ರಾಮಾಯಣ ೯೬
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೬
*ಹತವೀರೌಘವಪ್ರಾಂ ತು ಭಗ್ನಾಯುಧಮಹಾದ್ರುಮಾಮ್ ಶೋಣಿತೌಘಮಹಾತೋಯಾಂ ಯಮಸಾಗರ ಗಾಮಿನೀಮ್*
_ಪ್ರಹಸ್ತನು ರಾವಣನ ಸೇನೆಯ ಮೂರನೇ ಒಂದು ಭಾಗವನ್ನು ತೆಗೆದುಕೊಂಡು ಯುದ್ಧಕ್ಕೆ ಹೊರಟನು. ರಾವಣನಿಗೆ ಅವನು ಮಾವ.ಹಾಗಾಗಿ ಅವನ ಆಸ್ಥಾನದಲ್ಲಿ ಹೆಚ್ಚು ಗೌರವ. ಅವನ ಸೈನಿಕರಿಗೂ ಕಪಿಗಳಿಗೂ ಮಹಾಘೋರವಾದ ಸಂಗ್ರಾಮ ನಡೆಯಿತು. ಆ ಸಮಯದಲ್ಲಿ ಅಲ್ಲಿ ರಕ್ತದ ರಣನದಿಯೇ ಹರಿಯಿತು. ಸತ್ತು ಬಿದ್ದ ಭಟರ ಅಥವಾ ಯೋಧರ ರಾಶಿಯೇ ಎರಡು ತೀರಗಳು. ಮುರಿದು ಬಿದ್ದಿರುವ ಆಯುಧಗಳೇ ತೀರದ ಮರಗಳು. ರಕ್ತದ ಕೋಡಿಯೇ ಹರಿಯುವ ನೀರು. ಯಮಲೋಕವೆಂಬ ಸಮುದ್ರಗಾಮಿಯಾಗಿ ಆ ನದಿ ಹರಿಯುತ್ತಿತ್ತು. ವಾಲ್ಮೀಕಿಗಳ ಕವಿತಾ ಪ್ರತಿಭೆ ಇಲ್ಲಿ ಗುರುತಿಸಬಹುದು. ಒಳ್ಳೆಯ ದೃಶ್ಯಗಳನ್ನು ವರ್ಣಿಸುವುದು ಸುಲಭ. ಯುದ್ಧದ ಭೀಕರತೆಯನ್ನೂ ಉಪಮೆಗಳನ್ನು ನೀಡಿ ವರ್ಣಿಸುವುದು ಕವಿತಾಶಕ್ತಿಯ ಅಪ್ರತಿಮ ಶಕ್ತಿ._
*ಯಕೃತ್ಪ್ಲೀಹಮಹಾಪಂಕಾಂ ವಿನಿಕೀರ್ಣಾಂತ್ರಶೈವಲಾಮ್ ಭಿನ್ನಕಾಯಶಿರೋಮೀನಾಮಂಗಾವಯವಶಾದ್ವಲಾಮ್*
_ಆ ನದಿಯ ವರ್ಣನೆ ಮುಂದೆ ಸಾಗುತ್ತದೆ. ಯಕೃತ್ತು, ಪ್ಲೀಹಗಳೆಂಬ ಮಾಂಸಖಂಡಗಳೇ ಕೆಸರಿನ ರಾಶಿ. ಅಸ್ತವ್ಯಸ್ತವಾಗಿ ಹರಡಿದ ಕರುಳುಗಳೇ ನೀರಿನ ಪಾಚಿ. ತರಿದುರುಳಿದ ದೇಹದ ಖಂಡಗಳೂ ತಲೆಗಳೂ ರಕ್ತದಲ್ಲಿ( ನೀರಿನಲ್ಲಿ) ಹರಿದಾಡುವ ಮೀನುಗಳು. ಮುರಿದು ಬಿದ್ದ ಕೈ ಬೆರಳು, ಅಂಗಾಂಗಗಳೇ ನದಿಯ ಅಲ್ಲಲ್ಲಿ ಬೆಳೆದ ಹುಲ್ಲುಗಳು. ಹದ್ದುಗಳು ರಣನದಿಯಲ್ಲಿ ಹಾರುವ ಹಂಸಗಳು. ಕಂಕ ಅಥವಾ ರಣಹದ್ದುಗಳು ಸಾರಸಪಕ್ಷಿಗಳು. ತೇಲಾಡುವ ಯೋಧರ ಮೇದಸ್ಸೇ ರಣನದಿಯ ನೊರೆ. ಪೆಟ್ಟು ತಿಂದವರ ಕೂಗೇ ನದಿಯ ಭೋರ್ಗರೆತ. ಇಂತಹ ಭಯಂಕರ ನದಿಯನ್ನು ಹೇಡಿಗಳಾರೂ ಪ್ರವೇಶಿಸುವುದೂ ಅಸಾಧ್ಯವಾಗಿತ್ತು. ಯುದ್ಧದ ಪ್ರತ್ಯಕ್ಷದರ್ಶಿಯಂತೆ ತನ್ನ ಕವಿತಾ ಶಕ್ತಿಯಿಂದ ವರ್ಣಿಸುವ ವಾಲ್ಮೀಕಿಗಳು ಮಹಾಕವಿಗಳೇ ಸರಿ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ