ಮಹಾಭಾರತ ೪೬

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೬

*ಅಪ್ಸರಾಸ್ಮಿ ಮಹಾಬಾಹೋ ದೇವಾರಣ್ಯವಿಚಾರಿಣೀ ಇಷ್ಟಾ ಧನಪತೇರ್ನಿತ್ಯಂ ವರ್ಗಾ ನಾಮ ಮಹಾಬಲ*

_ಪಂಚ ತೀರ್ಥಗಳಲ್ಲಿ ವಾಸ ಮಾಡಿದ್ದ ಮೊಸಳೆಯೇ ಸುಂದರಿಯಾದಾಗ ಅರ್ಜುನ ಅವಳ ಕಥೆ ಕೇಳುವನು. ಮಹಾಬಾಹು, ನಾನು ದೇವೋದ್ಯಾನಗಳಲ್ಲಿ ಸಂಚರಿಸುವ ಒಬ್ಬಳು ಅಪ್ಸರೆ. ಕುಬೇರನಿಗೆ ಇಷ್ಟಳಾದ ವರ್ಗಾ ಎಂಬವಳು. ನನಗೆ ನಾಲ್ವರು ಸಖಿಯರಿರುವರು.ಅವರೊಡನೆ ಇಷ್ಟ ಬಂದ ರೂಪ ಧರಿಸಿ ನಾನೊಮ್ಮೆ  ಸಂಚರಿಸುತ್ತಿದ್ದಾಗ ಕಠಿಣ ವ್ರತಧಾರಿಯೂ, ಏಕಾಂತ ಸಂಚಾರಿಯೂ, ವೇದಾಧ್ಯಯನಿಯೂ ಆದ ಓರ್ವ ಬ್ರಾಜ್ಮಣನನ್ನು ನೋಡಿದೆನು. ಅವನ ತಪಸ್ಸಿನಿಂದ ಸುತ್ತಲಿನ ಪ್ರದೇಶ ಬೆಳಗುತ್ತಿತ್ತು. ಅವನ ತಪಸ್ಸನ್ನು ಕೆಡಿಸುವ ಬಯಕೆಯಿಂದ ನಾವು ಅಲ್ಲಿ ಇಳಿದು ಸೌರಭೇಯೀ, ಸಮೀಚೀ, ಬುದ್ಬುದಾ, ಲತಾ ಹಾಗೂ ನಾನು ವರ್ಗಾ ಎಲ್ಲರೂ ಅವನ ಬಳಿ ಹೋದೆವು. ಹಾಡುತ್ತಾ, ನಗುತ್ತಾ, ಕುಣಿಯುತ್ತಾ ಅವನನ್ನು ಪ್ರಲೋಭನೆಗೊಳಿಸಲು ಪ್ರಯತ್ನಿಸಿದೆವು. ಕೆಲಕಾಲದ ನಂತರ ತನ್ನ ತಪಸ್ಸು ವಿಚಲಿತವಾಗದ ಆ ಬ್ರಾಹ್ಮಣನು ನಮ್ಮ ವರ್ತನೆಗೆ ಸಿಟ್ಟುಗೊಂಡು ಮೊಸಳೆಗಳಾಗಿ ನೂರು ವರ್ಷ ನೀರಿನಲ್ಲಿ ಸಂಚರಿಸಿ ಎಂದು ಶಾಪ ಕೊಟ್ಟನು._

*ಅವಧ್ಯಾಸ್ತು ಸ್ತ್ರಿಯಃ ಸೃಷ್ಟಾ ಮನ್ಯಂತೇ ಧರ್ಮಚಿಂತಕಾಃ ತಸ್ಮಾದ್ಧರ್ಮೇಣ ಧರ್ಮಜ್ಞ ನಾಸ್ಮಾನ್ಹಿಂಸಿತುಮರ್ಹಸಿ*

*ಸರ್ವಭೂತೇಷು ಧರ್ಮಜ್ಞ ಮೈತ್ರೋ ಬ್ರಾಹ್ಮಣ ಉಚ್ಯತೇ ಸತ್ಯೋ ಭವತು ಕಲ್ಯಾಣ ಏಷ ವಾದೋ ಮನೀಷಿಣಾಮ್*

_ಶಾಪದಿಂದ ಹೆದರಿದ ಆ ಅಪ್ಸರೆಯರು ಆ ಋಷಿಗೆ ಶರಣು ಹೊಕ್ಕರು. ಅಲ್ಲೊಂದಷ್ಟು ಧರ್ಮದ ಮಾತುಗಳನ್ನೂ ನುಡಿಯುತ್ತಾರೆ.  ಸ್ತ್ರೀಯರು ವಧೆಗೆ ಅನರ್ಹರೆಂದು ಸ್ಪಷ್ಟವಾಗಿ ಧರ್ಮಚಿಂತಕರು ನುಡಿಯುತ್ತಾರೆ. ಹಾಗಾಗಿ ಧರ್ಮಾತ್ಮನಾದ ನೀನು ನಮ್ಮನ್ನು ಹಿಂಸಿಸಬಾರದು. ಅಷ್ಟೇ ಅಲ್ಲ, ಬ್ರಾಹ್ಮಣನು ಎಲ್ಲಾ ಜೀವಿಗಳಲ್ಲೂ ಮೈತ್ರಿ ಉಳ್ಳವನೆಂದು ಹೇಳುತ್ತಾರೆ. ಜ್ಞಾನಿಗಳ ಈ ಮಾತು ಸತ್ಯವಾಗಲಿ. ಶಿಷ್ಟರಾದವರು ಶರಣಾಗತರಾದವರನ್ನು ರಕ್ಷಿಸುತ್ತಾರೆ. ನಿನಗೆ ಶರಣಾಗತರಾದ ನಮ್ಮನ್ನು ನೀನೇ ಪೊರೆಯಬೇಕು ಎಂದೆಲ್ಲಾ ನಿವೇದಿಸಿಕೊಳ್ಳುತ್ತಾರೆ. ಇಲ್ಲಿ ಕೆಲವು ಸಂಗತಿ ಗಮನಿಸಿದರೆ- ಒಂದು ಸ್ತ್ರೀಯರ ವಧೆ ನಿಷಿದ್ಧ. ರಾಮನೂ ತಾಟಕಿಯಂತಹ ದುಷ್ಟೆಯ ವಧೆಯ ಕಾಲದಲ್ಲೂ ವಿಶ್ವಾಮಿತ್ರರ ಬಳಿ ಇದನ್ನೇ ಪ್ರಶ್ನಿಸುತ್ತಾನೆ. ಆಗ ಕೌಶಿಕರು ಇವಳನ್ನು ಹಾಗೆಯೇ ಬಿಟ್ಟರೆ ಲೋಕಕ್ಕೆ ಕಳಂಕ, ಹಾಗಾಗಿ ಕೊಲ್ಲು ಎನ್ನುತ್ತಾನೆ. ಇಂತಹ ಅಪರೂಪದ ಪ್ರಸಂಗಗಳಲ್ಲಿ ಮಾತ್ರ ಸ್ತ್ರೀಯರು ವಧಾರ್ಹರಾಗಿದ್ದರು. ಆದರೆ ಸಾಮಾನ್ಯವಾಗಿ ಸ್ತ್ರೀಯರ ವಧೆ ಸರ್ವಥಾ ನಿಷಿದ್ಧ ಆಗಿತ್ತು. ಪುರುಷರಿಗೆ ಇದರಿಂದ ವಿನಾಯಿತಿ ಇರಲಿಲ್ಲ. ಸ್ತ್ರೀಯರ ಬಗೆಗೆ ನಮ್ಮ ಹಿಂದೂ ಪರಂಪರೆಯ ಉತ್ಕೃಷ್ಟ ಸ್ಥಾನಮಾನದ ಸಂಕೇತ ಇದು. ಅವರಿಗೆ ನಿಯಮಗಳು ಹೆಚ್ಚಿದ್ದವು ಹೇಗೋ ಹಾಗೆಯೇ ಅವರ ವಿಷಯದಲ್ಲಿ ಶಿಕ್ಷೆಯೂ ಕಡಿಮೆ ಇತ್ತು ಅನ್ನುವುದು ಅಧ್ಯಯನ ಯೋಗ್ಯ ವಿಷಯ. ಎರಡನೆಯದಾಗಿ ಬ್ರಾಹ್ಮಣ ಎಂದರೆ ಕೇವಲ ಹುಟ್ಟಿನಿಂದ ಬಂದವನಲ್ಲ. ಎಲ್ಲಾ ಜೀವಿಗಳಲ್ಲೂ ಯಾರು ಕೆಟ್ಟ ಮಾತನ್ನಾಡದೇ, ಹಿಂಸೆ ಮಾಡದೇ ಶಾಂತನಾಗಿ ಇರುವವನೋ ಅವನೇ ನಿಜವಾದ ಬ್ರಾಹ್ಮಣ. ಎಲ್ಲೆಡೆ ಬ್ರಹ್ಮನನ್ನು ಕಾಣುವ ಅವನಿಗೆ ದ್ವೇಷಿಸಲು ವಸ್ತುವೇ ಸಿಗದು. ಅಂತಹ ಗುಣಿ ಮಾತ್ರ ನಿಜವಾದ ಬ್ರಾಹ್ಮಣ ಆಗುವನು. ಯಾರಾದರೂ ತಪ್ಪು ಮಾಡಿದಾಗ ಕ್ಷಮೆ ಕೇಳಿ ಶರಣಾದರೆ ಕ್ಷಮಿಸುವುದು ಶಿಷ್ಟರ ಪರಂಪರೆ. ಸದಾ ಶಿಕ್ಷೆಯ ಕೋಪದ ಬುದ್ಧಿ ಒಳ್ಳೆಯದಲ್ಲ. ರಾಮನು ಕೂಡ ಪತ್ನಿಯನ್ನು ಹಿಂದಿರುಗಿಸಿ ಶರಣಾದರೆ ಪ್ರಾಣದಾನ ಮಾಡುವೆನೆಂದು ನುಡಿಯುತ್ತಾನೆ. ಕ್ಷಮೆಗೆ ಸಾಟಿಯಾಗುವ ಗುಣ ಮತ್ತೊಂದಿಲ್ಲ. ನಾವೂ ನಿಜಾರ್ಥದಲ್ಲಿ ಶಿಷ್ಟರೂ, ಬ್ರಾಹ್ಮಣರೂ ಆಗೋಣ.ಕಥೆ ಮುಂದೆ ಏನಾಗುವುದೆಂದು ನಾಳೆ ನೋಡೋಣ....._

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩