ಮಹಾಭಾರತ ೪೫
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೫
*ಸ ತಸ್ಮೈ ಭಗವಾನ್ಪ್ರಾದಾದೇಕೈಕಂ ಪ್ರಸವಂ ಕುಲೇ ಏಕೈಕಃ ಪ್ರಸವಸ್ತಸ್ಮಾದ್ಭವತ್ಯಸ್ಮಿನ್ಕುಲೇ ಸದಾ*
_ಅರ್ಜುನ ತನ್ನ ಪಯಣ ಮುಂದುವರೆಸುತ್ತಾ ಮಣಲೂರಿನ ರಾಜನಾದ ಚಿತ್ರವಾಹನನನ್ನು ಭೇಟಿಯಾದನು.ಆ ಚಿತ್ರವಾಹನನ ಮಗಳಾದ ರಮಣೀಯರೂಪಿಯಾದ ಚಿತ್ರಾಂಗದೆಯಲ್ಲಿ ಅನುರಕ್ತನಾದುದನ್ನೂ ಹೇಳುತ್ತಾನೆ. ಆಗ ಆ ರಾಜ ಹೇಳುವ ಕಥೆಯ ನಡುವಿನ ಮಾತು- ಹಿಂದೆ ಪ್ರಭಂಕರನೆಂಬ ರಾಜ ಈ ವಂಶದಲ್ಲಿದ್ದನು. ಅಪುತ್ರನಾದ ಅವನು ಸಂತಾನಾರ್ಥಿಯಾಗಿ ಶಿವನನ್ನು ಕುರಿತು ತಪಸ್ಸಾಚರಿಸಿದಾಗ ಶಿವನ ವರದಿಂದ ಅವನ ಕುಲದಲ್ಲಿ ಒಂದೊಂದೇ ಸಂತಾನವಾಗುವಂತೆ ಆಯಿತು. ನನ್ನ ಪೂರ್ವಿಕರೆಲ್ಲರಿಗೂ ಗಂಡು ಮಕ್ಕಳು ಜನಿಸಿದರು. ನನಗೆ ಮಾತ್ರ ಹೆಣ್ಣು ಜನಿಸಿತು. ಇವಳೇ ನನ್ನ ಮಗ ಎಂಬ ಭಾವನೆ ನನಗಿದೆ.ನನ್ನ ವಂಶ ಬೆಳೆಸುವವಳು ಇವಳೇ ಆಗಿದ್ದಾಳೆ.ಧರ್ಮಶಾಸ್ತ್ರದ ವಿಧಿಗನುಸಾರವಾಗಿ ಇವಳನ್ನು *ಪುತ್ರಿಕೆ* ಎಂದು ಕರೆದಿದ್ದೇನೆ. ಪುರಾಣಗಳ ಉಲ್ಲೇಖದಂತೆ ದಕ್ಷ ಪ್ರಜಾಪತಿ ತನ್ನ ಹೆಣ್ಣು ಮಕ್ಕಳನ್ನು ಹೀಗೆ ಪುತ್ರಿಕೆಯರನ್ನಾಗಿ ಕಂಡಿದ್ದು ಇದೆ. ಪ್ರಕೃತ ಈ ರಾಜನು ಅದೇ ವಿಧಿಗನುಸಾರವಾಗಿ ಮಗಳಲ್ಲೇ ಮಗನನ್ನು ಕಂಡಿದ್ದನು. ಇವಳಲ್ಲಿ ನನ್ನ ವಂಶ ಬೆಳೆಸುವ ಮಗ ಹುಟ್ಟಬೇಕು. ಇದೇ ಕನ್ಯಾಶುಲ್ಕವಾಗಿ ನೀನು ಕೊಡಬೇಕಾದುದು ಎಂದನು. ಅನಂತರ ಅವನ ಮಾತಿನಂತೆ ಮೂರು ವರ್ಷಗಳ ಕಾಲ ಅರ್ಜುನ ಅಲ್ಲಿ ತಂಗಿದ್ದನು. ಅರ್ಜುನನ ನಡೆ ಇಲ್ಲಿ ಸ್ವಲ್ಪ ವಿಚಿತ್ರವಾಗಿದೆ. ಹಿಂದೆ ಉಲೂಪಿ ತಾನೇ ಬಯಸಿದಾಗ ಧರ್ಮದ ಪಾಠ ಹೇಳುವ ಅವನು ಇಲ್ಲಿ ತಾನಾಗಿ ಬಯಸಿ ಅವಳು ತನ್ನೊಡನೆ ಬರಲಾರಳೆಂದರೂ ವರಿಸುತ್ತಾನೆ. ಇಲ್ಲಿ ಅವನು ಬ್ರಹ್ಮಚರ್ಯದ ಪ್ರಶ್ನೆ ಮಾಡುವುದೇ ಇಲ್ಲ!_
*ಅಗಸ್ತ್ಯತೀರ್ಥಂ ಸೌಭದ್ರಂ ಪೌಲೋಮಂ ಚ ಸುಪಾವನಮ್ ಕಾರಂಧಮಂ ಪ್ರಸನ್ನಂ ಚ ಹಯಮೇಧಫಲಂ ಚ ಯತ್ ಭಾರದ್ವಾಜಸ್ಯ ತೀರ್ಥಂ ಚ ಪಾಪಪ್ರಶಮನಂ ಮಹತ್*
_ಅನಂತರ ಮುಂದುವರೆದ ಪಾರ್ಥನು ದಕ್ಷಿಣ ಸಮುದ್ರ ತೀರದಲ್ಲಿ ತಪಸ್ವಿಗಳಿಂದ ಶೋಭಿಸುವ ಐದು ತೀರ್ಥಗಳಿಗೆ ಹೋದನು. ಅವು ಹಿಂದೆ ತಾಪಸರಿಂದ ತ್ಯಜಿಸಲ್ಪಟ್ಟಿದ್ದವು. ಅಗಸ್ತ್ಯ ತೀರ್ಥ, ಸೌಭದ್ರ, ಪೌಲೋಮ, ಕಾರಂಧಮ ಹಾಗೂ ಭಾರದ್ವಾಜ. ಆ ತೀರ್ಥಕ್ಷೇತ್ರಗಳು ನಿರ್ಜನವಾಗಿರುವುದನ್ನು ಕಂಡ ಅರ್ಜುನನು ಹಿಂದೆ ತಾಪಸಿಗಳು ಈ ತೀರ್ಥ ಬಿಡಲು ಕಾರಣವೇನೆಂದು ಕೇಳಿದಾಗ ಅವರು ಒಂದು ಕಥೆಯನ್ನು ಆರಂಭಿಸಿದರು. ಅರ್ಜುನ ಈ ಕೊಳಗಳಲ್ಲಿ ಐದು ಮೊಸಳೆಗಳು ವಾಸಮಾಡುತ್ತಿರುವ ಕಾರಣ ಯಾರೂ ಇವುಗಳನ್ನು ಸೇವಿಸುತ್ತಿಲ್ಲ ಎಂದರು. ಅರ್ಜುನನು ಅವರ ಮಾತನ್ನು ಕೇಳಿಯೂ ಅವರ ಎಚ್ಚರಿಕೆಯನ್ನು ಲೆಕ್ಕಿಸದೇ ಆ ಸರೋವರಗಳಲ್ಲಿ ವೇಗವಾಗಿ ಮುಳುಗುತ್ತಾನೆ. ಮೊಸಳೆ ಅವನನ್ನು ಹಿಡಿದಾಗ ಅದರೊಟ್ಟಿಗೆ ಅದನ್ನು ಹಿಡಿದುಕೊಂಡೇ ಅರ್ಜುನ ಮೇಲಕ್ಕೆ ಬರುತ್ತಾನೆ. ಮೇಲಕ್ಕೆ ಬಂದಾಗ ಆಶ್ಚರ್ಯವೆಂಬಂತೆ ಆ ಮೊಸಳೆ ಒಬ್ಬಳು ದಿವ್ಯಸ್ತ್ರೀಯಾಗಿ ಬದಲಾಯಿತು. ಅವಳ ಕಥೆಯನ್ನು ಮುಂದೆ ನೋಡೋಣ...._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ