ರಾಮಾಯಣ ೪೯

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೪೯

*ಸುಲಭಾಃ ಪುರುಷಾ ರಾಜನ್ಸತತಂ ಪ್ರಿಯವಾದಿನಃ ಅಪ್ರಿಯಸ್ಯ ತು ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ*

_ವಿಭೀಷಣ ರಾವಣನಿಗೆ ಉತ್ತರಿಸುತ್ತಿದ್ದಾನೆ. ರಾಜನೇ, ನೀನು ಧರ್ಮವನ್ನು ಬಿಟ್ಟಿದ್ದರೂ ನನ್ನ ಅಣ್ಣನಾಗಿರುವುದರಿಂದ ಹಾಗೂ ತಂದೆಯ ಸಮಾನನಾಗಿರುವುದರಿಂದ  ನೀನು ಎಷ್ಟು ಬೈದರೂ ಸಹಿಸಿಕೊಂಡು ನಾನು ನೀತಿಯನ್ನೇ ಹೇಳುವೆನು. ರಾಜನೇ, ಯಾವಾಗಲೂ ಪ್ರಿಯವಾದುದನ್ನೇ ಹೇಳುವ ಪುರುಷರು ಸುಲಭವಾಗಿ ಎಲ್ಲೆಡೆ ಸಿಗುತ್ತಾರೆ. ಆದರೆ ಅಪ್ರಿಯವಾದರೂ ಹಿತವಾದ ಮಾತುಗಳನ್ನು ಹೇಳುವವರಾಗಲೀ, ಕೇಳುವವರಾಗಲೀ ದುರ್ಲಭರೇ ಸರಿ. ಎಷ್ಟು ಸತ್ಯವಾದ ಮಾತು. ನಮಗೆ ಸಂತೋಷವಾಗಬೇಕೆಂದು ಸಾಕಷ್ಟು ಜನ ನಮ್ಮೆದುರಿಗೆ ಹೊಗಳುತ್ತಾರೆ ಅಥವಾ ನಾವು ಇಷ್ಟಪಡುವಂತೆ ಮಾತಾಡುತ್ತಾರೆ. ಆದರೆ ನಾವು ಇಷ್ಟಪಡದಿರುವ ಅಥವಾ ನಮಗೆ ಅಪ್ರಿಯವಾದ ಆದರೆ ನಮಗೆ ಉಪಯೋಗ ಆಗುವ ಮಾತನ್ನು ಆಡುವವರು ಬಹಳ ವಿರಳ. ಅಂತಹವರ ಮಾತನ್ನು ನಾವು ಒಪ್ಪುವುದೂ ಅಥವಾ ಗೌರವಿಸುವುದೂ ಕಡಿಮೆ. ಹಾಗಾಗಿ ಪಥ್ಯ ಯಾವುದೋ ಅದು ನಮಗೆಂದಿಗೂ ಕಹಿ. ಭಾರವಿ ಇದನ್ನೇ ಹೇಳಿದ್ದು  *ಹಿತಂ ಮನೋಹಾರಿ ಚ ದುರ್ಲಭಂ ವಚಃ* ಹಿತವೂ ಮನೋಹರವೂ ಆದ ಮಾತು ಹೇಳುವವರೂ ಕಡಿಮೆ, ಕೇಳಿ ಆಚರಿಸುವವರಂತೂ ಇನ್ನೂ ಕಡಿಮೆ._

*ಬದ್ಧಂ ಕಾಲಸ್ಯ ಪಾಶೇನ ಸರ್ವಭೂತಾಪಹಾರಿಣಾ ನ ನಶ್ಯಂತಮುಪೇಕ್ಷೇಯಂ ಪ್ರದೀಪ್ತಂ ಶರಣಂ ಯಥಾ*

_ಸಮಸ್ತ ಪ್ರಾಣಿಗಳ ಪ್ರಾಣಗಳನ್ನೂ ಅಪಹರಿಸುವ ಕಾಲನಿಂದ ಬಂಧಿಸಲ್ಪಟ್ಟು ವಿನಾಶ ಹೊಂದುತ್ತಿರುವ ನಿನ್ನ ವಿಷಯದಲ್ಲಿ ಉರಿದುಹೋಗುತ್ತಿರುವ ಮನೆಯನ್ನು ನೋಡುತ್ತಿರುವವರು ಹೇಗೆ ಉದಾಸೀನರಾಗಿರುವುದಿಲ್ಲವೋ ಹಾಗೆಯೇ ನಾನು ಉಪೇಕ್ಷೆಯನ್ನು ತೋರಲಿಲ್ಲ. ಯಾರದಾದರೂ ಆಪ್ತರ ಮನೆಗೆ ಬೆಂಕಿ ಬಿದ್ದಾಗಲೂ ನಾವು ಸುಮ್ಮನಿರುತ್ತೇವೆಯೇ? ಕೂಡಲೇ ಕಾರ್ಯಪ್ರವೃತ್ತರಾಗುತ್ತೇವೆ. ನಿನ್ನ ಪ್ರಾಣವೂ ಕಾಲನಿಂದ ಅಪಹರಿಸಲ್ಪಡುತ್ತಿರುವುದನ್ನೂ ನೋಡಿಯೂ ನಾನು ಹೇಗೆ ಸುಮ್ಮನಿರಲಿ? ನಿನಗೆ ಹಿತಕರವಾದ ಮಾತನ್ನೇ ಆಡುವೆನು. ಕಾಲನು ಬಡವ ಬಲ್ಲಿದ ಜ್ಞಾನಿ ಪರಾಕ್ರಮಿ ಹೀಗೆ ಯಾರನ್ನೂ ನೋಡದೇ ತನ್ನ ಪಾಶದಿಂದ ಬಂಧಿಸುವನು. ಹಾಗಿರುವಾಗ ನೀನು ಹಾಗೆ ಬಂಧನಕ್ಕೊಳಗಾಗುವುದು ನನಗಿಷ್ಟವಿಲ್ಲ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩