ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*मधुरैरवशानि लम्भयन्नपि तिर्यञ्चि शमं निरीक्षितै: । परित: पटु बिभ्रदेनसां दहनं धाम विलोकनक्षमम् ।।*

_ದ್ವೈತವನದಲ್ಲಿ ಯುಧಿಷ್ಠಿರಾದಿಗಳು ನೆಲೆಸಿದ್ದಾಗ ವ್ಯಾಸರು ಅಲ್ಲಿಗೆ ಬರುತ್ತಾರೆ. ಆ ವ್ಯಾಸರ ಬರುವಿಕೆಯನ್ನು ಕವಿ ವರ್ಣಿಸುತ್ತಿದ್ದಾನೆ. ವ್ಯಾಸರ ನೋಟ ಅದು ಸಹಜವಾಗಿ ಶಾಂತ ಹಾಗೂ ಪ್ರೇಮಪೂರ್ಣ.ಅವರ ಅಂತಹ ನೋಟವು ಪ್ರಾಣಿಗಳ ಸ್ವಭಾವವನ್ನೇ ಬದಲಾಯಿಸಿದೆ. ಪಶು-ಪಕ್ಷಿಗಳು ಸ್ವಭಾವತಃ ಚಂಚಲ.ನರರನ್ನು ಕಂಡೊಡನೆ ಬೇಟೆಗಾರನೆಂಬ ಭಯದಿಂದ ಪಲಾಯನಗೈಯುತ್ತವೆ. ಅದರಲ್ಲೂ ಹೊಸ ವ್ಯಕ್ತಿಗಳು ತಮ್ಮ ವರ್ತುಲದೊಳಗೆ ಪ್ರವೇಶಿಸಿದಾಗ ಭಿನ್ನ ರೀತಿಯಲ್ಲಿ ಪ್ರತಿಕ್ರಯಿಸುತ್ತವೆ. ಆದರೆ ವ್ಯಾಸರ ಪ್ರೀತಿಯ ನೋಟವು ಅವುಗಳ ಗಾಬರಿಯನ್ನೆಲ್ಲ ದೂರ ಮಾಡಿತು. ಅಷ್ಟೇ ಅಲ್ಲ ಸ್ವಾಭಾವಿಕವಾಗಿ ವೈರ ಹೊಂದಿದ್ದ ಪಶು ಪಕ್ಷಿಗಳು ತಮ್ಮ ವೈರ ಮರೆತು ಒಟ್ಟಿಗೆ ಉಳಿದವು. ಅಂತಹ ಪರಮ ಪ್ರಕಾಶಕವಾದ ಪಾಪ ಪರಿಹರಿಸುವ ತೇಜಸ್ಸಿನ ಪುಂಜವನ್ನು ಹೊತ್ತುಕೊಂಡು ವ್ಯಾಸರು ಅಲ್ಲಿಗೆ ಆಗಮಿಸಿದರು.ವ್ಯಾಸರ ದೃಷ್ಟಿಯೇ ಪಾಪ ಪರಿಹರಿಸುವಂತಹದು. ಯಾವ ಮಾತೂ ಆಡದೇ ಪ್ರೀತಿಯ ಒಂದು ನೋಟ ಬೀರಿದರೆ ಜನ್ಮಜನ್ಮಾಂತರಗಳ ಪಾಪ ಪರಿಹಾರವಾಗುತ್ತದೆ. ಅಷ್ಟಲ್ಲದೇ ಬಣ್ಣ ಪೂರ್ತಿ ಕಪ್ಪಾಗಿದ್ದರೂ ತಪಸ್ಸಿನಿಂದ ಸಂಪಾದಿಸಿದ ಮೊಗದ ಮೇಲಿನ ತೇಜಸ್ಸು ಪೂರ್ತಿ ಬೆಳ್ಳಗಿದ್ದವರನ್ನೂ ನಾಚಿಸುತ್ತದೆ. ಅಂತಹ ದೈವ ತೇಜಸ್ಸು ಅವರ ಮುಖದಲ್ಲಿ. ಕವಿ ತೇಜಸ್ಸಿನ ಪುಂಜವೇ ಬಂದಿತೇನೋ ಎನ್ನುತ್ತಾನೆ. ಹೀಗೆ ಮಹಾಮಹಿಮರಾದ ವ್ಯಾಸರು ಧರ್ಮಜನ ಬಳಿ ಬಂದರು.ಸಜ್ಜನರ ದರ್ಶನ- ಸಂಭಾಷಣ- ಸಂಗಗಳೆಲ್ಲವೂ ಸತ್ಫಲವನ್ನೇ ನೀಡುತ್ತವೆ.ಅವು ಎಂದಿಗೂ ವಿಫಲವಾಗಲಾರವು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩