ಸ್ವಪ್ನವಾಸವದತ್ತ ೨

🌼 ಸ್ವಪ್ನವಾಸವದತ್ತ ಎಸಳು-೨🌼

*धीरस्याश्रमसंश्रितस्य वसतस्तुष्टस्य वन्यै: फलैर्मानार्हस्य जनस्य वल्कलवतस्त्रास: समुत्पाद्यते । उत्सिक्तो विनयादपेतपुरुषो भाग्यैश्चलैर्विस्मित: कोयं भो निभृतं तपोवनमिदं ग्रामीकरोत्याज्ञया ।।*

_ಯೌಗಂಧರಾಯಣನು‌ ನುಡಿಯುವ ಮಾತು. ಅವನು ಆಶ್ರಮದ ಆಶ್ರಯದಲ್ಲಿ ಇದ್ದಾನೆ. ರಾಜಭಟರು ತಪಸ್ವಿಗಳನ್ನು ಬೆದರಿಸಿ ಬದಿಗೆ ಸರಿಸುತ್ತಿರುವ ಸದ್ದು ನೇಪಥ್ಯದಲ್ಲಿ ಕಂಡುಬರುತ್ತಿದೆ. ಆಗ ಹೇಳುವ ಮಾತು. ಇಂದ್ರಿಯಗಳ ಅಪೇಕ್ಷೆಗಳನ್ನು ನಿಯಂತ್ರಿಸಿ ಧೀರರೆನಿಸಿಕೊಂಡವರನ್ನು, ತಪೋವನವನ್ನೇ ಮನೆಯನ್ನಾಗಿಸಿಕೊಂಡವರನ್ನು, ಕಾಡಿನಲ್ಲಿ ಬೆಳೆಯುವ ಕಂದಮೂಲಗಳನ್ನು ತಿಂದೇ ಜೀವನ ನಡೆಸುವವರನ್ನು, ಅಲ್ಪತೃಪ್ತರನ್ನು, ನಾರುಬಟ್ಟೆಯುಟ್ಟು  ಬದುಕುವವರನ್ನು, ಎಲ್ಲರಿಂದಲೂ ಗೌರವ ಸ್ವೀಕರಿಸಲು ಯೋಗ್ಯರಾದ ತಪಸ್ವಿಗಳನ್ನು ಯಾರು ಹಿಂಸಿಸುತ್ತಿರುವರು, ಅವರಿಗೆ ತ್ರಾಸ ಉಂಟುಮಾಡುತ್ತಿರುವ ಮೂರ್ಖರಾದರೂ ಯಾರು? ಎಲ್ಲ ರೀತಿಯಿಂದಲೂ ಅವರು ಸಮಾಜದಿಂದ ವಿಮುಖರು. ಸಮಾಜವನ್ನು ಅವಲಂಬಿಸಿದವರಲ್ಲ. ಸಮಾಜವೇ ಲೋಕಕಲ್ಯಾಣಕ್ಕಾಗಿ ಅವರನ್ನು ಅವಲಂಬಿಸಿದೆ. ಕಾಡಿನ ಸಂಪನ್ಮೂಲಗಳನ್ನು ಬಳಸಿ ಜೀವನ ನಡೆಸುತ್ತಿದ್ದಾರೆ. ಯಾವ ಕಾರಣದಿಂದಲೂ ರಾಜನ ಹಂಗು ಅವರಿಗಿಲ್ಲ. ಅಂತಹ ಸ್ಥಿತಿಯಲ್ಲಿ ಅವರಿಗೆ ತೊಂದರೆ ಕೊಡುತ್ತಿರುವವರಾದರೂ ಯಾರು? ಲೋಕಮರ್ಯಾದೆ ಮೀರಿರುವ, ವಿನಯವನ್ನು ತ್ಯಜಿಸಿರುವ ಅಥವಾ ವ್ಯವಹಾರ ಸೂಕ್ಷ್ಮತೆಯನ್ನು ಅರಿಯದ ಹುಂಬತನದಂತೆ, ಅಸ್ಥಿರವಾದ ಸಂಪತ್ತಿನ ಮದದಿಂದ ಕೂಡಿ ಮನಬಂದಂತೆ ಸೇವಕರಿಗೆ ಆಜ್ಞೆ ಕೊಟ್ಟು ಶಾಂತವಾದ ತಪೋವನವನ್ನು ಊರಿನಂತೆ ಅಶಾಂತವಾಗಿಸುತ್ತಿರುವ ಯಾರಿವನು? ಯಾವ ರಾಜನೋ ಏನೋ ಸಂಪತ್ತಿನ ಗತಿಯನ್ನು ಅರಿಯದ ಮೂಢ. ಚಂಚಲವಾದ ಐಶ್ವರ್ಯವು ಇಂದು ಇವನನ್ನು ಆಶ್ರಯಿಸಿದಂತೆ ನಾಳೆ ಮತ್ತೊಬ್ಬನ ಬಳಿ ಹೋಗಬಹುದು.ಅದನ್ನರಿಯದೆ ಸಂಪತ್ತಿನ ಮದದಿಂದ ಲೋಲಮರ್ಯಾದೆ ಮೀರಿ ಅವಿನೀತನಾಗಿ ತಪಸ್ವಿಗಳ ಬಳಿ ಅನುಚಿತ ವರ್ತನೆ ತೋರುವಂತೆ ಆಜ್ಞಾಪಿಸುತ್ತಿರುವ ಇವನಾರು? ಮೊದಲಾರ್ಧದಲ್ಲಿ ತಪಸ್ವಿಗಳು ಯಾವ ರೀತಿಯಿಂದಲೂ ಅಗೌರವ ಯೋಗ್ಯರಲ್ಲ ಎಂದು ಪ್ರತಿಪಾದಿಸಿ ಅನಂತರ ಸೇವಕರ ವರ್ತನೆ ಖಂಡಿಸದೆ ಸೇವಕರನ್ನು ನಿಯಂತ್ರಿಸುವ ರಾಜನ ಮೂರ್ಖತನವನ್ನು ಕವಿ ಯೌಗಂಧರಾಯಣನ ಮೂಲಕ ಖಂಡಿಸುತ್ತಿದ್ದಾನೆ. ಸಂಪತ್ತು ಸ್ಥಿರವಲ್ಲವೆಂದು ಗೊತ್ತಿದ್ದೂ ಮದ ತೋರುವುದು ಮೂರ್ಖತನವಲ್ಲದೆ ಮತ್ತೇನು!_

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩