ರಾಮಾಯಣ ೨೦೦

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೨೦೦🏝📖

*स्नात्वा कृतोदकौ वीरौ जेपतुः परमं जपम्।। कृताह्निकौ महावीर्यौ विश्वामित्रं तपोधनम्। अभिवाद्याभिसंहृष्टौ गमनायाभितस्थतुः।।*

_ಇಬ್ಬರೂ ವೀರರೂ ಸ್ನಾನಾದಿಗಳನ್ನು ಮುಗಿಸಿ ಸೂರ್ಯನಿಗೆ ಅರ್ಘ್ಯ ನೀಡಿ ಪರಮಪವಿತ್ರ ಎನಿಸಿದ ಗಾಯತ್ರೀ ಮಂತ್ರವನ್ನು ಜಪಿಸಿದರು. ಮುಂಜಾನೆ ಎದ್ದು ಸ್ನಾನ ಮಾಡಿ ತಿಂಡಿ ತಿನ್ನುವುದೋ ಮೊಬೈಲ್ ನೋಡುವುದೋ ಸಿದ್ಧರಾಗಿ ಕಾರ್ಯಾಲಯಕ್ಕೆ ಹೋಗುವುದೋ ಅಲ್ಲ. ಜಪ- ತಪ ಬ್ರಾಹ್ಮಣರಿಗೆ ಮಾತ್ರ ಮೀಸಲಾದುದೂ ಅಲ್ಲ. ಆಯಾ ವರ್ಣದವರಿಗೆ ಉಕ್ತವಾದ ಅನುಷ್ಠಾನ ಮಾಡಲೇಬೇಕು. ಮಂತ್ರಪೂರ್ವಕವಾಗಿ ಅಥವಾ ಸ್ಮರಣೆ ಮಾಡಿಯಾದರೂ ಸೂರ್ಯನಾರಾಯಣನಿಗೆ ಅರ್ಘ್ಯ ಕೊಡುವುದು ಎಲ್ಲರ ಆದ್ಯ ಕರ್ತವ್ಯ. ಜಗತ್ತಿಗೆ ಬೆಳಕನ್ನು ನೀಡಿ ಜನರ ಜೀವನವನ್ನು ಸದಾಕಾಲ ಮುನ್ನಡೆಸುವ ಆ ಶಕ್ತಿಗೆ ಕೃತಜ್ಞತೆ ಎಂದಾದರೂ ಮೂರು ಬೊಗಸೆ ನೀರು ನೀಡಲು ಅಸಮರ್ಥರಾದರೆ ನಾವು ಈ ಭೂಮಿಯಲ್ಲಿ ಅವನ ಬೆಳಕನ್ನು ಉಪಯೋಗಿಸಲು ಹೇಗೆ ಮನಸ್ಸು ಮಾಡುವೆವು! ನಾವು ಏಳದಿದ್ದರೂ ತಾನು ಎದ್ದು ನಮ್ಮನ್ನು ನಿತ್ಯವೂ ಮುನ್ನಡೆಸುವ ಆ ಶಕ್ತಿಯನ್ನು ನೆನೆವುದೇ ಗಾಯತ್ರೀ ಜಪ. ಗಾಯಂತಂ ತ್ರಾಯತೇ ಎಂಬಂತೆ ಸ್ಮರಿಸುವರನ್ನು ರಕ್ಷಿಸುವ ಮಹಿಮೆಯುಳ್ಳ ಆ ಮಂತ್ರವನ್ನು ಹತ್ತು ಬಾರಿಯಾದರೂ ಉಪದೇಶ ಪಡೆದು ಪಠಿಸದಿರೆ ಮನದ ಕಲ್ಮಶ ಹೇಗೆ ದೂರವಾದೀತು! ಬುದ್ಧಿಯನ್ನು ಸದಾ ಸನ್ಮಾರ್ಗದತ್ತ ಪ್ರಚೋದಿಸು ಎಂಬ ಮಹೋನ್ನತ ಪ್ರಾರ್ಥನೆಯ ಎದುರು ಬೇರಾವ ಮಂತ್ರವೂ ಸ್ತ್ರೋತ್ರವೂ ಯೋಗವೂ ಸಾಟಿಯಾಗದು. ರಾಮ- ಲಕ್ಷ್ಮಣರು ಅದನ್ನೇ ತಮ್ಮ ಆಚರಣೆಯಿಂದ ಸಾರಿದ್ದು. ಆಹ್ನಿಕ ಎಂದರೆ ದಿನದಲ್ಲಿ ಮಾಡಬೇಕಾದ ಕರ್ತವ್ಯ. ಊಟ- ನಿದ್ರೆ ಇತ್ಯಾದಿ ಕರ್ತವ್ಯ ಅಲ್ಲ. ಅದನ್ನು ಬಿಡದ ನಾವು ಅವಶ್ಯ ಮಾಡಬೇಕಾದ ಕರ್ತವ್ಯ ಮರೆತು ಹೋಮ- ಪೂಜೆ-ನಮಸ್ಕಾರ- ದಾನ ಏನು ಮಾಡಿದರೇನು ಫಲ! ಆಹ್ನಿಕ ಮುಗಿಸಿ ವಿಶ್ವಾಮಿತ್ರರೆಂಬ ತಪೋಧನರ ಕಾಲಿಗೆ ಬಿದ್ದು ಗೋತ್ರ ಪ್ರವರ ಹೇಳಿ ನಮಸ್ಕರಿಸಿದರು. ತಾವು ಶ್ರೇಷ್ಠ ವಂಶದಲ್ಲಿ ರಾಜಕುಮಾರರಾಗಿ ಜನಿಸಿದ್ದರೂ ವಿಶ್ವಾಮಿತ್ರರ ಸಾಧನೆಯ ಎದುರು ಇನ್ನೂ ಸಣ್ಣವರು. ಭಗವಂತನ ಅವತಾರವೇ ಆದರೂ ಮಾನವರಾಗಿ ದೇವರೆತ್ತರಕ್ಕೆ ಬೆಳೆದವರನ್ನು ಗೌರವಿಸಲು ಯಾವ ಸಂಕೋಚವೂ ಸಲ್ಲದು. ದೇವತ್ವ ಎಂದರೆ ವಿಶ್ವಾಮಿತ್ರರಂತೆ ಸಾಧನೆ ತೋರಿ ಸಮಾಜವನ್ನು ಮುನ್ನಡೆಸುವುದೇ ಹೊರತು ನಾನೇ ದೇವರೆಂದು ಪೂಜೆ-ಪುನಸ್ಕಾರ ಸ್ವೀಕರಿಸಿ ಪಲ್ಲಕ್ಕಿ ಮೇಲೆ ಕುಳಿತು ತಿರುಗುವುದಲ್ಲ. ಅಂತಹ ಮಹಿಮರನ್ನು ನಮಸ್ಕರಿಸಿದರೆ ನಮ್ಮೆಲ್ಲಾ ಪಾಪವು ದೂರವಾಗುವುದು. ಮಹರ್ಷಿಗಳಿಗೆ- ಮುನಿಗಳಿಗೆ- ಸಾಧು- ಸಂತರಿಗೆ ನಮಸ್ಕರಿಸಿದರೆ ತಿಳಿದೋ ತಿಳಿಯದೆಯೋ ಮಾಡಿದ ಅಪರಾಧ ದೂರವಾಗುವುದು. ತಗ್ಗಿದರೆ ಅಹಂಕಾರ ತೊಲಗಿ ವ್ಯಕ್ತಿಯೊಳಗಿನ ಶಕ್ತಿಯ ಆಶೀರ್ವಾದ ದೊರಕುವುದು. ನಮಸ್ಕರಿಸುವುದು ಆಯಾ ವ್ಯಕ್ತಿಗೆ ಅಥವಾ ದೇಹಕ್ಕಲ್ಲ ಒಳಗಿನ ಭಗವಂತನಿಗೆ. ಮುಂದಿನ ಪ್ರಯಾಣಕ್ಕೆ ಸಿದ್ಧರಾಗಿ ನಿಂತರು ಕುಮಾರರು._

*कस्यायमाश्रमः पुण्यः कोन्वस्मिन् वसते पुमान् । भगवन् श्रोतुमिच्छावः परं कौतूहलं हि नौ।।*

_ಮುಂದುವರೆಯುತ್ತಾ ಗಂಗಾ- ಸರಯೂ ನದಿಗಳ ಸಂಗಮವನ್ನು ತಲುಪಿದರು. ಅನೇಕ ಋಷಿ ಮುನಿಗಳ ತಪೋಭೂಮಿಯಾಗಿದ್ದ ಆ ಪ್ರದೇಶವನ್ನು ಕಂಡು ರಾಮಲಕ್ಷ್ಮಣರು ಕೇಳಿದರು- ಗುರುಗಳೇ, ಯಾರ ಆಶ್ರಮವಿದು? ಯಾವ ಪುಣ್ಯಾತ್ಮರು ಇಲ್ಲಿ ನೆಲೆಸಿಹರು? ನಮಗೆ ಕೇಳುವ ಕುತೂಹಲ ಉಂಟಾಗಿದೆ. ಯಾವುದಾದರೂ ತೀರ್ಥಕ್ಕೊ,ಕ್ಷೇತ್ರಕ್ಕೊ, ದೇವಾಲಯಕ್ಕೊ ಹೊರಟಾಗ ಅಥವಾ ಅಲ್ಲಿ ತಲುಪಿದಾಗ ಇಲ್ಲಿ ಯಾವ ಹೋಟೆಲ್ ಚೆನ್ನಾಗಿದೆ? ಊಟ ತಿಂಡಿ ವ್ಯವಸ್ಥೆ ಹೇಗಿದೆ? ದರ್ಶನ ಬೇಗ ಆಗುವುದೇ? ಯಾವ ಸೇವೆ ಕಡಿಮೆಯಲ್ಲಿ ಮುಗಿವುದು? ಇತ್ಯಾದಿ ವಿಚಾರಿಸುವುದಲ್ಲ. ಈ ಕ್ಷೇತ್ರದ ವಿಶೇಷತೆ ಏನು ಇತ್ಯಾದಿ ರಾಮ ಕೇಳಿದಂತೆ ಕೇಳಿ ತಿಳಿದುಕೊಂಡು ಕ್ಷೇತ್ರವನ್ನು ಸಂದರ್ಶಿಸಬೇಕೆ ಹೊರತು ಯಾವುದೋ ಪ್ರವಾಸಿ ತಾಣಕ್ಕೆ ಹೋದಂತಲ್ಲ‌. ಅಶನ- ವಾಸ- ಸ್ನಾನಾದಿ ವ್ಯವಸ್ಥೆ ಹೇಗೆ ಇರಲಿ ಕ್ಷೇತ್ರದ ಮಹತ್ವ ಅರಿತು ವ್ಯವಹರಿಸಬೇಕೆ ಹೊರತು ಅಲ್ಲಿ ಅದಿರಲಿಲ್ಲ ಇಲ್ಲಿ ಸರಿಯಿತ್ತು ಇತ್ಯಾದಿ ಟೀಕೆ ಟಿಪ್ಪಣಿ ಮಾಡುವುದಲ್ಲ. ಆಗ ಮಾತ್ರ ಆಯಾ ಪ್ರದೇಶದ ಸಂದರ್ಶನ ಸಾರ್ಥಕವಾಗುತ್ತದೆ._


ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩