗೊತ್ತಾಗುತ್ತಿದ್ದಂತೆ ಶತ್ರುಗಳು ದೂರ ಓಡುತ್ತಿದ್ದರು. ಈ ಅಸ್ತ್ರಗಳ ಜ್ಞಾನ ಪ್ರಯೋಗ ವಿಶ್ವಾಮಿತ್ರನಿಗೆ ಮಾತ್ರ ಗೊತ್ತಿರುವಂತಹದು. ಹಿಂದೆ ಆಗಿದ್ದು ಮುಂದೆ ಆಗುವಂತಹದು ಎಲ್ಲವೂ ಇವನಿಗೆ ತಿಳಿದಿದೆ. ತ್ರಿಕಾಲ ಜ್ಞಾನಿಯಾದ ಇವನು ಕ್ಷಣದಲ್ಲಿ ರಾಕ್ಷಸರನ್ನು ಭಸ್ಮ ಮಾಡಬಲ್ಲನಾದರೂ *ಬಾಲರಾಮನ* ಕೀರ್ತಿ ಲೋಕದಲ್ಲಿ ಹರಡಬೇಕು, ಮಕ್ಕಳಿಗೆ ಹಿತವಾಗಬೇಕೆಂಬ ಏಕೈಕ ಉದ್ದೇಶದಿಂದ ನಿನ್ನ ಬಳಿ ಬಂದಿರುವನು ಎಂದಾಗ ಪ್ರಸನ್ನನಾದ ದಶರಥನು ಕಳಿಸಲು ಒಪ್ಪಿದನು. ವಿಶ್ವಾಮಿತ್ರರ ಇಂತಹ ಅಲೌಕಿಕ ಸಾಮರ್ಥ್ಯವನ್ನೇ ತಡೆಗಟ್ಟಿದ ವಸಿಷ್ಠರ ತಪಶ್ಶಕ್ತಿ ಎಂತಹದಿರಬೇಕು! ಕಲ್ಪನೆಗೂ ನಮಗೆ ನಿಲುಕದು. ಲವ-ಕುಶರು ರಾಮಾಯಣವನ್ನು ಈ ಪ್ರಸಂಗದವರೆಗೆ ಮೊದಲ ದಿನ ಹಾಡಿದರೆಂಬ ಪ್ರತೀತಿ ಇದೆ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ