ಮಹಾಭಾರತ ೪೮

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೮

*ತೌ ವಿಹೃತ್ಯ ಯಥಾಕಾಮಂ ಪ್ರಭಾಸೇ ಕೃಷ್ಣಪಾಂಡವೌ ಮಹೀಧರಂ ರೈವತಕಂ ವಾಸಾಯೈವಾಭಿಜಗ್ಮತುಃ*

_ಪ್ರಭಾಸದಿಂದ ಕೃಷ್ಣನ ಆಮಂತ್ರಣದಂತೆ ಅರ್ಜುನನು ರೈವತಕ ಪರ್ವತಕ್ಕೆ ತೆರಳಿದನು. ಅಲ್ಲಿ ಕೃಷ್ಣನು ಪಾರ್ಥನಿಗಾಗಿ ಅನೇಕ ಭಕ್ಷ್ಯ-ಭೋಜ್ಯಗಳನ್ನೂ, ನರ್ತಕರನ್ನೂ, ವಾದ್ಯಗಾರರನ್ನೂ ಕರೆಸಿ ಬಹುದಿನಗಳ ಕಾಲ ಬಗೆಬಗೆಯ ಶಯ್ಯೆಗಳಿಂದಲೂ ಅರ್ಜುನನನ್ನು ಸತ್ಕರಿಸುತ್ತಾನೆ. ಪಾರ್ಥನನ್ನು ದ್ವಾರಕೆಗೂ ಕರೆದೊಯ್ದು ಪಟ್ಟಣಿಗರಿಂದ ಅವನನ್ನು ಸನ್ಮಾನಿಸಿ ಕೃಷ್ಣನ ಭವನದಲ್ಲಿ ಅನೇಕ ದಿನಗಳ ಕಾಲ ರಮಣೀಯವಾದ ಭವನದಲ್ಲಿ ಅರ್ಜುನನು ಸುಖವಾಗಿ ಕಳೆದನು. ಭಗವಂತನು ಸತ್ಕಾರ ಮಾಡುವ  ರೀತಿ ನಮಗೆಲ್ಲ ಕಲಿಯುವಂತಹದ್ದು. ಅರ್ಜುನನಿಗೆ ಸತ್ಕರಿಸಿ ಕೃಷ್ಣನಿಗೆ ಆಗಬೇಕಾದ್ದೇನೂ ಇಲ್ಲ. ಅವನು ಅರ್ಜುನನನ್ನು ಮೀರಿ ಆಗಲೇ ಪ್ರಕಾಶಿತನಾಗಿದ್ದ. ಆದರೂ ಭಕ್ತ ಹಾಗೂ ಅತ್ತೆಯ ಮಗ ಎನ್ನುವ ಕಾರಣಗಳಿಂದ ಭಗವಂತನ ವಿಶೇಷ ಆದರಕ್ಕೆ ಅರ್ಜುನನು ಪಾತ್ರನಾಗುತ್ತಾನೆ. ಪಾಂಡವರಲ್ಲಿ ಉಳಿದ ನಾಲ್ವರಿಗೆ ಈ ಸೌಭಾಗ್ಯ ಸಿಗುವುದಿಲ್ಲ. ಅಲ್ಲಿ ನೆರೆದ ಭೋಜರು, ಅಂಧಕರು, ವೃಷ್ಣಿಗಳೆಲ್ಲರೂ ಅರ್ಜುನನನ್ನು ಆದರಿಸುತ್ತಾರೆ. ಅನಂತರ ಆ ರೈವತಕ ಪರ್ವತದಲ್ಲಿ ಬಹುದೊಡ್ಡ ಉತ್ಸವವೊಂದು ನಡೆಯುತ್ತದೆ. ಇದನ್ನು ಈಗ *ಗಿರಿನಾರ್* ಹೆಸರಿನಿಂದ ಕರೆಯುತ್ತಾರೆ. ಗುಜರಾತ್ ನ  ಸಮೀಪದಲ್ಲಿ  ಇದೆ ಈ ಪರ್ವತ._

*ಪ್ರಾಸಾದೈ ರತ್ನಚಿತ್ರೈಶ್ಚ ಗಿರೇಸ್ತಸ್ಯ ಸಮಂತತಃ ಸ ದೇಶಃ ಶೋಭಿತೋ ರಾಜನ್ದೀಪವೃಕ್ಷೈಶ್ಚ ಸರ್ವಶಃ*

_ಈ ಶ್ಲೋಕದಲ್ಲಿ ಉಲ್ಲೇಖಿತವಾಗಿರುವ ದೀಪವೃಕ್ಷ ಎಂದರೇನು ಎಂಬ ಸಂಶಯ ಉಂಟಾಗುತ್ತದೆ. ಆ ಪರ್ವತದ ಸುತ್ತಲಿನ ಪ್ರದೇಶಗಳನ್ನು ರತ್ನಗಳಿಂದ ಅಲಂಕರಿಸಲಾಗಿತ್ತು. ಮಹಡಿ ಮನೆಗಳನ್ನು ಅದೇ ರೀತಿ ಸಿಂಗರಿಸಲಾಗಿತ್ತು. ಅಷ್ಟಲ್ಲದೇ ದೀಪವೃಕ್ಷಗಳಿಂದ ಶೋಭಿಸುತ್ತಿತ್ತು. ಈಗ ರಸ್ತೆಬದಿ ದೊಡ್ಡ ಹೋಟೆಲ್ಗಳಲ್ಲಿ, ಗೃಹಪ್ರವೇಶದ ಸಂದರ್ಭದಲ್ಲಿ, ಹಬ್ಬದ ಸಂದರ್ಭದಲ್ಲಿ ಹಾಕುವ ಸೀರಿಯಲ್ ಲೈಟ್ ಗಳಂತೆ ಆಗಲೂ ಯಾವುದೋ ಬಗೆಯ ದೀಪಗಳು ಇದ್ದಿರಬೇಕು,ಅಥವಾ ಮಣ್ಣಿನ ದೀಪಗಳನ್ನು ನೇತುಹಾಕಿಯೋ ಇನ್ನಾವುದೋ ಬೇರೆ ರೀತಿಯಲ್ಲೋ ಸಿಂಗರಿಸುತ್ತಿದ್ದರು. ಅದರ ಪರಿಷ್ಕೃತ ರೂಪ ಈಗಿನ ಮಿಣಿಮಿಣಿ ಸಾಲು ದೀಪಗಳು._

*ತತೋ ಹಲಧರೋ ಕ್ಷೀಬೋ‌ ರೇವತೀಸಹಿತಃ ಪ್ರಭುಃ ಅನುಗಮ್ಯಮಾನೋ ಗಂಧರ್ವೈರಚರತ್ತತ್ರ ಭಾರತ*

_ಮಹಾಭಾರತದಲ್ಲಿ ಬಲರಾಮನ ಮದ್ಯಪಾನದ ಉಲ್ಲೇಖ ನನಗೆ ಕಂಡಂತೆ ಇಲ್ಲ. ಆದರೆ ಈ ಶ್ಲೋಕದಲ್ಲಿ ಅವನು ಮತ್ತನಾಗಿ ರೇವತಿಯೊಡನೆ ಬಂದಿದ್ದನ್ನು ವರ್ಣಿಸಿದ್ದಾರೆ. ಮತ್ತನಾಗಬೇಕಾದಲ್ಲಿ ಅದಕ್ಕೆ ಕಾರಣವಾದ ಏನನ್ನಾದರೂ ಸೇವಿಸಲೇ ಬೇಕಲ್ಲವೇ! ನೂರಾರು-ಸಾವಿರಾರು ಪಟ್ಟಣಿಗರು, ವೃಷ್ಣಿ ವೀರರು ಪರಿಚಾರಕರೊಡನೆ ಕಾಲ್ನಡಿಗೆಯಲ್ಲೂ, ಸುವರ್ಣ ಭೂಷಿತ ರಥಗಳಲ್ಲೂ ಅಲ್ಲಿಗೆ ಬಂದು ಸೇರಿ ಪತ್ನಿಯರೊಡಗೂಡಿ ಆನಂದಿಸಿದರು. ಉಗ್ರಸೇನನು ಸಾವಿರಾರು ಸ್ತ್ರೀಯರೊಡನೆ ಅಲ್ಲಿಗೆ ಬಂದನು. ಕಥೆ ಮುಂದುವರಿವ ಬಗೆ ಮುಂದೆ....._


http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩