ರಾಮಾಯಣ ೯೩
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೩
*ಧನುರ್ಜ್ಯಾತಂತ್ರಿಮಧುರಂ ಹಿಕ್ಕಾತಾಲಸಮನ್ವಿತಮ್ ಮಂದಸ್ತನಿತಸಂಗೀತಂ ಯುದ್ಧಗಾಂಧರ್ವಮಾಬಭೌ*
_ವಾಲ್ಮೀಕಿ ಮಹರ್ಷಿಗಳು ಯುದ್ಧದಲ್ಲಿ ಸಂಗೀತಶಾಲೆಯನ್ನು ಸೃಷ್ಟಿಸಿ ವರ್ಣಿಸುತ್ತಿದ್ದಾರೆ. ಕಪಿರಾಕ್ಷಸರ ನಡುವೆ ಘೋರವಾದ ಯುದ್ಧ ನಡೆಯುತ್ತಿರಲು ರಣರಂಗವೇ ಒಂದು ಸಂಗೀತ ಶಾಲೆಯಾಯಿತು. ಅಲ್ಲಿ ಧನುಸ್ಸನ್ನು ಬಲವಾಗಿ ಎಳೆದಾಗ ಬರುವ ನಾದವೇ ತಂತಿಯ ಅಥವಾ ವೀಣೆ-ಪಿಟೀಲು ಮೊದಲಾದ ಮಧುರ ವಾದ್ಯಗಳ ಧ್ವನಿ. ಪೆಟ್ಟು ತಿಂದು ಉರುಳಿದ ಕಪಿರಾಕ್ಷಸರ ನೋವಿನ ಚೀತ್ಕಾರ ಅಥವಾ ಬಿಕ್ಕಳಿಕೆಯೇ ತಾಳ ಅಥವಾ ಹಿಕ್ಕಾ ಎಂದರೆ ಕುದುರೆಗಳ ಹೇಷಾರವ ಹಾಗೂ ಮಂದ ಅಂದರೆ ಆನೆಯ ಘೀಳಿಡುವಿಕೆ ಇವೇ ತಾಳಗಳು. ಸತತ ಹೋರಾಟದಿಂದ ಬಳಲಿ ಕುಗ್ಗಿದ ಧ್ವನಿಯಲ್ಲಿ ಮಾಡುತ್ತಿರುವ ಶಬ್ದಗಳೇ ಹಾಡುಗಾರಿಕೆ. ಹೀಗೆ ರಣದಲ್ಲಿ ಕವಿಗೆ ಸಂಗೀತವೂ ಕಾಣಿತು._
_ರಾಕ್ಷಸರಲ್ಲಿ ಧೂಮ್ರಾಕ್ಷರೆಂಬ ಹೆಸರು ಸಾಮಾನ್ಯವೇನೋ ಅಥವಾ ತುಂಬಾ ಪ್ರಸಿದ್ಧವಾದುದಿರಬೇಕು. ದೇವೀ ಮಾಹಾತ್ಮೆಯಲ್ಲಿ ಧೂಮ್ರಲೋಚನ ಎನ್ನುವ ರಾಕ್ಷಸ ಬರುತ್ತಾನೆ. ಲೋಚನ ಅಕ್ಷ ಎರಡಕ್ಕೂ ಕಣ್ಣೆಂಬ ಒಂದೇ ಅರ್ಥ. ತಾರಕಾಸುರನ ಸೈನ್ಯದಲ್ಲೂ ಈ ಧೂಮ್ರಾಕ್ಷ ಬರುತ್ತಾನೆ. ಬೂದಿಯ ಬಣ್ಣದ ಕಣ್ಣಿನವರು ರಾಕ್ಷಸರಲ್ಲಿ ಹೆಚ್ಚಾಗಿ ಇರುವರೇನೋ! ಬೆಕ್ಕಿನ ಕಣ್ಣಿನವರು ಚೀನೀ ಅಥವಾ ಟಿಬೆಟಿಯನ್ ರಲ್ಲಿ ಸಾಮಾನ್ಯವಾದಂತೆ._
*ಸ ತು ಪವನಸುತೋ ನಿಹತ್ಯ ಶತ್ರುಂ ಕ್ಷತಜವಹಾಃ ಸರಿತಶ್ಚ ಸನ್ನಿಕೀರ್ಯ ರಿಪುವಧಜನಿತಶ್ರಮೋ ಮಹಾತ್ಮಾ ಮುದಮಗಮತ್ಕಪಿಭಿಶ್ಚ ಪೂಜ್ಯಮಾನಃ*
_ಧೂರ್ಮಾಕ್ಷನ ಭಯಂಕರವಾದ ಯುದ್ಧದಿಂದ ಕಪಿಸೇನೆ ತಲ್ಲಣಗೊಂಡಾಗ ಪವನಸುತನು ಪ್ರವೇಶಿಸಿ ಅವನ ಮೇಲೆ ಪರ್ವತಶಿಖರವೊಂದನ್ನು ಎಸೆದು ಸಂಹರಿಸುತ್ತಾನೆ.ಅಳಿದುಳಿದ ಅವನ ಸೈನ್ಯದ ಮೇಲೆ ಭಯಂಕರವಾಗಿ ಆಕ್ರಮಣ ಮಾಡಿ ರಕ್ತದ ನದಿಯೇ ಅಥವಾ ಪ್ರವಾಹವೇ ಹರಿಯುವಂತೆ ಮಾಡುತ್ತಾನೆ. ಅನಂತರ ಬಳಲಿದ ಅವನು ತನ್ನ ಶ್ರಮವನ್ನು ಸುಲಭವಾಗಿ ನೀಗಿದನು. ಹನುಮನ ಪರಾಕ್ರಮ ಕಂಡ ಕಪಿಗಳು ತುಂಬಾ ಆದರಿಸಿ ಉಪಚರಿಸಿದರು. ಕಪಿಗಳ ಉಪಚಾರದಿಂದ ಆದರದಿಂದ ಹನುಮನ ಅಷ್ಟು ಕಾಲದ ಯುದ್ಧದ ಆಯಾಸವೆಲ್ಲವೂ ಕ್ಷಣಾರ್ಧದಲ್ಲಿ ಮರೆಯಾಯಿತು. ನಮ್ಮ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದಾಗ ಕೆಲಸ ಮಾಡಿದಾಗ ಆದ ನೋವು-ಶ್ರಮ ಎರಡೂ ದೂರವಾಗುತ್ತದೆ. ಹಾಗಾಗಿ ಯಾರಾದರೂ ಅದ್ಭುತ ಕಾರ್ಯ ಮಾಡಿದಾಗ ಕೊಂಕಾಡದೇ, ಕಡಿಮೆ ಆಯಿತೆಂದು ಹೀಗಳೆಯದೇ ಮನತುಂಬಿ ಅಭಿನಂದಿಸೋಣ.ಅವರಿಗೆ ಇನ್ನಷ್ಟು ಮತ್ತಷ್ಟು ಸಾಧಿಸಲು ಅನುವು ಮಾಡಿಕೊಡಬಹುದು ನಮ್ಮಯ ಯಃಕಶ್ಚಿತ್ ಎರಡು ಮಾತುಗಳು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ