ಮಹಾಭಾರತ

📙🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾📙

_ಕ್ಷತ್ರಿಯರ ನೇತ್ರವನ್ನು ಔರ್ವನು ಮತ್ತೆ ಅನುಗ್ರಹಿಸುವನು. ಅದಾದ ನಂತರ ತನ್ನ ಪಿತೃಗಳ ನಾಶಕ್ಕೆ ಎಡೆ ಮಾಡಿಕೊಟ್ಟ ಮೂರು ಲೋಕಗಳ ಬಗ್ಗೆ ಕೋಪ ತಾಳಿ ಕಠೋರ ತಪಸ್ಸನ್ನು ಆರಂಭಿಸಿದನು. ಅವನ ತಪವು ದೇವಾಸುರಮನುಷ್ಯರನ್ನೆಲ್ಲಾ ಸುಡಲು ಪ್ರಾರಂಭಿಸಿತು. ತರುವಾಯ ಔರ್ವನ ಗತಿಸಿದ ಪಿತೃಗಳೆಲ್ಲರೂ ಪಿತೃಲೋಕದಿಂದ ಇಳಿದು ಇವನ ಬಳಿಗೆ ಬಂದು ಹೀಗೆಂದರು. " ಮಗು, ಲೋಕಗಳ ಮೇಲೆ ಕೋಪ ತಾಳಬೇಡ. ನಿನ್ನ ಕ್ರೋಧವನ್ನು ತಡೆದುಕೊ. ನಮ್ಮ ಆಯುಸ್ಸು ಬಹಳ ಹೆಚ್ಚಿದಾಗ ನಾವಾಗಿಯೇ ಕ್ಷತ್ರಿಯರಿಂದ ವಧೆ ಬಯಸಿ ಭೃಗುವಂಶದವರ ಮನೆಯಲ್ಲಿ ಹಣವನ್ನು ಹೂತಿಟ್ಟು ಅವರಿಂದ ನಾಶ ಹೊಂದಿದೆವು. ಮೃತ್ಯುವು ನಮ್ಮನ್ನೊಯ್ಯಲು ಅಸಮರ್ಥನಾದ ಕಾರಣ ನಾವು ಹೀಗೆ ಮಾಡಬೇಕಾಯಿತು. *ಆತ್ಮಹಾ ಚ ಪುಮಾಂಸ್ತಾತ ನ ಲೋಕಾಲ್ಲಭತೇ ಶುಭಾನ್*_
_ಆತ್ಮಹತ್ಯೆ ಮಾಡಿಕೊಳ್ಳುವ ಪುರುಷನಿಗೆ ಪುಣ್ಯಲೋಕಗಳು ದೊರಕುವುದಿಲ್ಲ. ಹಾಗಾಗಿ ನಾವು ಯೋಚಿಸಿ ಕ್ಷತ್ರಿಯರ ಕೈಯಲ್ಲಿ ಮರಣ ಹೊಂದಿದೆವು.ನೀನು ಈಗ ಮಾಡಹೊರಟ ಕರ್ಮ ನಮಗೆ ಪ್ರಿಯವಲ್ಲ. ಈ ಕರ್ಮವನ್ನು ಇಲ್ಲಿಗೇ ನಿಲ್ಲಿಸು. ಯಾವ ಕ್ಷತ್ರಿಯರೂ, ಏಳು ಲೋಕಗಳೂ ಕೂಡ ನಮ್ಮ ತಪಸ್ಸನ್ನೂ ತೇಜಸ್ಸನ್ನೂ ಹಾಳು ಮಾಡಲಾರವು. ನೀನು ಕೋಪವನ್ನು ಮೊದಲು ಗೆಲ್ಲು."_

_ಆಗ ಆ ಬಾಲಕ ಹೀಗೆನ್ನುವನು. " ಪಿತೃಗಳೇ, ಲೋಕಗಳನ್ನು ನಾಶ ಮಾಡುವ ನನ್ನ ಪ್ರತಿಜ್ಞೆ ಹೇಗೆ ವ್ಯರ್ಥವಾದೀತು! ನನ್ನ ಕೋಪ ಮತ್ತು ಪ್ರತಿಜ್ಞೆ ವ್ಯರ್ಥವಾಗುವುದಾದರೆ ನಾನು ಬದುಕಿ ಏನು ಪ್ರಯೋಜನ?  *ನಾಲಂ ಸ ಮನುಜಃ ಸಮ್ಯಕ್ತ್ರಿವರ್ಗಂ ಪರಿರಕ್ಷಿತುಮ್* ಸರಿಯಾದ ಕಾರಣದಿಂದ ಉಂಟಾದ ಕೋಪವನ್ನು ತಣಿಸಿದ ವ್ಯಕ್ತಿ ಧರ್ಮಾರ್ಥಕಾಮಗಳನ್ನು ರಕ್ಷಿಸಿಕೊಳ್ಳಲು ಶಕ್ತನಾಗುವುದಿಲ್ಲ. *ಅಶಿಷ್ಟಾನಾಂ ನಿಯಂತಾಹಿ ಶಿಷ್ಟಾನಾಂ ಪರಿರಕ್ಷಿತಾ ಸ್ಥಾನೇ ರೋಷಃ ಪ್ರಯುಕ್ತಃ* ದುಷ್ಟರನ್ನು ನಿಗ್ರಹಿಸಲು ಶಿಷ್ಟರನ್ನು ರಕ್ಷಿಸಲು ಕೋಪವನ್ನು ತೋರಲೇಬೇಕು. ಕ್ಷತ್ರಿಯರ ಕ್ರೂರತೆಯನ್ನು ದೇವತೆಗಳೇ ಆದಿಯಾಗಿ ಸಹಿಸಿಕೊಂಡು ಎಲ್ಲರೂ ಸುಮ್ಮನಿದ್ದಾಗ ನನಗೆ ಕೋಪ ಬಂದಿತು._

*ಪ್ರತಿಷೇದ್ಧಾ ಹಿ ಪಾಪಸ್ಯ ಯದಾ ಲೋಕೇಷು ವಿದ್ಯತೇ ತದಾ ಸರ್ವೇಷು ಲೋಕೇಷು ಪಾಪಕೃನ್ನೋಪಪದ್ಯತೇ, ಯದಾ ತು ಪ್ರತಿಷೇದ್ಧಾರಂ ಪಾಪೋ ನ ಲಭತೇ ಕ್ವಚಿತ್ ತಿಷ್ಠಂತಿ ಬಹವೋ ಲೋಕೇ ತದಾ ಪಾಪೇಷು ಕರ್ಮಸು, ಜಾನನ್ನಪಿ ಚ ಯಃ ಪಾಪಂ ಶಕ್ತಿಮಾನ್ನ ನಿಯಚ್ಛತಿ ಈಶಃ ಸನ್ಸೋಪಿ ತೇನೈವ ಕರ್ಮಣಾ ಸಂಪ್ರಯುಜ್ಯತೇ*

_ತನ್ನ ಮಾತನ್ನು ಮುಂದುವರೆಸುತ್ತಾ ಈ ಅಮೂಲ್ಯವಾದ ಮಾತನ್ನು ಹೇಳುವನು. ಲೋಕದಲ್ಲಿ ಪಾಪವನ್ನು ನಿಷೇಧಿಸಿವವನು ಇರುವಾಗ ಯಾವ ಲೋಕದಲ್ಲಿಯೂ ಪಾಪ ಕರ್ಮ ಮಾಡುವವನು ಇರಲಾರ. ಪಾಪದ ಬಗೆಗೆ ಭಯವೇ ಇಲ್ಲದಿದ್ದಾಗ ಅದು ತಪ್ಪೆಂಬ ಭಾವನೆಯೇ ಇಲ್ಲದಿದ್ದಾಗ ಲೋಕದಲ್ಲಿ ಪಾಪಿಗಳೇ ಹೆಚ್ಚಾಗುವರು. ಸಮರ್ಥನೂ ತಿಳಿದೂ ಪಾಪವನ್ನು ತಡೆಯದಿದ್ದರೆ ರಾಜನಾಗಿದ್ದರೂ ಅವನಿಗೆ ಪಾಪ ಅಂಟಿಕೊಳ್ಳುವುದು. ಹಾಗಾಗಿ ನಾನು ಸಮರ್ಥನಾಗಿಯೂ ಸುಮ್ಮನಿರಲೇಕೆಂದು ಕೋಪಗೊಂಡೆ. ಇದನ್ನು ಹೇಗೆ ನಿಗ್ರಹಿಸಬೇಕೆಂದು ನೀವೇ ಅನುಗ್ರಹಿಸಬೇಕು ಎಂದನು. ಆಗ ಪಿತೃದೇವತೆಗಳು ಈ ಕೋಪವನ್ನು ನೀರಿನಲ್ಲಿ ಬಿಟ್ಟುಬಿಡು. ಎಲ್ಲಾ ರಸಗಳೂ ಜಲಮಯವಾದವು. ಸಮಸ್ತ ಜಗತ್ತೂ ಜಲಮಯವೇ. ಹಾಗಾಗಿ ಈ ಕ್ರೋಧಾಗ್ನಿಯನ್ನು ನೀರಿನಲ್ಲಿ ಬಿಡು. ಅದು ನೀರನ್ನು ಸುಡುತ್ತಾ ಮಹಾಸಮುದ್ರದಲ್ಲಿ ನೆಲೆಸಲಿ" ಎಂದು. ಹಾಗೆ ಔರ್ವನಿಂದ ತ್ಯಕ್ತವಾದ ಆ ಕೋಪವೇ ಬಡವಾಗ್ನಿಯಾಗಿ ಕುದುರೆಯ ತಲೆಯ ರೂಪದಲ್ಲಿ ಬೆಂಕಿಯನ್ನು ಕಾರುತ್ತಾ ನೀರು ಕುಡಿಯುವುದೆಂದು ವೇದಜ್ಞರು ಹೇಳುತ್ತಾರೆ. ವಸಿಷ್ಠರು  ಈ ಕಥೆಯನ್ನು ತನ್ನ ಕೋಪಗೊಂಡ ಮಗನ ಮಗನಾದ ಪರಾಶರನಿಗೆ ಹೇಳುತ್ತಾ ನೀನು ಅಪ್ಪನ ಸಾವಿನ ಕೋಪವನ್ನು ತ್ಯಜಿಸು. ಒಳ್ಳೆಯದಾಗುವುದು ಎಂದನು. ಅಜ್ಜನ ಮಾತಿನಂತೆ ಪರಾಶರರು ಆಕ್ಷಣಕ್ಕೇನೋ ಕೋಪವನ್ನು ತಡೆದರು. ಮುಂದೆ ಏನಾಯಿತೆಂಬುದನ್ನು ಮುಂದಿನ ಕಥಾಭಾಗದಲ್ಲಿ ವಿಮರ್ಶಿಸೋಣ._

_ಈ ಕಥೆ ಪಾಪ ಮಾಡುವವರಿಗೆಲ್ಲ ಒಂದು ಪಾಠ. ತಿಳಿದೂ ಅಥವಾ ತಿಳಿಯದೇ ಕಾಯಾ ವಾಚಾ ಮನಸಾ ಮಾಡಿದ ಪಾಪಕ್ಕೆ ಎಂದಾದರೊಂದು ದಿನ ಫಲ ದೊರಕುವುದು. ಕ್ಷತ್ರಿಯರು ಅಧಿಕಾರ ಬಲದಿಂದ, ಶೌರ್ಯದಿಂದ ಎಷ್ಟು ಮೆರೆದರೂ ತಪಸ್ಸಿನ ತೇಜಸ್ಸಿನ ಮುಂದೆ ಶರಣಾಗಬೇಕಾಯಿತು. ಪಿತೃಗಳ ಮಧ್ಯಪ್ರವೇಶ ಆಗದಿದ್ದರೆ ದೇವತೆಗಳಿಗೂ ತಮ್ಮ ಸ್ಥಾನ ಅಭದ್ರವೆನಿಸುತ್ತಿತ್ತು. ಏಕೆಂದರೆ ಸುಮ್ಮನೆ ನೋಡುತ್ತಿದ್ದರಿಂದ ಅವರೂ ಪಾಪಭಾಗಿಗಳಾಗಿದ್ದರು. ಹಾಗಾಗಿ ಸ್ವತಃ ನಾವು ಪಾಪ ಮಾಡಬಾರದು.ನಮ್ಮೆದುರು ಇನ್ನೊಬ್ಬ ಪಾಪ ಮಾಡುತ್ತಿದ್ದಾಗಲೂ ತನಗೆ ಸಂಬಂಧ ಇಲ್ಲವೆಂದು ಸುಮ್ಮನೆ ಕೂಡಲೂ ಬಾರದು. ತಪ್ಪು ನಡೆದಾಕ್ಷಣ ಶತ್ರುವಾದರೂ ಮನವರಿಕೆ ಮಾಡಬೇಕು. ಅದು ನಮ್ಮ ಕರ್ತವ್ಯ.ಯಾರಿಗೋ ನಾವು ಮಾಡುವ ಉಪಕಾರವಲ್ಲ. ಹಾಗಾಗಿ ಔರ್ವನಂತೆ ಸಾತ್ವಿಕ ಕೋಪ ನಮಗಿರಲಿ. ನಮ್ಮ ನಿಮ್ಮ ಎಲ್ಲರ ಪಾಪವನ್ನು ಅದು ಸುಡಲಿ ಎಂದು ಆಶಿಸೋಣವೇ!_



📗 ಆಕರ - ಉದ್ಯೋಗಪರ್ವ ೧೭೨ ಅಧ್ಯಾಯ. ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩