ಮಹಾಭಾರತ ೪೭

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೭

*ಶತಂ‌ ಸಹಸ್ರಂ‌ ವಿಶ್ವಂ ಚ ಸರ್ವಮಕ್ಷಯವಾಚಕಮ್ ಪರಿಮಾಣಂ ಶತಂ ತ್ವೇತನ್ನೈತದಕ್ಷಯವಾಚಕಮ್*

_ಆ ಅಪ್ಸರೆಯರ ಕೋರಿಕೆಯಂತೆ ತಪಸ್ವಿಯು ತನ್ನ ಶಾಪಕ್ಕೆ ಸಮಾಧಾನವನ್ನು ನೀಡಿದನು. ನೂರು,ಸಾವಿರ, ವಿಶ್ವ ಮೊದಲಾದ ಪದಗಳು ಅಕ್ಷಯವಾಚಕವಾಗಿವೆ. ಆದರೆ ನಾನು ಪ್ರಕೃತ ಹೇಳಿದ ಈ ನೂರು ಅಕ್ಷಯವಾಗದಿರಲಿ. ನೀವು ಮೊಸಳೆಗಳಾಗಿ ಪುರುಷರನ್ನು ಹಿಡಿದೆಳೆವಾಗ ಯಾರು ನಿಮ್ಮನ್ನು ನೆಲದ ಮೇಲೆ ಎಳೆದೊಯ್ಯುವರೋ ಆಗ ನೀವೆಲ್ಲರೂ ನಿಜ ರೂಪವನ್ನು ಹೊಂದಿರಿ ಎಂದನು. *ಅನೃತಂ ನೋಕ್ತಪೂರ್ವಂ ಮೇ ಹಸತಾಪಿ ಕದಾಚನ*  ಆ ಋಷಿ ಇದನ್ನು ಹೇಳುತ್ತಾನೆ. ಹಿಂದೆ ಎಂದಾದರೂ ನಾನು ತಮಾಷೆಗೂ ಸುಳ್ಳಾಡಿಲ್ಲ. ಇಂದಿನಿಂದ ನೀವಿರುವ ಈ ಕೊಳಗಳು ನಾರೀ ತೀರ್ಥಗಳೆಂದು ಪ್ರಸಿದ್ಧಿ ಪಡೆದು ಜ್ಞಾನಿಗಳ ಸೇವನೆಗೆ ಯೋಗ್ಯವಾಗಲಿ ಎಂದು ಅನುಗ್ರಹಿಸಿದನು. ಮಹಾತ್ಮರ ಬಿರುನುಡಿಯೂ ನಮಗೆ ಸಿರಿಯನ್ನೇ ತರುತ್ತದೆ. ಆ ಅಪ್ಸರೆಯರು ಶಾಪದ ಜೊತೆಗೆ ತಮ್ಮ ವಾಸದಿಂದ ತೀರ್ಥ ಹುಟ್ಟುವಂತಹ ಶ್ರೇಷ್ಠತೆಯನ್ನೂ ಪಡೆದರು. ಅನಂತರ ನಮಗೆ ನಾರದರು ದೊರೆತು ಅವರಿಗೆ ನಮ್ಮ ದುಃಖವನ್ನು ಹೇಳಿದಾಗ ಅವರ ಮಾತಿನಂತೆ ದಕ್ಷಿಣ ಸಮುದ್ರದ ಈ ತೀರದಲ್ಲಿ ಪವಿತ್ರ ತೀರ್ಥಗಳಲ್ಲಿ ನಾವು ವಾಸ ಮಾಡುತ್ತಿರುವೆವು. ಇಂದು ನಿನ್ನ ದೆಸೆಯಿಂದ ನಾವೆಲ್ಲರೂ ಮುಕ್ತರಾಗುತ್ತಿರುವೆವು ಎಂದಳು. ಅರ್ಜುನನು ಬಹಳ ಸಂತೋಷದಿಂದ ಅವರೆಲ್ಲರನ್ನೂ ನೀರಿನಿಂದ ಮೇಲೇತ್ತಿ ಮುಕ್ತಿ ಕೊಡಿಸಿ‌ ಮತ್ತೆ ಮಣಲೂರಪುರಕ್ಕೆ ಹೋಗಿ ಚಿತ್ರಾಂಗದೆಯಲ್ಲಿ ಬಭ್ರುವಾಹನನೆಂಬ ಮಗನನ್ನು ಪಡೆದನು. ಸಮಯ ಸಂದರ್ಭ ಒದಗಿದಾಗ ಮಾತ್ರ ನೆತವಾಗುವುದಲ್ಲ, ಅರ್ಜುನನಂತೆ ಅಚಾನಕ್ಕಾಗಿ ದೊರೆತಾಗಲೂ‌ ಉಪಕರಿಸುವುದು ಶ್ರೇಷ್ಠರ ಗುಣ.ಮುಂದೆ ಅರ್ಜುನನು ತನ್ನ ಯಾತ್ರೆಯನ್ನು ಗೋಕರ್ಣದೆಡೆಗೆ ಮುಂದುವರೆಸಿದನು._

*ಸಮುದ್ರೇ ಪಶ್ಚಿಮೇ ಯಾನಿ ತೀರ್ಥಾನ್ಯಾಯತನಾನಿ ಚ ತಾನಿ ಸರ್ವಾಣಿ ಗತ್ವಾ ಸ ಪ್ರಭಾಸಮುಪಜಗ್ಮಿವಾನ್*

_ತರುವಾಯ ಅರ್ಜುನನು ಪಶ್ಚಿಮ ದೇಶದ ತೀರ್ಥಗಳಿಗೆ ತೆರಳಿ ಅಲ್ಲೆಲ್ಲ ಕಡೆ ದೇವತೆಗಳನ್ನು ದರ್ಶಿಸಿ ನಂತರ ಪ್ರಭಾಸ ತೀರ್ಥಕ್ಕೆ ಹೋದನು. ನಂತರ ವಾಸುದೇವನು ಪ್ರಭಾಸಕ್ಕೆ ಅರ್ಜುನ ಬಂದಿರುವ ವಿಷಯ ಅರಿತು ಯಾರಿಗೂ ತಿಳಿಯದಂತೆ ತಾನು ಬಂದು ಭೇಟಿಯಾದನು. ಹಿಂದೆ ನರ-ನಾರಾಯಣ ರೂಪದಲ್ಲಿ ತಪಸ್ಸನ್ನು ಮಾಡಿದವರು ಇವರೇ ಆಗಿದ್ದರು. ಪರಸ್ಪರ ಆಲಂಗಿಸಿ ಕ್ಷೇಮಸಮಾಚಾರವನ್ನು ಕೇಳುತ್ತಾರೆ. ಇಲ್ಲಿ ಕೃಷ್ಣನ ವರ್ತನೆ ನಮಗೆಲ್ಲ ಮಾದರಿ. ಮಿತ್ರನು-ಭಕ್ತನು-ಸಜ್ಜನನೊಬ್ಬ ಬಂದನೆಂದಾಗ ಭಗವಂತನೇ ಅವನ ಬಳಿ ಓಡೋಡಿ ಬರುತ್ತಾನೆ. ಅಷ್ಟಲ್ಲದೇ ಕ್ಷೇಮವನ್ನೂ ವಿಚಾರಿಸುತ್ತಾನೆ. ನಾವು ಭಗವಂತನಲ್ಲಿ ಪರಿಪೂರ್ಣ ವಿಶ್ವಾಸವಿಟ್ಟರೆ ಅವನೇ ನಮ್ಮ ಬಳಿ ನಿಸ್ಸಂಶಯವಾಗಿ ಬಂದೇ ಬರುತ್ತಾನೆ. ಹಾಗಾಗಿ ನಿಷ್ಕಲ್ಮಷ ಅಥವಾ ಪರಿಪೂರ್ಣ ಭಕ್ತಿಯನ್ನೇ ಭಗವಂತನಲ್ಲಿ ಕೇಳಬೇಕು._

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩