ರಾಮಾಯಣ ೨೦೧

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೯🏝📖.

*दशरथनृपसूनुसत्तमाभ्यां तृणशयनेनुचिते सहोषिताभ्याम् । कुशिकसुतवचोनुलालिताभ्यां सुखमिव सा विबभौ विभावरी च ।।*

_ಮಹರ್ಷಿಗಳ ಉಪದೇಶದ ನಂತರ ಆ ರಾತ್ರಿ ದಶರಥನ ಮಕ್ಕಳೀರ್ವರು ಸರಯೂ ನದಿಯ ತೀರದಲ್ಲಿ ಕಳೆದರು. ದಿನವೂ ಹಂಸತೂಲಿಕಾತಲ್ಪದಲ್ಲಿ ಮಾತೆಯರ ಲಾಲಿ ಹಾಡಿನೊಂದಿಗೆ, ವಂದಿಮಾಗಧರ ಸ್ವಸ್ತಿ ವಾಚನದಿಂದ ನಿದ್ರೆಗೆ ಜಾರುತ್ತಿದ್ದ ಆ ಸಣ್ಣ ಮಕ್ಕಳು ಅಂದು ರಾತ್ರಿ ದರ್ಭೆಯನ್ನೇ ನೆಲಕ್ಕೆ ಹಾಸಿ ವಿಶ್ವಾಮಿತ್ರರ ಮಾತನ್ನೇ ಲಾಲಿಹಾಡಾಗಿಸಿ ಸುಖದಿಂದ ಕಳೆದರು. ತಂದೆ ಮತ್ತು ಗುರುಗಳ ಆಜ್ಞೆಯಂತೆ ಕಾಡಿಗೆ ಬಂದಾಗಿದೆ. ಬಂದ ಮೇಲೆ ಗುರುಗಳು ಹೇಗಿರುವರೋ ನಾವೂ ಅದರಂತೆಯೇ ವ್ಯವಹರಿಸುವುದು. ಶಿಷ್ಯರು ಗುರುಗಳ ಬಳಿ ಹೇಗಿರಬೇಕು ಎಂದು ರಾಮನು ತಾನು ಇದ್ದು ತೋರಿಸಿಕೊಟ್ಟ ಪ್ರಸಂಗ. ರಾಜಕುಮಾರನಾದರೇನು ಯಾರಾದರೇನು ಯಾವ ಸೌಲಭ್ಯ ಇಂದು ಒದಗಿದೆಯೋ ಅದರಲ್ಲೇ ತೃಪ್ತಿ ಕಾಣುವ ಉದಾರತೆ, ಹೋದಲ್ಲೆಲ್ಲಾ ಅದು ಬೇಕು ಇದು ಬೇಕೆಂಬ ಇಚ್ಛೆಯಿಂದ ವ್ಯವಹರಿಸುವ ನಮಗೆಲ್ಲ ಪಾಠ ರಾಮನ ತೃಪ್ತಿಯುತ ನಡೆ. ಸಣ್ಣ ವಯಸ್ಸಿನಲ್ಲಿ ಕಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಒದಗಿದರೆ ಮುಂದೆಂದೂ ಕಷ್ಟಕ್ಕೆ ಕೊರಗುವ ಹೆದರುವ ಪರಿಸ್ಥಿತಿ ಬರದು. ಈಗಿನ ಕಾಲದ ಮಕ್ಕಳಿಗೆ ಆ ಕೆಲಸ ಮಾಡಬೇಡ, ಇಲ್ಲಿಗೆ ಹೋಗಬೇಡ, ಸಂಧ್ಯಾ- ಪೂಜಾ- ಭಜನೆ ದೊಡ್ಡವನಾದ/ ಳಾದ ಮೇಲೆ ಮಾಡುವಿರಂತೆ ಇತ್ಯಾದಿ ಸದಾ ಮಕ್ಕಳಾದ ಮುದ್ದಿನಲ್ಲಿ ಬೆಳೆಸಿ ಮುಂದೆ ಯಾವ ಮದ್ದಿಗೂ ಅವರ ನಡತೆ ಸುಧಾರಿಸದ ಪರಿಸ್ಥಿತಿ ಒದಗುತ್ತದೆ. ಸಣ್ಣದರಲ್ಲಿ ನೆಲವೋ ಚಾಪೆಯೋ ಸಿಕ್ಕಿದರಲ್ಲಿ ಮಲಗಿ ನಿದ್ರೆ, ಹಸಿವಾದಾಗ ಸಾತ್ವಿಕ ಆಹಾರ, ಎಲ್ಲಿ ಹೋದರೂ ಯಾವ ಕಾರಣಕ್ಕೆ ಬಂದೆವೆಂಬ ಅರಿವನ್ನು ಮೂಡಿಸುತ್ತಿದ್ದರೆ ಮುಂದೆ ಅದೇ ಅಭ್ಯಾಸವಾಗುತ್ತದೆ. ಈಗ ಮಾಡುವ ಮುದ್ದು ಮುಂದೆ ಅವರನ್ನು ಮಬ್ಬಾಗಿಸುತ್ತದೆ. ರಾಮನು ರಾಜನಾದರೂ ಹಾಸಿಗೆಯ ಮೇಲೆ ಮಗಲಿದ ಕಾಲ ಅತ್ಯಲ್ಪ. ವಿಶ್ವಾಮಿತ್ರರ ಜೊತೆ ಕಾಡಿನಲ್ಲಿ, ಮುಂದೆ ಲಕ್ಷ್ಮಣಾದಿಗಳ ಜೊತೆ ಮತ್ತೆ ವನಗಮನ, ಅನಂತರ ಸೀತೆಯ ವಿರಹದ ಸಮಯದಲ್ಲಿ ಮತ್ತೆ ಅರಮನೆಯಲ್ಲಿ ಚಾಪೆಯ ಮೇಲೆ ಮಲಗಿಯೇ ಕಳೆದದ್ದು. ಸುಖ ಅನ್ನುವುದು ಸಾಧನಗಳನ್ನು ಅವಲಂಬಿಸಿದೆ ಎನ್ನುವುದು ನಮ್ಮ ಭ್ರಮೆ. ಮನದ ಸಂತೋಷವೇ ಸಮಚಿತ್ತತೆಯೇ ಸದಾ ಸುಖ ಸಾಧನ._

*कौसल्यासुप्रजा राम सन्ध्या पूर्वा प्रवर्तते। उत्तिष्ठ नरशार्दूल कर्तव्यं दैवमाह्निकम् ।।*

 _ಮಹರ್ಷಿಗಳ ಮಾತು ಮಧುರವಾಗಿ ಮೂಡಿಬರುತ್ತಿದೆ. ಅಪ್ಪಾ ಶ್ರೀ ರಾಮ, ನಿನ್ನಿಂದ ಕೌಸಲ್ಯೆಯು ಸುಪುತ್ರವತಿಯಾದಳು, ಮೂಡಣದಿ ನೇಸರ ಉದಯಿಸುತ್ತಿರುವನು, ದೇವತೆಗಳ ಪ್ರೀತಿಗಾಗಿ ನಿತ್ಯಕರ್ಮಗಳಲ್ಲಿ ತೊಡಗಬೇಕಾಗಿದೆ, ಮನುಜೋತ್ತಮನೇ ಏಳು! ಎಂತಹ ಮಧುರವಾಣಿ‌. ಮೊದಲಿಗೆ ತಾಯಿಯ ಸ್ಮರಣೆ ಮಾಡಿಸುವುದು‌. ಮಾತೃದೇವೋ ಭವ ಎಂಬ ವಾಕ್ಯದ ಎಚ್ಚರಿಕೆ. ಆಜ್ಞಾಪಾಲಕರಾದ ಲೋಕರಂಜಕರಾದ ಮಕ್ಕಳು ಹುಟ್ಟಿದರೆ ತಾಯಿಯ ಸಂತೋಷ ಹೇಳತೀರದು. ರಾಮನಂತಹ ಮಗನನ್ನು ಹಡೆದ ಆ ತಾಯಿ ಕೌಸಲ್ಯೆ ಸುಪುತ್ರವತಿ ಎನಿಸಿದಳು. ಪುತ್ರನನ್ನೋ ಪುತ್ರಿಯನ್ನೋ ಹಡೆಯುವುದು ದೊಡ್ಡದಲ್ಲ. ಅವರಿಗೆ ಉತ್ತಮ ಸಂಸ್ಕಾರ ಕೊಡಿಸಿ ಸಮಾಜಕ್ಕೆ ಉಪಕಾರಿ ಎನಿಸುವಂತೆ ಬೆಳೆಸುವುದು ದೊಡ್ಡ ವಿಷಯ. ಸಣ್ಣ ಮಕ್ಕಳಾದರೂ ಋಷಿಗಳಿಂದ  ಕಲಿತು ಲೋಕರಂಜಕರಾಗುವರೆಂಬ ನಂಬಿಕೆಯಿಂದ ಕೌಸಲ್ಯೆ ಕಳಿಸಿಕೊಟ್ಟಿದ್ದಾಳೆ. ಸೂರ್ಯನು ಮೂಡುವ ಮುಂಚೆ ನಾವೂ ಲೋಕವ್ಯವಹಾರಕ್ಕೆ ಸಿದ್ಧರಾಗಬೇಕು. ಏಕೆಂದರೆ ಸೂರ್ಯನ ಅಸ್ತಿತ್ವದ ಸಮಯದಲ್ಲೇ ಹೆಚ್ಚಿನ ಶಕ್ತಿಯ ಪ್ರವಾಹ, ದೇಹಕ್ಕೂ ಮನಕ್ಕೂ ಹಿತಕರ. ಸಂಧ್ಯೆಯ ಸಮಯದಲ್ಲೂ ಮಲಗಿದ ಕಯಾದುವಿಗೆ ಹಿರಣ್ಯಕಶಿಪು ಎಂಬ ದುಷ್ಟ ಜನಿಸಿದ.‌ ಹಾಗಾಗಿ ಸಂಧ್ಯಾ ಸಮಯದಲ್ಲಿ ಆಹಾರ-ನಿದ್ರೆ- ಪಾನ- ಮೈಥುನ ಇವೆಲ್ಲವೂ ನಿಷಿದ್ಧ. ಅದೇನಿದ್ದರೂ ನಮ್ಮನ್ನು ನಾವು ಒಳ-ಹೊರ ಶುಚಿಯಾಗಿಸಿಕೊಳ್ಳಲು ತನ್ಮೂಲಕ ದಿನವಿಡೀ ಉಲ್ಲಾಸದಿಂದಿರಲು ಇರುವ ಅಮೂಲ್ಯ ಸಮಯ. ದೇವತೆಗಳು ರಾತ್ರಿ ಸುಖ ನಿದ್ರೆಗೆ ಅನುವು ಮಾಡಿಕೊಟ್ಟಿದ್ದಾರೆ. ದಿನವಿಡೀ ಉಳಿದ ಕಾರ್ಯ ಮಾಡಲು ಅನುವು ಮಾಡಿಕೊಡಲೆಂದು ಪ್ರಾರ್ಥಿಸುವುದು. ಮನುಷ್ಯ ಜನ್ಮ, ದಶೇಂದ್ರಿಯಗಳು, ಶಕ್ತಿ - ಸಂಪತ್ತು ಎಲ್ಲಾ ಕರುಣಿಸಿದ ಆ ದೇವನಿಗೆ ಕೃತಜ್ಞತೆ ಹೇಳುವ ಸಮಯ ಈ ಸಂಧ್ಯೆ. ವಿಶ್ವಾಮಿತ್ರರು ರಾಮನಿಗೆ ಮಾತ್ರ ಹೇಳಿದ್ದಲ್ಲ ಈ ಮಾತು ಇಡೀ ಜಗತ್ತಿಗೇ ಉಪದೇಶಿಸಿದ್ದು‌._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩