ಮಹಾಭಾರತ ೪೩

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೩

*ಐರಾವತಕುಲೇ ಜಾತಃ ಕೌರವ್ಯೋ ನಾಮ ಪನ್ನಗಃ  ತಸ್ಯಾಸ್ಮಿ ದುಹಿತಾ ಪಾರ್ಥ ಉಲೂಪೀ ನಾಮ ಪನ್ನಗೀ*

_ತನ್ನನ್ನು ಸೆಳೆದುಕೊಂಡು ಹೋದ ಬೆಡಗಿಯನ್ನು ಕಂಡು ಅಚ್ಚರಿಗೊಂಡ ಗಂಡರಗಂಡ ಪಾರ್ಥನು ಯಾರು ನೀನು ಎಂದು ಕೇಳಿದಾಗ ಆಕೆ ತನ್ನ ಪರಿಚಯ ಮಾಡಿಕೊಳ್ಳುವಳು. ನಾನು ಐರಾವತ ಕುಲದಲ್ಲಿ ಹುಟ್ಟಿದ ಕೌರವ್ಯನೆಂಬ ನಾಗನ ಮಗಳು. ಮನ್ಮಥ ಪೀಡಿತಳಾಗಿ ನಿನ್ನನ್ನು ಮೊರೆಹೊಂದಿದ್ದೇನೆ._

*ಬ್ರಹ್ಮಚರ್ಯಮಿದಂ ಭದ್ರೇ ಮಮ ದ್ವಾದಶವಾರ್ಷಿಕಮ್ ಧರ್ಮರಾಜೇನ ಚಾದಿಷ್ಟಂ ನಾಹಮಸ್ಮಿ ಸ್ವಯಂವಶಃ*

_ನಿನ್ನ ಕೋರಿಕೆ ಸರಿಯಾದುದೇ. ಆದರೆ ಅಣ್ಣನಿಂದ ನಾನು ಹನ್ನೆರಡು ವರ್ಷಗಳ ಕಾಲ ಬ್ರಹ್ಮಚರ್ಯಕ್ಕಾಗಿ ಆದೇಶಿಸಲ್ಪಟ್ಟಿರುವೆ. ನಾನು ಸ್ವತಂತ್ರನಲ್ಲ. ನಿನಗೂ ಪ್ರಿಯವನ್ನು ಉಂಟು ಮಾಡಲು ಬಯಸುತ್ತೇನೆ. ಆದರೆ ಹಿಂದೆಂದೂ ಸುಳ್ಳು ಹೇಳಿಲ್ಲ . ನನ್ನ ಬ್ರಹ್ಮಚರ್ಯ ಕೆಡಬಾರದು, ಅಂತೆಯೇ ನಿನಗೂ ಬೇಸರವಾಗಬಾರದು ಅಂತಹ ಮಾರ್ಗವನ್ನು ತಿಳಿಸು ಎಂದನು ಪಾರ್ಥ. ಪಾರ್ಥ ಲೋಕೋತ್ತರ ತೇಜಸ್ಸನ್ನು ಹೊಂದಲು ಅವನ ಇಂತಹ ಧರ್ಮನಿಷ್ಠೆಯೇ ಕಾರಣವಾಗಿದೆ._

*ಪ್ರಾಣದಾನಾನ್ಮಹಾಬಾಹೋ ಚರ ಧರ್ಮಮನುತ್ತಮಮ್ ಶರಣಂ ಚ ಪ್ರಪನ್ನಾಸ್ಮಿ ತ್ವಾಮದ್ಯ ಪುರುಷೋತ್ತಮ*

_ಅರ್ಜುನ, ಧರ್ಮವನ್ನು ಹಾಗೂ ನಿನ್ನ ಸ್ಥಿತಿಯನ್ನೆರಡನ್ನೂ ನಾನು ಬಲ್ಲೆನು. ಆರ್ತರ ರಕ್ಷಣೆ ಮಾಡಿದರೆ ಲೋಪ ಬರದು. ಒಂದು ವೇಳೆ ಧರ್ಮಕ್ಕೆ ಸೂಕ್ಷ್ಮವಾದ ವ್ಯತಿಕ್ರಮ ಅಥವಾ ಚ್ಯುತಿ ಉಂಟಾದರೂ ಪ್ರಾಣದಾನ ಮಾಡುವ ಕಾರಣ ಅದು ಶ್ರೇಷ್ಠ ಧರ್ಮವೇ ಆಗುತ್ತದೆ. ನಿನ್ನನ್ನೇ ಅನುರಕ್ತಳಾಗಿರುವ ನನ್ನನ್ನು ವರಿಸು. ಸತ್ಪುರುಷರಿಗೆ ಇದು ಸಮ್ಮತ. ನೀನು ವರಿಸದಿದ್ದರೆ ನಾನು ಮೃತಳಾದೆನೆಂದು ನಿಶ್ಚಯಿಸು. ಹೀಗೆ ನಿವೇದಿಸಿದ ಅವಳ ಮಾತಿನಂತೆ ಧರ್ಮವನ್ನು ನಿಮಿತ್ತ ಮಾಡಿಕೊಂಡು ಅವಳನ್ನು ವರಿಸಿ ಆ ರಾತ್ರಿ ಅಲ್ಲಿಯೇ ಕಳೆದು ಮರುದಿನ ತನ್ನ ಪಯಣವನ್ನು ಮುಂದುವರೆಸಿದನು. ಧರ್ಮದ ಗತಿ ಹೇಗೆಂದು ಸುಲಭದಲ್ಲಿ ನಿರ್ಣಯಿಸಲು ಅಸಾಧ್ಯ. ಅದು ಸಮಯ ಸಂದರ್ಭ ನೋಡಿ ತೀರ್ಮಾನಿಸುವಂತಹದು. ನಾವು ಯಾವುದೋ ಗ್ರಂಥ ಓದಿಯೋ ಅಥವಾ ಗುರುಗಳ ಮಾತು ಕೇಳಿಯೋ ಧರ್ಮ ಹೀಗೆ ಎಂದು ನಿರ್ಣಯಿಸಿದರೆ ಕೆಲವೊಮ್ಮೆ ಅಧರ್ಮಾಚರಣೆಯ ಪಾಪ ಒದಗೀತು. ಹಾಗಾಗಿ ಧರ್ಮದ ನಿರ್ಣಯದ ಬಗ್ಗೆ ಬಹಳ ಜಾಗರೂಕತೆ ಅವಶ್ಯಕ._


http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩