ರಾಮಾಯಣ ೯೫

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೫

*ವಿರರಾಜ ಮಹಾಕಾಯೋ ಮಹಾವೀರ್ಯೋ ಮಹಾಮನಾಃ ಪುಷ್ಪಿತಾಶೋಕಸಂಕಾಶೋ ವಿಧೂಮ ಇವ ಪಾವಕಃ*

_ವಾಲ್ಮೀಕಗಳ ಒಂದು ಸುಂದರ ವರ್ಣನೆ. ಅಕಂಪನನಿಗೂ ಹನುಮನಿಗೂ ಘೋರ ಯುದ್ಧ ಸಂಭವಿಸಿದೆ. ಆ ಸಮಯದಲ್ಲಿ ಹನುಮನನ್ನು ನಿಯಂತ್ರಿಸಲು ಬಯಸಿದ ಆ ರಕ್ಕಸನು ದೇಹವನ್ನು ಸೀಳುವಂತಹ ಹದಿನಾಲ್ಕು ಬಾಣಗಳನ್ನು ಪ್ರಯೋಗಿಸಿ ಆ ಮಹಾದೇಹಿಯನ್ನು ಕೆತ್ತಿದನು. ಆಗ ಹನುಮನು ನೋಡುಗರಿಗೆ ಹೇಗೆ ಕಂಡನೆಂಬ ವರ್ಣನೆ ಇದು. ಬೃಹಚ್ಛರೀರನೂ, ವೀರಾಗ್ರೇಸರನೂ , ಧೈರ್ಯಶಾಲಿಯೂ ಆದ ಹನುಮನು ಅರಳಿದ ಅಶೋಕವೃಕ್ಷದಂತೆ ಅಥವಾ ಹೊಗೆಯಿಲ್ಲದ ಬೆಂಕಿಯಂತೆ ಮಿಂಚಿದನು. ಅಶೋಕ ಮರದ ಹೂವುಗಳು ರಕ್ತದಂತೆ ತುಂಬಾ ಕೆಂಪುಬಣ್ಣದವು. ಪ್ರಕೃತ ಬಾಣಗಳಿಂದ ಆದ ಗಾಯಗಳೆಡೆಯಲ್ಲಿ ರಕ್ತ ಚಿಮ್ಮಿದಾಗ ಮೈಯೆಲ್ಲಾ ಕೆಂಪಗೆ ಹೊಳೆಯುತ್ತಿದೆ. ಅದನ್ನು ಕವಿ ಹೀಗೆ ವರ್ಣಿಸಿದ್ದಾನೆ. ಇನ್ನು ಹೊಗೆಯಿಲ್ಲದ ಬೆಂಕಿ ಎಂದರೆ ನಿಗಿನಿಗಿ ಕೆಂಡ. ಅದರ ಬಣ್ಣವೂ ಕೆಂಪು. ತುಂಬಾ ಕೆಂಪಲ್ಲ ಸ್ವಲ್ಪ ಹೊಂಬಣ್ಣ‌. ಹನುಮನು ಸ್ವಾಭಾವಿಕವಾಗಿ ಸ್ವಲ್ಪ ಹೊಂಬಣ್ಣದವನು. ಈಗ ರಕ್ತ ಭೂಷಿತನಾಗಿ ಸುಡುವ ಕೆಂಡದಂತೆ ಶೋಭುಸುತ್ತಿದ್ದಾನೆ. ಉಪಮಾ ಕಾಳಿದಾಸಸ್ಯ ಎಂಬುದು ಆಮೇಲೆ ಬಂದದ್ದು. ವಾಲ್ಮೀಕಿಯು ಎಲ್ಲಾ ಅಲಂಕಾರಗಳಿಗೂ ಎಲ್ಲರನ್ನೂ ಮೀರಿಸುವಂತಹ ದೃಷ್ಟಾಂತಗಳನ್ನು ಕೊಟ್ಟಿದ್ದಾನೆ._

*ಹುತಾಶನಂ ತರ್ಪಯತಾಂ ಬ್ರಾಹ್ಮಣಾಂಶ್ಚ ನಮಸ್ಯತಾಮ್ ಆಜ್ಯಗಂಧಪ್ರತಿವಹಃ ಸುರಭಿರ್ಮಾರುತೋ ವವೌ*

_ಪ್ರಹಸ್ತನು ರಾವಣನ ಬಳಿ ನಿನಗಾಗಿ ಪ್ರಾಣತ್ಯಾಗ ಮಾಡಲೂ ಸಿದ್ಧ, ಏಕೆಂದರೆ ನೀನು ದಾನಮಾನಗಳಿಂದ ಆದರಿಸಿರುವೆ, ಕಷ್ಟಕಾಲದಲ್ಲಿ ಸಂತೈಸಿ ಉಪಕಾರ ಮಾಡಿರುವೆ ಎಂದು ಹೇಳಿ ಯುದ್ಧಕ್ಕೆ ಹೊರಟನು. ಆಗ ರಾಕ್ಷಸ ಯೋಧರು ಅಗ್ನಿಯಲ್ಲಿ ತುಪ್ಪದ ಆಹುತಿಗಳನ್ನು ದೇವತೆಗಳಿಗಿತ್ತು ಬ್ರಾಹ್ಮಣರನ್ನು ಗಂಧಪುಷ್ಪಾದಿಗಳಿಂದ ಸತ್ಕರಿಸಿದರು. ಅಲ್ಲಿನ ಸುತ್ತಲ ಗಾಳಿಯಲ್ಲಿ ತುಪ್ಪದ ಸುಗಂಧವು ವ್ಯಾಪಿಸಿ ಆಹ್ಲಾದಕರವಾಯಿತು. ರಾಕ್ಷಸರು ಕ್ರೂರಕರ್ಮಿಗಳಾದರೂ ಯಜ್ಞ ಮುಂತಾದ ವಿಷಯಗಳಲ್ಲಿ ತುಂಬಾ ಶ್ರದ್ಧೆ ಇಟ್ಟುಕೊಂಡಿದ್ದರು. ಅದೂ ಯುದ್ಧದಂತಹ ಸಮಯದಲ್ಲಿ ಜ್ಞಾನಿಗಳನ್ನು ಗೌರವಿಸುತ್ತಿದ್ದರು. ಉಳಿದ ಸಮಯದಲ್ಲಿ ಲೋಕ ವಿರುದ್ಧವನ್ನೇ ಆಚರಿಸಿದರೂ ಪ್ರಾಣ ಹೋಗುವ ನಷ್ಟ ಆಗುವ ಸಂದರ್ಭ ಬಂದಾಗ ಬುದ್ಧಿ ಜಾಗೃತವಾಗಿ ಸತ್ಕರ್ಮಗಳನ್ನು ಆಚರಿಸುತ್ತಿದ್ದರು. ಈಗಲೂ ಅನೇಕ ರಾಕ್ಷಸರ ಸ್ವಭಾವ ಮನುಷ್ಯರಲ್ಲಿ ನಾವು ಗಮನಿಸಬಹುದು. ಹೋಮ ಹವನ ಪೂಜೆ ಇತ್ಯಾದಿಗಳನ್ನು ಹೆಚ್ಚಾಗಿಯೇ ಆಚರಿಸುತ್ತಾ, ಮುಹೂರ್ತ ಮೊದಲಾದ ವಿಷಯಗಳಲ್ಲಿ ಅತಿ ಆಸಕ್ತಿಯನ್ನು, ವಿದ್ವಾಂಸರಲ್ಲಿ  ಮಠಾಧೀಶರಲ್ಲಿ ಬಹುಭಕ್ತಿಯನ್ನೂ ಮಾಡಿ ಇನ್ನೊಂದೆಡೆ ಯಾವುದು ನಿಂದ್ಯವೋ ಅಂತಹ ಕರ್ಮಗಳನ್ನೇ ಆಚರಿಸುತ್ತಾರೆ. ರಾಕ್ಷಸರು ಅಷ್ಟೆಲ್ಲ ಮಾಡಿಯೂ ವಿನಾಶ ಹೊಂದಿದಂತೆ ಇಲ್ಲೂ ಕ್ರೂರಕರ್ಮಿಗಳನ್ನೂ ಯಾವ ದೇವನೂ ಕಾಪಾಡಲಾರ. ಅವರು ಎಂದಾದರೂ ತಮ್ಮ ದುಷ್ಕರ್ಮಗಳಿಗೆ ಫಲವನ್ನು ಉಣ್ಣಲೇಬೇಕು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩